ದಿನದಲ್ಲಿ ಕೆಟ್ಟ ದಿನ, ಕೆಟ್ಟ ಗಳಿಗೆ ಇಂಥವು ಇರುವುದಿಲ್ಲ. ಹಾಗೊಮ್ಮೆ ಇದ್ದರೆ ಪ್ರಪಂಚದಲ್ಲಿ ಯಾರಿಗೂ ಅವತ್ತು ಯಾವ ಕೆಲಸವೂ ಆಗಬಾರದು. ಆದರೆ ಹಾಗಿರುವುದಿಲ್ಲ. ಅವತ್ತೇ ಎಷ್ಟೋ ಮಂದಿಗೆ ಒಳ್ಳೆಯದೂ ಆಗಿರುತ್ತದೆ. ವಾಸ್ತವ ಏನೆಂದರೆ, ನಮಗೊಂದು ನೆಪ ಬೇಕಷ್ಟೇ. ಎಲ್ಲಿ ವಿಶ್ವಾಶದ ಕೊರತೆ ಇರುತ್ತದೋ, ಎಲ್ಲಿ ಮುನ್ನುಗ್ಗುವ ಧೈರ್ಯ ಇರುವುದಿಲ್ಲವೋ, ಎಲ್ಲಿ ಸೂಕ್ತ ಸಿದ್ಧತೆ, ಶಿಸ್ತು, ಯೋಜನೆ ಇರುವುದಿಲ್ಲವೋ ಆಗಲೇ ನಮಗೆ ಅಳುಕು ಕಾಡಲಾರಂಭಿಸಿರುತ್ತದೆ. ಆಲಸ್ಯ ಎನ್ನುವುದನ್ನು ಒಪ್ಪಿಕೊಳ್ಳುವ ಬದಲು ಇವತ್ತೇಕೋ ಸರಿ ಇಲ್ಲ, ಏನೋ ಕಿರಿಕಿರಿಯಾಗುತ್ತಿದೆ... ಎಂದೆಲ್ಲ ಹೇಳಿಕೊಂಡು ತಿರುಗುತ್ತೇವೆ. ಒಂದೊಮ್ಮೆ ಹಾಗೆಯೇ ಆಗಬೇಕೆಂದಿದ್ದರೆ ಅದು ಆಗಿಯೇ ತೀರುತ್ತದೆ. ಯಾವುದನ್ನೂ ಈ ಜೀವನದಲ್ಲಿ ನಾವು ತಪ್ಪಿಸಿಬಿಡುತ್ತೇವೆ ಎಂಬುದು ಭ್ರಮೆ. ಸಲ್ಲದ ಊಹೆಗಳನ್ನು ಮಾಡಿಕೊಳ್ಳುತ್ತ ಕುಳಿತುಕೊಳ್ಳುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ. ಮೊದಲು ನಮ್ಮ ಪ್ರಯತ್ನವನ್ನು ನಾವು ಮಾಡಲೇಬೇಕು. ಸೂಕ್ತವಾಗಿ ಯೋಜಿಸಿ ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ.