ಬೈಟುಕಾಫಿ

ನೀರ್ಗತೆಗಳು

ಅವಳನ್ನು ಪೂರ್ತಿ ಚಿತ್ರಿಸಿ ಆಗಿದೆ. ಇನ್ನೂ ಅವಳ ಚಿತ್ರಕ್ಕೆ ಬಣ್ಣ ಬಳಿದಿಲ್ಲ. ಪೇಂಟಿನ ಡಬ್ಬಿ ಕೊಳ್ಳೋಣವೆಂದರೆ ...

ಮಳೆಗಾಲಕ್ಕೆ ಯಾವ ಬಣ್ಣ?

ಅವಳನ್ನು ಪೂರ್ತಿ ಚಿತ್ರಿಸಿ ಆಗಿದೆ. ಇನ್ನೂ ಅವಳ ಚಿತ್ರಕ್ಕೆ ಬಣ್ಣ ಬಳಿದಿಲ್ಲ. ಪೇಂಟಿನ ಡಬ್ಬಿ ಕೊಳ್ಳೋಣವೆಂದರೆ ಮನೆ ಮುಂದಿನ ಸೇತುವೆ ಜೋರು ಮಳೆಗೆ ಕೊಚ್ಚಿಹೋಗಿದೆ. ಈಜಲೂ ಸಾಧ್ಯವಾಗದಷ್ಟು ಬಡಕಾಯ. ಮತ್ತೆ ಆ ಆರ್ಟಿಸ್ಟ್ ತಾನು ಬರೆದ ಚಿತ್ರವನ್ನು ನೋಡಿದ; ಬಣ್ಣದ ಬಾಕಿ ಬಹಳ ಇದೆ. ಕಿವಿ ಓಲೆಯ ನಡುವಿಗೆ ನೇರಳೆ ಬಣ್ಣ; ಕಣ್ಣಿನ ಚೆಂಡಿಗೆ ಕಡುನೀಲಿಯೇ ಚೆನ್ನ; ರೆಪ್ಪೆಯ ಸುತ್ತ ನೀಲಿ ನೀಲಿ ಗೆರೆಯೇ ಸರಿ; ಮೂಗುತಿಯ ಮಧ್ಯಕ್ಕೆ ಹಸಿರು ಒಪ್ಪುವುದು; ಬೋಳು ಹಣೆಗೆ ಹಳದಿಯ ಬಿಂದಿಗೆಯೇ ಬೇಕು; ಕೆನ್ನೆಗೆ ಕಿತ್ತಳೆ ಬಣ್ಣವಲ್ಲದಿದ್ದರೆ ಬೇರೇನು ಹೊಂದುತ್ತದೆ? ತುಟಿಗೆ ಕೆಂಪು ಬಣ್ಣ... ಇಷ್ಟೆಲ್ಲ ಬಣ್ಣಗಳನ್ನು ಈ ಮಳೆಗಾಲದಲ್ಲಿ ಎಲ್ಲಿಂದ ತರಲಿ? ಮನೆಯೆದುರಿನ ದಾರಿಯೇ ತುಂಡಾಗಿರುವಾಗ ಕಲಾವಿದನಿಗೆ ತಲೆ ಅಡಿಮಾಡಿ ಕೂರದೆ ವಿಧಿಯಿಲ್ಲ.
ಮನೆ ಎದುರಿನ ನದಿಯಲ್ಲಿ ಅದಾಗಲೇ ಕಾಮನಬಿಲ್ಲು ಮೂಡಿತು. ಬೇಕಾದ ಏಳು ಬಣ್ಣಗಳನ್ನೂ ಆಕಾಶವೇ ಚೆಲ್ಲಿತ್ತು!

ತೆಗೀ
ಕಾಗದದ ದೋಣಿ- ಹಡಗುಗಳೆಲ್ಲ ಆ ಡೈರೆಕ್ಟರ್ ಜೇಮ್ಸ್ ಕಾಮೆರೂನ್‌ನ ಕಾಲರ್ ಹಿಡಿದು ದಬಾಯಿಸುತ್ತಿದ್ದವು. 'ಟೈಟಾನಿಕ್ ಥರ ನಮ್ಮದೂ ಒಂದು ಚಿತ್ರ ತೆಗೀ'!

