ಕೆಲವರು ಯಾರನ್ನೂ ನಂಬುವುದಿಲ್ಲ. ಹತ್ತಿರದ ಬಂಧುಗಳಿಂದ ಹಿಡಿದು, ಮಡದಿ, ಮಕ್ಕಳು, ಸ್ನೇಹಿತರನ್ನೂ ಸಹ ನಂಬುವುದಿಲ್ಲ. ಎಷ್ಟೇ ಹತ್ತಿರದವರನ್ನೂ ಸಹ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಮನಃಶಾಸ್ತ್ರಜ್ಞರ ಪ್ರಕಾರ, ಇಂತಹ ಸ್ವಭಾವಕ್ಕೆ ತಾಯಿಯೂ ಮಕ್ಕಳ ಮೇಲೆ ತುಂಬ ಪ್ರಭಾವ ಬೀರುತ್ತಾಳೆ. ಕೆಲವು ಅಮ್ಮಂದಿರನ್ನು ನೋಡಿ, ಅದರಲ್ಲೂ ಒಟ್ಟು ಕುಟುಂಬದಿಂದ ಬಂದ ಅಮ್ಮಂದಿರು, ಆ ಹಿರಿಯರು ಹಾಗೆ ಮಾಡಿದ್ದರು, ಇವರು ಹೀಗೆ ಮಾಡಿದ್ದರು ಎಂದು ಮಕ್ಕಳಿಗೆ ಹೇಳುತ್ತ ಇರುತ್ತಾರೆ. ಅವರು ಅನುಭವಿಸಿರುವ ಕಷ್ಟವನ್ನು ಅವರು ಹೇಳಿಕೊಳ್ಳುತ್ತಿದ್ದಿರಬಹುದು. ಆದರೆ, ಅದು ಮಕ್ಕಳ ಮೇಲೆ ಬೀರುವ ಪರಿಣಾಮ ಅಗಾಧ. ಆಗಿ ಹೋದ ಘಟನೆಗಳನ್ನೇ ಮೆಲುಕು ಹಾಕುತ್ತಿರುವುದು ಸುಂದರ ಭವಿಷ್ಯಕ್ಕೆ ಒಳ್ಳೆಯದೇನೂ ಅಲ್ಲ. ಹಳೆಯದನ್ನೇ ಸಾಧಿಸುತ್ತಿರುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅಷ್ಟಕ್ಕೂ ಅವರೆಲ್ಲರೂ ಮನುಷ್ಯರು ಎಂಬ ಸರಳ ಸತ್ಯವನ್ನು ಅರಿಯುವುದೇ ಇಲ್ಲ. ಎಲ್ಲರಲ್ಲೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ, ಅದರಾಚೆಯೂ ಅವರು ನಮ್ಮವರು ಎಂದುಕೊಳ್ಳುವುದೇ ಇಲ್ಲ. ಎಂತಹ ಮೇಧಾವಿಯೇ ಆಗಲೀ, ಎಷ್ಟೇ ಜನಪ್ರಿಯ ವ್ಯಕ್ತಿಯಾಗಿರಲಿ, ಬೇರೆಯವರಿಗೆ ಇಷ್ಟವಾಗದೇ ಇರುವ ಸ್ವಭಾವ ಇದ್ದೇ ಇರುತ್ತದೆ. ಅದನ್ನೇ ದೊಡ್ಡದು ಮಾಡಿ ಅವರನ್ನು ದೂರ ಮಾಡಿದರೆ, ಆಗುವ ನಷ್ಟ ನಮಗೇ. ಅಷ್ಟಕ್ಕೂ ನಾವು ಎಲ್ಲದರಲ್ಲೂ ತುಂಬ ಫರ್ಫೆಕ್ಟ್ ಆಗಿದ್ದೇವಾ? ಯಾರೊಬ್ಬರೂ ಬೊಟ್ಟು ಮಾಡಿ ತೋರಿಸದಂತೆ ಬದುಕು ರೂಪಿಸಿಕೊಂಡಿದ್ದೇವಾ? ಎಲ್ಲರನ್ನೂ ಮೆಚ್ಚಿಸುತ್ತ ಬದುಕುವುದು ಸಾಧ್ಯವೂ ಇಲ್ಲ. ಆಗ ಜೀವನದ ಸರಳ ಗುಟ್ಟುಗಳು ಒಂದರ ಹಿಂದೆ ಒಂದರಂತೆ ಬಿಚ್ಚಿಕೊಳ್ಳುತ್ತ ಹೋಗುತ್ತವೆ.