ಭಾಗ 11
ಒಬ್ಬ ತಾಯಿ ತನ್ನ ಮಗನನ್ನು ಸ್ವಾಮೀಜಿಯ ಬಳಿಗೆ ಕರೆದೊಯ್ದಳು. ಅವನು ವಿದ್ಯಾವಂತ. ಜ್ಞಾನಿ. ಸ್ವಾಮೀ, ನನ್ನ ಮಗ ಬುದ್ಧಿವಂತ. ಆದರೆ ಹೇಳಿದ ಮಾತು ಕೇಳುವುದಿಲ್ಲ. ಓದುವುದರ ಹೊರತಾಗಿ ಮಿಕ್ಕೆಲ್ಲಾ ವಿಷಯದಲ್ಲಿ ಆಸಕ್ತಿ ಇದೆ. ಅವನಿಗೇನಾದರೂ ಬುದ್ಧಿವಾದ ಹೇಳಿ ಅವನನ್ನು ಬದಲಾಯಿಸಿ ಎಂದಳು.
ಏನು ಹೇಳಲಿ? ಯಾವುದರ ಬಗ್ಗೆ ಹೇಳಲಿ? ಎಂದು ಸ್ವಾಮೀಜಿ ಕಿರುನಗೆಯೊಂದಿಗೆ ಕೇಳಿದ. ಅಲ್ಲಿ ಒಂದು ರ ಸ್ತೆಗೆ ಡಾಂಬರು ಹೊಸದಾಗಿ ಹಾಕುತ್ತಿದ್ದರು. ತುಂಟ ಹುಡುಗ ಅದರೆಡೆ ಕೈ ತೋರಿಸುತ್ತಾ, ಅದರ ಬಗ್ಗೆ ಹೇಳಿರಿ ಎಂದ. ಪಕ್ಕದಲ್ಲಿಯೇ ಬಿದ್ದಿದ್ದ ಒಂದು ಡಾಂಬರು ಮುದ್ದೆಯನ್ನು ತೆಗೆದುಕೊಂಡು ಬಾರೆಂದು ಹೇಳಿ ನಂತರ, ಈ ಟಾರಿನ ಉಂಡೆಯ ಬೆಲೆ ಎಷ್ಟಿರಬಹುದೋ ಸರಿಸುಮಾರಾಗಿ ಹೇಳಬಲ್ಲೆಯಾ? ಎಂದು ಕೇಳಿ ದರು ಸ್ವಾಮೀಜಿ.
ಐದರಿಂದ ಹತ್ತು ರೂಪಾಯಿಗಳು
ಆದರೆ ಇದರಲ್ಲಿನ ಪೆಟ್ರೋಲಿಯಂ ಅನ್ನು ಸಿಂಥೆಟಿಕ್ ವೈರ್ ಆಗಿ ಬದಲಾಯಿಸಿದರೆ, ಅದು ಹೃದಯದ ಆಪರೇಷನ್ನಲ್ಲಿ ಹತ್ತುಸಾವಿರ ಬೆಲೆ ಬಾಳುವ ದಾರವಾಗಿ ಕೆಲಸಕ್ಕೆ ಬರುತ್ತದೆ. ಆ ಉಂಡೆಯಿಂದ ಸಾವಿರ ವೈರ್ ತಯಾರು ಮಾಡಬಹುದು. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಈ ಹತ್ತು ರೂಪಾಯಿಗಳ ಟಾರನ್ನು ಇನ್ನೊಂದು ರೀತಿಯಲ್ಲಿ ಪ್ರೊಸೆಸ್ ಮಾಡಿದರೆ, ಅದರ ಬೆಲೆ ಒಂದು ಕೋಟಿ ರೂಪಾಯಿಗಳಾಗಿರುತ್ತಿತ್ತು.
