ಬೈಟುಕಾಫಿ

LIFE OF PI ಆಸ್ಕರ್ನಾಟಕ

ಹುಬ್ಬೇರಿಸಿಬಿಟ್ಟ ಹುಬ್ಬಳ್ಳಿಯ ಹೈದ
ಇದು ಲೈಫ್ ಆಫ್ 'ತನ್ಸೀರ್ ಅಹ್ಮದ್ ಬಂಗ್ಲೆವಾಲೆ'!
ಕನ್ನಡಿಗ, ಹುಬ್ಬಳ್ಳಿಯ ಹೈದ... ಈಗ ಅವನು ಜಗ ಮೆಚ್ಚಿದ ಮಗ. ವಿಶ್ವವೇ ಕಣ್ಣರಳಿಸಿ ನೋಡುವ ಆಸ್ಕರ್ ಗೌರವವನ್ನು ತಲೆಮೇಲೆ ಹೊತ್ತ ತನ್ಸೀರ್, ಕಿರುನಗೆ ಬೀರುತ್ತಿರುವ ಕಿರಿಯ. 'ಲೈಫ್ ಆಫ್ ಪೈ' ಚಿತ್ರಕ್ಕೆ ಅತ್ಯುತ್ತಮ ಅನಿಮೇಶನ್ ವಿಷುಯಲ್ ಎಫೆಕ್ಟ್ ನೀಡಿ, ಕೋಟಿ ಕೋಟಿ ಕನ್ನಡಿಗರ ಕಣ್ಣುಗಳೊಳಗೆ ಕನಸಾಗಿ ಅರಳಿದ ಕುವರ.
ತನ್ಸೀರ್ ಬಣ್ಣದ ಲೋಕದಲ್ಲಿ ಸಾಧನೆಯ ರೇಖೆ ಮೂಡಿಸಿದ್ದು ಇದೇ ಮೊದಲಲ್ಲ. 2007ರಲ್ಲಿ 'ದಿ ಗೋಲ್ಡನ್ ಕ್ಯಾಂಪಸ್'ಗೂ ಅತ್ಯುತ್ತಮ ಅನಿಮೇಶನ್ ನೀಡಿ ಆಸ್ಕರ್ ಗಿಟ್ಟಿಸಿಕೊಂಡಿದ್ದ. ತನ್ಸೀರ್ನ ಅದಮ್ಯ ಆಸೆ, ತಂದೆಯ ಕಲಾದೃಷ್ಟಿ... ಇವೆರಡೂ ಆತನನ್ನೂ ಆಸ್ಕರ್ನ ಎತ್ತರಕ್ಕೆ ಕೊಂಡೊಯ್ದವು.

ಚಿನ್ನದ ಹುಡುಗ
ತನ್ವೀರ್ ಹುಬ್ಬಳ್ಳಿಯ ಸೇಂಟ್ ಮೈಕೆಲ್ ಸ್ಕೂಲಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಗದಗಿನ ಫೈನ್ ಆರ್ಟ್ ಸೊಸೈಟಿಯಲ್ಲಿ ಪದವಿ ಪೂರ್ಣಗೊಳಿಸಿದ. ಕರ್ನಾಟಕ ವಿವಿಯಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ ಕೋರ್ಸ್ನಲ್ಲಿ ಚಿನ್ನದ ಪದಕ ಗಳಿಸಿದ್ದು ಆತನ ಬದುಕಿನ ಚೊಚ್ಚಲ ಹೊಳಪು.
ತನ್ಸೀರ್ನ ತಂದೆ ಸ್ಥಳೀಯ ವಿಜಯ ಮಹಾಂತೇಶ ಕಾಲೇಜಿನಲ್ಲಿ ಪ್ರಾಧ್ಯಾಪಕರು. 2005ರಲ್ಲಿ ರು. 5 ಲಕ್ಷ ಪ್ರವೇಶ ಶುಲ್ಕ ನೀಡಿ ಮುಂಬೈನಲ್ಲಿ ಅನಿಮೇಶನ್ ಕೋರ್ಸ್ಗೆ ಸೇರಿಸಿದರು. ನಂತರ ಮುಂಬೈನ ರಿದಂ ಆ್ಯಂಡ್ ಹೀವ್ಸ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಈತ ಹತ್ತಾರು ಹಾಲಿವುಡ್ ಚಿತ್ರಗಳಿಗೆ ಬಳಸಲಾದ ಅನಿಮೇಶನ್ಗೆ ವಿಷುಯಲ್ ಎಫೆಕ್ಟ್ ನಿರ್ವಹಿಸಿದ. ಸದ್ಯ ತನ್ಸೀರ್ ಲೀಡ್ ಸೀನಿಯರ್ ಅನಿಮೇಟರ್.
ಆಸ್ಕರ್ ಗೆದ್ದ ಖುಷಿಯಲ್ಲಿ 'ಬೈ ಟು ಕಾಫಿ'ಯೊಂದಿಗೆ ಹೀಗೆ ಮಾತನ್ನು ಹರಿಸಿದರು... ತನ್ಸೀರ್ ಅಹ್ಮದ್ ಬಂಗ್ಲೆವಾಲೆ.