ನಾಚಿಕೆ ಮುಳ್ಳು
ಗಿಡದ ಮೇಲೆ ಕೂತ ಒಂದು ಹನಿ ಆಗಿನಿಂದ ಹೆದರಿಸುತ್ತಿದೆ. 'ನಿನ್ನ ಮೇಲೆ ಬಿದ್ದು ಬಿಟ್ಟೇನು'. ನಾಚಿಕೆ ಮುಳ್ಳಿನ ಎದೆ ಆತಂಕದಲ್ಲಿ ಬಡಿದುಕೊಳ್ಳುತ್ತಿದೆ!


ಒಂದು ಪ್ರಾರ್ಥನೆ
ದೇವರೆಂದರೆ ಯಾರು? ಗೊತ್ತಿಲ್ಲ. ಕೇಳಿದ್ದನ್ನು ಕೊಡ್ತಾನೆ ಎಂಬುದಷ್ಟೇ ಆ ಪುಟ್ಟಿಗೆ ಗೊತ್ತು. ವಾರದ ಹೋಂ ವರ್ಕನ್ನು ಪೆಂಡಿಂಗ್ ಇಟ್ಟುಕೊಂಡ ಪುಟ್ಟಿ, ಅವತ್ತು ದೇವರ ಪಟಕ್ಕೆ ಊದುಕಡ್ಡಿ ಹಚ್ಚಿ ಪ್ರಾರ್ಥಿಸಿದಳು; 'ಜೋರು ಮಳೆ ಬಂದು ಶಾಲೆಗೆ ರಜೆ ಸಿಗಲಿ'. ಮಳೆ ಬಂತು. ಶಾಲೆಗೆ ರಜೆಯೂ ಸಿಕ್ಕಿತು. ಅಲ್ಲೇ ಪಕ್ಕದಲ್ಲಿದ್ದ ಅವಳ ಅಮ್ಮ ದೇವರಿಗೆ ಹಿಡಿಶಾಪ ಹಾಕಿದಳು. 'ಹಿಂಗೆಲ್ಲ ಮಳೆ ಬಂದು ಥಂಡಿ ಹಿಡಿಸಿದರೆ ನಾನು ಬಸ್‌ಸ್ಟ್ಯಾಂಡಿನಲ್ಲಿ ಐಸ್‌ಕ್ರೀಂ ಮಾರುವುದು ಹೇಗೆ?'. ತಾಯಿಯ ಚಿಂತೆ!



ಒಂದು ಹನಿಗಾಗಿ
ಅವನ ಗೋಳು ಕೇಳಲಾರದೆ ಸ್ವಾಮೀಜಿ ನಾಲ್ಕನೇ ಬಾರಿಗೆ ಗಡ್ಡ ಕೆರೆದುಕೊಂಡರು. 'ನಾನೆಷ್ಟು ಬಲಿಷ್ಠನಿದ್ದೇನೆ. ದಿನಾ ಜಿಮ್‌ಗೆ ಹೋಗುತ್ತೇನೆ. ಏಳು ಬಾದಾಮಿ ತಿನ್ನುತ್ತೇನೆ. ಕುಂಡಲಿಯ ಎಲ್ಲ ದೋಷಗಳನ್ನೂ ನಿಮ್ಮ ಬಳಿಯೇ ನಿವಾರಿಸಿಕೊಂಡಿದ್ದೇನೆ. ಆದರೂ ನನಗೇಕೆ ಮಕ್ಕಳಾಗಿಲ್ಲ? ಮದುವೆಯಾಗಿ ವರುಷವಾಯಿತು' ಅವನು ಹೇಳುತ್ತಲೇ ಇದ್ದ. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಗುರೂಜಿ ಅತ್ತ ಕೈತೋರಿಸಿ, 'ಆಕಾಶದಿಂದ ಕೋಟ್ಯಂತರ ಹನಿಗಳು ಉದುರುತ್ತವೆ. ಎಲ್ಲೋ ಒಂದು ಹನಿ ಬೀಜದ ಬುಡಕ್ಕೆ ಬಿದ್ದು ಮೊಳಕೆಯಾಗುತ್ತದೆ. ಆ ಹನಿಗಾಗಿ ಕಾಯಬೇಕು'. ಅವನು ಸಮಾಧಾನಿಸಿಕೊಂಡ.