ಕೇಳುತ್ತಿದ್ದ ಹುಡುಗ ನಿಶ್ಚೇಷ್ಟಿತನಾದ. ಅವನ ಕಣ್ಣುಗಳಲ್ಲಿದ್ದ ಕುತೂಹಲವನ್ನು ಗಮನಿಸಿ ಸ್ವಾಮೀಜಿ ಮುಂದುವರಿಸಿದರು. ವರ್ತಮಾನವನ್ನು ಹೇಗೆ ಪ್ರೊಸೆಸ್ ಮಾಡಿಕೊಂಡರೆ ನಿನ್ನ ಭವಿಷ್ಯ ಹಾಗೆ ಬದಲಾಗುತ್ತದೆ. ನೀನೀಗ ಇಂಟರ್ಮೀಡಿಯೆಟ್ ಸ್ಟೇಜ್ನಲ್ಲಿರುವೆ. ಇಂಟರ್ ಎಂದರೆ ಮಧ್ಯದಲ್ಲಿ ಎಂದು ಅರ್ಥ. ಅದೊಂದು ರೈಲ್ವೇ ಜಂಕ್ಷನ್. ಬೇರೆ ಬೇರೆ ರೈಲುಗಳು ಅಲ್ಲಿಗೆ ಬರುತ್ತಿರುತ್ತವೆ. ಒಂದು ರೈಲು ನಿ ನ್ನನ್ನು ಕಾಶ್ಮೀರಕ್ಕೆ, ಮತ್ತೊಂದು ಜೈಸಲ್ಮೇರ್ ಮರುಭೂಮಿಗೆ ಕರೆದೊಯ್ಯುತ್ತದೆ. ಹೂತೋಟಕ್ಕೆ ಹೋಗುವೆಯಾ, ಮರಳಿನ ಮರುಭೂಮಿಗೆ ಹೋಗುವೆಯಾ ಎನ್ನುವುದನ್ನು ನೀನೇ ನಿರ್ಧರಿಸಿಕೊಳ್ಳಬೇಕು. ಒಂದು ಸಲ ರೈಲು ಹತ್ತಿದ ನಂತರ ಬದಲಾಯಿಸುವುದು ಕಷ್ಟ. ಲಕ್ಷ ರೂಪಾಯಿಗಳ ಉದ್ಯೋಗದೊಂದಿಗೆ ಪ್ರಾರಂಭ ಮಾಡಿದರೆ ಕೋಟಿಗೆ ಸೇರಿಕೊಳ್ಳುವುದು ಸುಲಭ. ಹತ್ತುಸಾವಿರದೊಂದಿಗೆ ಆರಂಭಿಸಿದರೆ ಲಕ್ಷಕ್ಕೆ ಸೇರುವುದು ಕಷ್ಟ ಕೇಳಿಸಿಕೊಳ್ಳುತ್ತಿದ್ದ ಹುಡುಗ ಅರ್ಥವಾದಂತೆ ತಲೆದೂಗಿ ಅರ್ಥವಾದವನಂತೆ ವಿನಮ್ರತೆಯಿಂದ ನಮಸ್ಕರಿಸಿದ.