'ಲೈಫ್ ಆಫ್ ಪೈ'ಗೂ ಮುನ್ನ ನಿಮ್ಮ ಚಿತ್ರಲೋಕದ ಹಾದಿ ಹೇಳಿ...
2007ರಲ್ಲಿ 'ದಿ ಗೋಲ್ಡನ್ ಕ್ಯಾಂಪಸ್', 'ದಿ ಇನ್ಕ್ರೆಡಿಬಲ್ ಹಲ್ಕ್', 2008ರಲ್ಲಿ 'ಮಮ್ಮಿ-3', 2009ರಲ್ಲಿ 'ಲ್ಯಾಂಡ್ ಆಫ್ ದಿ ಲಾಸ್ಟ್', 'ಅಲಿಯನ್ಸ್ ಇನ್ ದಿ ಆ್ಯಟಿಕ್', 'ನೈಟ್ ಎಟ್ ದಿ ಮ್ಯೂಸಿಯಂ', 'ಅಲ್ವಿನ್ ಆ್ಯಂಡ್ ದಿ ಚಿಪ್ಮಂಕ್ಸ್ ದಿ ಸ್ಕ್ಯೂಯಲ್', 2010ರಲ್ಲಿ 'ಮಾರ್ಮಾಡ್ಯೂಕ್', 'ಯೋಗಿ ಬೀರ್', 2011ರಲ್ಲಿ 'ಹೋಪ್', 'ಅಲ್ವಿನ್ ಆ್ಯಂಡ್ ದಿ ಚಿಪ್ಮಂಕ್ಸ್, 2012ರಲ್ಲಿ 'ಲೈಫ್ ಆಫ್ ಪೈ'. ರಿದಂ ಆ್ಯಂಡ್ ಹೀವ್ಸ್ ಸಂಸ್ಥೆಗೆ ನಾನು ಕಾಲಿಡುವ ಮುಂಚೆ ಈ ಸಂಸ್ಥೆಯಲ್ಲಿ ಅನಿಮೇಶನ್ ವಿಷುಯಲ್ ಎಫೆಕ್ಟ್ಗೊಂಡ 'ಬೇಬ್' ಎಂಬ ಹಾಲಿವುಡ್ ಚಿತ್ರಕ್ಕೂ ಆಸ್ಕರ್ ಪ್ರಶಸ್ತಿ ಬಂದಿದೆ.