ಹನಿಗಳ ಮಾರುವವರು
ಅವನು ಮಳೆಹನಿ ಮಾರುವ ಹುಡುಗ. ವರ್ಷಾನುಗಟ್ಟಲೆಯಿಂದ ಹನಿಗಳನ್ನು ಕೂಡಿಟ್ಟುಕೊಂಡಿದ್ದರೂ ಯಾರೂ ಆತನೆಡೆಗೆ ಬರಲಿಲ್ಲ. ಒಂದು ಹನಿಯೂ ಮಾರಾಟವಾಗದ್ದನ್ನು ಕಂಡು ಆತನಿಗೆ ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕನ್ನಿಸುತ್ತಿತ್ತು. ಖಿನ್ನನಾಗಿದ್ದ. ಇದ್ದಕ್ಕಿದ್ದಂತೆ ಒಂದು ದಿನ ಅವನ ಅಂಗಡಿಗೊಬ್ಬ ಗಡ್ಡ ಬಿಟ್ಟುಕೊಂಡ ಹಿರಿಯ ವ್ಯಕ್ತಿ ಬಂದ. ಈ ಹುಡುಗ ಸಪ್ಪಗಿದ್ದದ್ದನ್ನು ನೋಡಿದ ಆ ವ್ಯಕ್ತಿ ಕಾರಣ ಕೇಳಿದ. 'ನಾನು ಯಾವ ಪಾಪ ಮಾಡಿದ್ದೆನೋ. ಇಲ್ಲಿಯ ತನಕ ಒಂದೂ ಹನಿಯನ್ನು ಮಾರಲಾಗಲಿಲ್ಲ. ಇಷ್ಟೆಲ್ಲ ಹನಿಗಳನ್ನು ರಸ್ತೆಗೆ ಚೆಲ್ಲಿಬಿಡೋಣವೆನ್ನಿಸುತ್ತಿದೆ. ಏನು ಮಾಡಲಿ' ಕೇಳಿದ. ಅದಕ್ಕೆ ಆ ವ್ಯಕ್ತಿ, 'ಒಂದು ದಿನ ತಡೆದುಕೋ. ಎಲ್ಲ ಸರಿಹೋಗುತ್ತದೆ' ಎಂದಷ್ಟೇ ಹೇಳಿಹೋದ.
ಮರುದಿನ ಅವನ ಅಂಗಡಿಯಲ್ಲಿ ಕಾಲಿಡಲು ಜಾಗವಿಲ್ಲ. ಐಷಾರಾಮಿ ಕಾರುಗಳಿಂದ ಇಳಿದ ನೂರಾರು ಜನ, ಒಂದು ಹನಿಗೆ ಹತ್ತಾರು ಸಾವಿರ ದುಡ್ಡು ಕೊಟ್ಟು ಕೊಂಡು ಹೋದರು.
ಆ ಹಿರಿಯ ವ್ಯಕ್ತಿ, ಟಿವಿ ಚಾನೆಲ್ಲೊಂದರ ಜ್ಯೋತಿಷಿ!