ನಿಮಗೆ ಕಾಣಿಸಿದ ಪ್ರತಿ ವಿದ್ಯಾರ್ಥಿಗೆ ಮೇಲಿನ ಕಥೆ ಹೇಳಿರಿ. ಕೊನೆಯಲ್ಲೊಂದು ಪ್ರಶ್ನೆ ಕೇಳಿರಿ. ಭಗವಂತ ಪ್ರತ್ಯಕ್ಷವಾಗಿ, ..ಮೊದಲ ಇಪ್ಪತ್ತು ವರ್ಷಗಳು ನಿನ್ನ ಜೀವನ ಅದ್ಭುತವಾಗಿದ್ದು, ನಂತರ ಕಠಿಣವಾದ ಸ ಮಸ್ಯೆಗಳೊಂದಿಗೆ ತುಂಬಿ ಹೋಗುತ್ತದೆ. ಇಲ್ಲವೇ, ಮೊದಲ ಇಪ್ಪತ್ತು ವರ್ಷಗಳು ಸಾಧಾರಣವಾಗಿದ್ದು, ನಂತರ ಅದ್ಭುತವಾಗಿ ಇರುತ್ತದೆ. ನಿನಗ್ಯಾವುದು ಬೇಕು? ಎಂದು ಕೇಳಿದರೆ ನೀನು ಯಾವುದನ್ನು ಕೋರಿಕೊಳ್ಳುವೆ? ಎಂದು ಪ್ರಶ್ನಿಸಿರಿ. ಎಲ್ಲರೂ ಎರಡನೆಯದೇ ಎನ್ನುತ್ತಾರೆ. ಇಪ್ಪತ್ತು ವರ್ಷಗಳೆಂದರೆ ಕೇವಲ ವಿದ್ಯಾರ್ಥಿ ಜೀವನವೇ ಅಲ್ಲವಾ ಎಂದು ಹೇಳಿ.
ಸಾಕು. ಅರ್ಥವಾಗುವವರಿಗೆ ಅರ್ಥವಾಗುತ್ತದೆ. ಬದಲಾಗುವವರು ಬದಲಾಗುತ್ತಾರೆ. ಈ ಕೆಳಗಿನ ಉದಾಹರಣೆ ಓದಿರಿ. ಇದು ನಡೆದು ಬಹಳ ವರ್ಷಗಳಾಗಿವೆ. ಆದರೆ ಪ್ರತಿ ವಿದ್ಯಾರ್ಥಿ ಓದಲೇಬೇಕಾದ ಸಂಭಾಷಣೆ.
ಹತ್ತನೇ ಕ್ಲಾಸು ಓದುವಾಗ ನಿಮ್ಮ ಪುಸ್ತಕಗಳನ್ನು ಓದುತ್ತಿದ್ದೆ ಸಾಬ್.. ಎಂದ ಆಟೋ ಡ್ರೈವರ್ ಸ್ಟೇಷನ್ಗೆ ಕರೆದೊಯ್ಯುತ್ತಾ. ಇಂಟರ್ನಲ್ಲಿ ಕಾಲೇಜಿಗೆ ಹೋಗುತ್ತಿರಲಿಲ್ಲ. ಫೆಯಿಲ್ ಆದೊಡನೆ ಅಪ್ಪ ಓದುವುದನ್ನು ನಿಲ್ಲಿಸೆಂದರು. ಈಗ ನನ್ನ ಮಗ ಇಂಟರ್ನಲ್ಲಿದ್ದಾನೆ. ಓದು ಎಂದರೆ ಅವನಿಗೆ ಅಶ್ರದ್ಧೆ. ನನ್ನ ಹಾಗೇ ತಯಾರಾಗಿದ್ದಾನೆ ಎಂದ.
ಹೇಗೆ? ಎಂದು ಕೇಳಿದೆ.