'ಲೈಫ್ ಆಫ್ ಪೈ' ಚಿತ್ರದ ವಿಷುಯಲ್ ಎಫೆಕ್ಟ್ನಲ್ಲಿ ಭಾರತೀಯರ ಪಾತ್ರವೇನು?
ಹೈದರಾಬಾದ್, ಕೌಲಾಲಂಪುರ, ಮುಂಬೈ ಹಾಗೂ ಹಾಲಿವುಡ್ನಲ್ಲಿ ಈ ಚಿತ್ರಕ್ಕೆ ಅನಿಮೇಶನ್ ವಿಷಯಲ್ ಎಫೆಕ್ಟ್ ರೂಪಿಸಲಾಗಿದೆ. ಭಾರತದ 300ಕ್ಕೂ ಹೆಚ್ಚು ಕಲಾವಿದರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಇನ್ನೂ ಹಾಲಿವುಡ್ನಲ್ಲಿ ಕೆಲಸ ಮಾಡಿದವರ ಸಂಖ್ಯೆ ಇಲ್ಲಿಗಿಂತಲೂ ಹೆಚ್ಚು.

ಭಾರತೀಯ ಚಿತ್ರರಂಗ ಅನಿಮೇಶನ್ ವಿಷುಯಲ್ ಎಫೆಕ್ಟ್ ಅನ್ನು ಬಳಸಿಕೊಳ್ಳುತ್ತಿಲ್ಲವೇಕೆ?
ಈ ಎಫೆಕ್ಟ್ನ ಬಳಕೆ ಸ್ವಲ್ಪ ದುಬಾರಿ. ಭಾರತದ ಕೆಲ ಜಾಹೀರಾತುಗಳು ಈ ಎಫೆಕ್ಟ್ ಬಳಸಿಕೊಂಡಿವೆ. ಬೆರಳಣಿಕೆಯಷ್ಟು ಭಾರತೀಯ ಚಿತ್ರಗಳೂ ಅನಿಮೇಶನ್ ತಂತ್ರಜ್ಞಾನವನ್ನು ಸ್ವಲ್ಪಮಟ್ಟಿಗೆ ಅಳವಡಿಸಿ ಕೊಂಡಿವೆ. ಆದರೆ, ಆ ಚಿತ್ರಗಳಲ್ಲಿ ಈ ತಂತ್ರಜ್ಞಾನ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಸ್ವಲ್ಪ ದುಬಾರಿಯಾದರೂ ತಕ್ಕಮಟ್ಟಿಗೆ ಈ ತಂತ್ರಜ್ಞಾನವನ್ನು ಬಳಸಿಕೊಂಡಲ್ಲಿ ಒಟ್ಟಾರೆ ಚಲನಚಿತ್ರದ ರೂಪವೇ ಬದಲಾಗುತ್ತದೆ. ಇದರಿಂದಾಗಿ ತೆರೆಯ ಮೇಲೆ ಕಾಣಿಸುವ ಚಿತ್ರದ ಸಂಪೂರ್ಣ ಗುಣಮಟ್ಟ ಬದಲಾಗುತ್ತದೆ. ಈ ರೀತಿಯ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗುತ್ತವೆ. ಅನಿಮೇಶನ್ ವಿಷುಯಲ್ ಎಫೆಕ್ಟ್ ಬಳಕೆ ದುಬಾರಿಯಾದರೂ ನಿರ್ಮಾಪಕರಿಗೆ ಆದಾಯವನ್ನೂ ತಂದುಕೊಡಬಲ್ಲವು. ಹಾಲಿವುಡ್ ನಿರ್ಮಾಪಕರು ಈ ತಂತ್ರಜ್ಞಾನ ಅಳವಡಿಕೆಗೆ ಮಾಡುವಷ್ಟು ವೆಚ್ಚದಲ್ಲಿ ಸ್ವಲ್ಪ ಖರ್ಚನ್ನಾದರೂ ನಮ್ಮವರು ಮಾಡಬೇಕು.