ನೋಡಿ ಸಾಬ್. ಬೆಳಿಗ್ಗೆ ಐದರವರೆಗೂ ಪ್ಯಾಸೆಂಜರುಗಳು ಮೀಟರ್ನ ಒಂದೂವರೆಯಷ್ಟು ಛಾರ್ಜ್ ಕೊಡಬೇಕು. ಅದಕ್ಕೇ ಬೆಳಗಿನ ಝಾವ ನಾಲ್ಕು ಗಂಟೆಗೆ ರೈಲ್ವೇ ಸ್ಟೇಷನ್ನಿಗೆ ಹೋಗುತ್ತೇನೆ. ಮನಗೆ ಬರುವ ಹೊತ್ತಿಗೆ ರಾತ್ರಿ ಒಂಬತ್ತಾಗುತ್ತದೆ. ಸಾಯುವವರೆಗೂ ಹೀಗೇ ಆಟೋ ಓಡಿಸುತ್ತಲೇ ಇರಬೇಕು. ಇದೇ ಬುದ್ಧಿ ನನಗೆ ಇಂಟರ್ನಲ್ಲಿದ್ದಾಗ ಇದ್ದು ಎರಡು ವರ್ಷ ಬೆಳಗಿನ ಝಾವವೇ ಎದ್ದಿದ್ದರೆ, ಜೀವನ ಪೂರ್ತಿ ಸುಖವಾಗಿ ನಿದ್ರೆ ಮಾಡಿರುತ್ತಿದ್ದೆ. ಹೀಗೆ ಆಟೋ ನಡೆಸಬೇಕಾದ ಕೆಲಸವಿರುತ್ತಿರಲಿಲ್ಲ. ನನ್ನ ಮಗ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
ಮೆಚ್ಯೂರಿಟಿ ಎಂದರೆ - ತಾನೇನು ಮಾಡಿದರೆ ಚೆನ್ನಾಗಿರುವುದೋ ಸರಿಯಾಗಿ ತಿಳಿದುಕೊಳ್ಳುವುದು. ಮಹಾನ್ ಅರ್ಥವಿರುವ ಒಂದೇ ಒಂದು ವಾಕ್ಯ. ಜೀವನದ ಪ್ರಾಸೆಸಿಂಗ್ ಎಷ್ಟು ಬೇಗ ನಡೆದರೆ ಫಲಿತಾಂಶ ಅಷ್ಟು ಶೀಘ್ರವಾಗಿ ಬರುತ್ತದೆ.
ಹನ್ನೆರಡರ ಹುಡುಗ ನಾಲ್ಕರ ಹುಡುಗನಂತೆ ಬಸ್ ಸ್ಟೀರಿಂಗ್ ಕೈಲಿದ್ದ ಹಾಗೆ ಊಹಿಸಿಕೊಂಡು, ಬೋಯ್.. ಬೋಯ್ ... ಎನ್ನುತ್ತಾ ಹಾರನ್ ಅದುಮಿ ಓಡಿದರೂ, ಇಪ್ಪತ್ತೈದರ ಯುವಕ ಕೈಯಲ್ಲಿ ಬಾಲ್ ಇರುವ ಹಾಗೆ ಊಹಿಸಿಕೊಂಡು ಗಾಳಿಯಲ್ಲಿ ಬೌಲಿಂಗ್ ಮಾಡಿದರೂ, ಐವತ್ತರ ಗೃಹಿಣಿ ಒಂದೇ ಒಂದು ಆಸೆಯು ತೋಳಲಿ ಬಳಸ ಲು ಎಂದು ಡ್ಯಾನ್ಸ್ ಮಾಡಿದರೆ, ಅರುವತ್ತರ ಮನುಷ್ಯ ಮೊದಲ ದಿನ ಸಿನಿಮಾಗಾಗಿ ಕ್ಯೂನಲ್ಲಿ ಹೊಡೆದಾಡಿಕೊಂಡರೂ ಇನ್ನೂ ಮೆಚ್ಯೂರ್ ಆಗಿಲ್ಲ ಎಂದೆನ್ನುತ್ತೇವೆ.
ನಮ್ಮೆಲ್ಲರ ಬಳಿ ಶಕ್ತಿ ಇದೆ. ಅದನ್ನು ಹೇಗೆ ಉಪಯೋಗಿಸಬೇಕೋ ಕೆಲವರಿಗೆ ತಿಳಿದಿಲ್ಲ, ಅಷ್ಟೇ. ನಮಗಿರುವ ಒಳ್ಳೆಯ ಅದೃಷ್ಟವೆಂದರೆ, ಜೀವನದಲ್ಲಿ ಯಾವ ತಿರುವಿನಿಂದಲಾದರೂ ನಾವು ಗೆಲವಿನತ್ತ ಜೀವನವನ್ನು ತಿರುಗಿಸಿಕೊಳ್ಳಬಹುದು.
ನಮ್ಮ ಭೂತಕಾಲವನ್ನು ಬದಲಾಯಿಸಲಾರೆವು. ಆದರೆ ವರ್ತಮಾನವನ್ನು ಬದಲಾಯಿಸಿಕೊಳ್ಳಬಲ್ಲೆವು. ಮಾರ್ಪಾಡಿಗೆ ಮೊಟ್ಟಮೊದಲ ಮೆಟ್ಟಿಲೆಂದರೆ ನಮ್ಮ ಬಲಹೀನತೆಗಳನ್ನು ಗುರುತಿಸಿಕೊಳ್ಳುವುದು. ಹಾಗೆ ಗುರುತಿಸಿಕೊಳ್ಳಲು ಒಳ್ಳೆಯ ದರ್ಪಣಗಳು ನಮ್ಮ ಪುರಾಣಗಳು.
ಮಹಾಬಲ ಸಂಪನ್ನ, ಮೇಧಾವಿ ರಾವಣಾಸುರ ಅಹಂಭಾವದಿಂದಾಗಿ ನಾಶವಾದ. ಕೆಟ್ಟ ಸಲಹೆಯನ್ನು ನೀಡಿ ಶುಕ್ರಾಚಾರ್ಯರು ಕಣ್ಣು ಹೋಗಿಸಿಕೊಂಡ. ನಹುಷ ಗರ್ವದಿಂದ ಸಪ್ತಋಷಿಗಳಿಂದ ಪಲ್ಲಕಿ ಎತ್ತಿಸಿಕೊಂಡು ಅಗಸ್ತ್ಯನ ಶಾಪದ ಕಾರಣದಿಂದಾಗ ಹಾವಾಗಿ ಬದಲಾದ.
ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂದು ಕರೆಯಲ್ಪಡುವ ಆರು ಬಲಹೀನತೆಗ ಳಿಗೆ ಋಷಿಗಳು ಕೂಡಾ ಹೊರತಲ್ಲ. ದೂರ್ವಾಸ, ಪರಶುರಾಮ ಮೊದಲಾದ ಮುನಿಗಳ ಕೋಪದ ವಿಷಯ, ಶಾಪದಿಂದಾಗಿ ಮೈಯೆಲ್ಲಾ ಕಣ್ಣಾದ ಇಂದ್ರನ ಕಾಮದ ಸಂಗತಿ ನಮಗೆ ತಿಳಿದಿರುವಂತಹುದ್ದೇ. ಪ್ರವರನ ಮೇಲಿನ ಮೋಹದಿಂದಾಗಿ ದೇವಕನ್ಯೆ ವರೂಧಿನಿ ಮಾಯಾ ಪ್ರವರನಿಂದ ಮೋಸಹೋದಳು. ಬಯದಿಂದಾಗಿ ನೀರಿನೊಳಗೆ ದುರ್ಯೋಧನ ಅವಿತುಕೊಂಡ.