'ಲೈಫ್ ಆಫ್ ಪೈ' ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸುವ ನಿರೀಕ್ಷೆ ಇತ್ತೇ?
'ಲೈಫ್ ಆಫ್ ಪೈ'ಗೆ ಅನಿಮೇಶನ್ ವಿಷುಯಲ್ ಎಫೆಕ್ಟ್ ರೂಪಿಸುವ ಸಂದರ್ಭದಲ್ಲೇ ಆಸ್ಕರ್ ಬರಲೇಬೇಕೆಂಬ ಗುರಿ ನಮ್ಮ ಇಡೀ ತಂಡಕ್ಕಿತ್ತು. ಶೇ.99ರಷ್ಟು ನಿರೀಕ್ಷೆ, ಶೇ.1ರಷ್ಟು ಸಾಧ್ಯತೆಯನ್ನು ಲಕ್ ಮೇಲೆ ಬಿಟ್ಟಿದ್ದೆವು. ಅಂತೂ ಆಸ್ಕರ್ ಬಂತು. ಇಂಥ ವಿಷುಯಲ್ ಎಫೆಕ್ಟ್ ಬಳಕೆ ಜಗತ್ತಿನ ಯಾವುದೇ ಚಿತ್ರದಲ್ಲಿ ಕಾಣಿಸುವುದಿಲ್ಲ.

ನಿಮ್ಮ ಮುಂದಿನ ಗುರಿಯೇನು?
ಅನಿಮೇಷನ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಮುಂಬೈನ ರಿದಂ ಆ್ಯಂಡ್ ಹೀವ್ಸ್ ಸಂಸ್ಥೆಯಲ್ಲಿ ಲೀಡ್ ಸೀನಿಯರ್ ಅನಿಮೇಟರ್ ಆಗಿರುವ ನಾನು, ಸೂಪರ್ವೈಸರ್, ಅನಿಮೇಷನ್ ಡೈರೆಕ್ಟರ್ನಂಥ ಉನ್ನತ ಹುದ್ದೆ ಅಲಂಕರಿಸಬೇಕು. ಈ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರ ಮಾಡಬೇಕು.

ಅನಿಮೇಷನ್ ಕ್ಷೇತ್ರ ಹೊಸ ಉದ್ಯೋಗ ಹುಟ್ಟುಹಾಕುತ್ತಿದೆಯೇ?
ಲಾಭ- ನಷ್ಟಗಳ ಗುರಿ ಇಟ್ಟುಕೊಂಡು ಅನಿಮೇಷನ್ ಕ್ಷೇತ್ರಕ್ಕೆ ಕಾಲಿಟ್ಟರೆ ಏನನ್ನೂ ಸಾಧಿಸಲಾಗದು. ಒಂದು ಸರ್ಟಿಫಿಕೇಟ್ ಪಡೆದು, ಕೇವಲ ಉದ್ಯೋಗದ ದೃಷ್ಟಿ ಇಟ್ಟುಕೊಂಡು ಬಂದರೆ ವೈಫಲ್ಯ ಖಚಿತ. ಇಲ್ಲಿ ಬರುವವರಿಗೆ ಅನಿಮೇಷನ್ ಬಗ್ಗೆ ಆಸಕ್ತಿ ಇರಬೇಕು. ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತುಡಿತ ಇರಬೇಕು. ಈಗಿನ ಯುವಕರು ವೈದ್ಯಕೀಯ, ಇಂಜನಿಯರಿಂಗ್ಗೆ ಲಕ್ಷಾಂತರ ರು. ವೆಚ್ಚ ಮಾಡುತ್ತಾರೆ. ಆ ಕ್ಷೇತ್ರಗಳಿಗೆ ಹೋಲಿಸಿದರೆ ಅನಿಮೇಶನ್ ಶಿಕ್ಷಣ ಅಷ್ಟೊಂದು ದುಬಾರಿ ಅಲ್ಲ. 30 ರಿಂದ 50 ಲಕ್ಷ ಖರ್ಚು ಮಾಡಿ ವೈದ್ಯಕೀಯ, ಇಂಜನಿಯರಿಂಗ್ಗೆ ಹೋಗುವ ಬದಲು, ಅನಿಮೇಶನ್ ಬಗ್ಗೆ ಆಸಕ್ತಿ ಉಳ್ಳವರು 7-8 ಲಕ್ಷದಲ್ಲಿ ಕೋರ್ಸ್ ಪೂರ್ಣಗೊಳಿಸಬಹುದು.


-  ಆನಂದ ಅಂಗಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್