ಒಬ್ಬರಿಂದ ಮತ್ತೊಬ್ಬರಿಗೆ ದ್ವೇಷ ಹೇಗೆ ವರ್ಗವಾಗುವುದೆಂದು ಮಹಾಭಾರತ ಹೇಳುತ್ತದೆ. ದ್ರೋಣನಿಂದ ಅಸ್ತ್ರವಿದ್ಯೆ ಕಲಿತ ಯುವರಾಜ ದ್ರುಪದ, ದ್ರೋಣನಿಗೆ ಅರ್ಧರಾಜ್ಯ ಕೊಡುವೆನೆಂದು ವಚನ ನೀಡುತ್ತಾನೆ. ಮಗ ಅಶ್ವತ್ಥಾಮನನ್ನು ಪೋಷಿಸಲು ಕೂಡಾ ಸಾಧ್ಯವಾಗದ ದುರ್ಭರ ದಾರಿದ್ರ್ಯದಲ್ಲಿ ಬಾಲ್ಯಮಿತ್ರನ ವಾಗ್ದಾನದ ಬಗ್ಗೆ ನೆನಪಾಗಿ ಸಹಾಯ ಕೋರಲು ಹೋಗುತ್ತಾನೆ ದ್ರೋಣ. ದ್ರುಪದ ಅವನನ್ನು ಅಪಮಾ ನಿಸಿ ಹಿಂದಕ್ಕೆ ಕಳುಹಿಸುತ್ತಾನೆ. ನಡೆದ ಅವಮಾನಕ್ಕೆ ಪ್ರತೀಕಾರವಾಗಿ ದ್ರೋಣಾಚಾರ್ಯ ತನ್ನ ಶಿಷ್ಯ ಅರ್ಜುನನನ್ನು ಪ್ರೇರೇಪಿಸಿ ದ್ರುಪದನನ್ನು ಬಂಧಿಸಿ ಅವಮಾನ ಮಾಡುತ್ತಾನೆ. ಆ ಹಗೆಯಿಂದ ತನ್ನ ಮಗನಾದ ದೃಷ್ಟದ್ಯುಮ್ನನ ಮೂಲಕ ದ್ರೋಣಾಚಾರ್ಯನನ್ನು ಕೊಲ್ಲಿಸುತ್ತಾನೆ ದ್ರುಪದ. ಆ ಸಂದರ್ಭದಲ್ಲಿ ಅಶ್ವತ್ಥಾಮ ಹತ: ಎಂದು ಧರ್ಮರಾಜ ಕೂಡ ಸುಳ್ಳು ಹೇಳುತ್ತಾನೆ. ಪ್ರತೀಕಾರದಿಂದ ಉರಿದೆದ್ದ ಅಶ್ವತ್ಥಾಮ ಪಾಂಡವರ ಮಕ್ಕಳೆಲ್ಲರನ್ನೂ ಕೊಲ್ಲುತ್ತಾನೆ.
ಕೆಲವು ಅಸುರ ಗುಣಗಳು, ಕೆಲವು ಸುರರ ಬಲಹೀನತೆಗಳು. ಇವೆಲ್ಲವನ್ನೂ ಸೇರಿಸಿದ ಮನುಷ್ಯರ ತಲತಲಾಂತರಕ್ಕೂ ಕರಗದ ಗುಣಾವಗುಣಗಳು. ಬಲಹೀನತೆಗಳಿಗೆ ಸುರಾಸುರಭೇದವಿಲ್ಲವೆಂಬ ವಿವರಣೆಯ ಆಧಾರದಿಂದ, ಮನುಷ್ಯರ ಬಲಹೀನತೆಗಳನ್ನು ಎರಡಾಗಿ ಸೀಳಿ, ಬೇರೆಬೇರೆಯಾಗಿ ಚರ್ಚಿಸೋಣ.
ದೇವತೆಗಳ ಬಲಹೀನತೆಗಳು
ಮನುಷ್ಯನ ಬದುಕಿನಲ್ಲಿ ಸಾಧಿಸಬೇಕಾದ ಷಡ್ಗುಣ ಐಶ್ವರ್ಯಗಳಲ್ಲಿ ಮೊದಲನೆಯದು ಆರೋಗ್ಯವೆಂದು; ಅದು ಶಾರೀರಿಕ, ಮಾನಸಿಕ ಆರೋಗ್ಯಗಳ ಸಮ್ಮಿಲನವೆಂದು ತಿಳಿದುಕೊಂಡೆವು. ಮಾನಸಿಕಾರೋಗ್ಯ ಸರಿಯಾಗಿ ಇಲ್ಲದಿರುವುದೆಂದರೆ - ಅಪರಿಮಿತವಾದ ದು:ಖ, ಹದ್ದುಮೀರಿದ ಕೋಪ, ನಿರರ್ಥಕವಾದ ಭಯ.. ಈ ಮೂರೇ.
(ಮುಂದುವರಿಯುವುದು)
ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ:
ಯತಿರಾಜ್ ವೀರಾಂಬುಧಿ