ಹೋಗುವ ಮುನ್ನ
ಆ ಮೋಡದಲ್ಲಿ ಎಲ್ಲ ಹನಿಗಳ ಹೃದಯವೂ ಭಾರವಾಗಿತ್ತು. ಅದೊಂದು ಹನಿ ಬೆಳಗ್ಗಿನಿಂದಲೂ ಬೇಸರದಿಂದ ಕಣ್ಣುಜ್ಜಿಕೊಂಡು ಕೇಳುತ್ತಲೇ ಇದೆ; 'ಅಮ್ಮಾ, ನಾನು ಭೂಮಿಗೆ ಹೋಗಲೇಬೇಕಾ? ಇಲ್ಲೇ ಇದ್ದರೆ ಏನಾಗುತ್ತದೆ?'. ಆ ಹನಿಯ ಅಮ್ಮ ಹೇಳಿತು, 'ಇಲ್ಲಾ ಮಗು, ನಿನಗಿದು ಶಾಶ್ವತ ಜಾಗವಲ್ಲ. ಭೂಮಿಗೆ ಹೋಗಬೇಕು. ಹಾಗೆ ಹೋದ ಜಾಗದಲ್ಲಿ ಹಸಿರು ಸೃಷ್ಟಿಸಬೇಕು. ನೀ ಇಲ್ಲೇ ಇದ್ದರೆ ಮುಂದೊಂದು ದಿನ ಸುತ್ತಮುತ್ತಲಿನವರು ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗುತ್ತದೆ'.
ಅದೇ ಹೊತ್ತಿನಲ್ಲಿ ಭೂಮಿಯಲ್ಲೊಂದು ಪುಟ್ಟ ಮನೆಯಲ್ಲಿ ತಾಯಿಯೊಬ್ಬಳು ಮಗಳಿಗೆ ಮದುವೆಯ ಮಹತ್ವದ ಬಗ್ಗೆ ಪಾಠ ಹೇಳುತ್ತಿದ್ದಳು.



ಎರಡು ಪ್ರಾರ್ಥನೆ


'ಇವತ್ತು ಇಂಡಿಯಾ ಗೆಲ್ಬೇಕು. ಮಳೆ ಬಂದು ಮ್ಯಾಚ್ ಡ್ರಾ ಆಗದಿರಲಿ ದೇವರೇ' ಎಂದು ಕ್ರಿಕೆಟ್ ಪ್ರೇಮಿಯೊಬ್ಬ ಗಣಪತಿಗೆ ಒಂದು ಕರ್ಪೂರ ಹೆಚ್ಚು ಹಚ್ಚಿಟ್ಟು ಟಿವಿ ಮುಂದೆ ಕುಳಿತ. ಅತ್ತ ಆ ಕ್ರಿಕೆಟ್ ನಡೆಯುವ ಸ್ಟೇಡಿಯಮ್ಮಿನ ಪಕ್ಕದಲ್ಲಿ ಕೊಡೆ ಮಾರುವ ಹುಡುಗ ಬೆಳಗ್ಗೆ ಮನೆಯಿಂದ ಹೊರಡುವಾಗಲೇ, 'ಇವತ್ತು ಜೋರು ಮಳೆ ಬರಲಿ' ಎಂದು ಗಣಪತಿಯ ಅಗಲ ಕಿವಿಗೆ ಹೂ ದಳ ಇಟ್ಟಿದ್ದ.
ಗೊಂದಲಕ್ಕೀಡಾದ ಗಣಪತಿ ಈಗ ಮನಃಶಾಸ್ತ್ರಜ್ಞರ (ಕೌನ್ಸೆಲರ್) ಎದುರು ಸಲಹೆಗೆ ಕುಳಿತಿದ್ದಾನೆ!


ಪ್ರಶ್ನೆಗಳ ಹಳ್ಳ


ಅವನು ಪುರೋಹಿತನ ಮಗ. ಅಳೆದರೆ ಮಡಿವಂತಿಕೆಯಲ್ಲಿ  ಅಪ್ಪನಿಗಿಂತ ಒಂದು ಮುಷ್ಟಿ ಹೆಚ್ಚು. ತನ್ನೊಂದಿಗೆ ಬರುತ್ತಿರುವ ಹುಡುಗಿಯಿಂದ ಎರಡು ಮೀಟರ್ ಅಂತರ ಕಾಪಾಡಿಕೊಂಡು ಮರ್ಯಾದಸ್ಥನ ರೀತಿ ನಡೆಯುತ್ತಿದ್ದ. ಅವರಿಬ್ಬರದ್ದೂ ಸಮಾನಂತರ ಹೆಜ್ಜೆಗಳು. ಎದುರೊಂದು ಸೇತುವೆಯಿರದ ಹಳ್ಳ ಎದುರಾಯಿತು. ಇಬ್ಬರೂ ನೀರೊಳಗೆ ಹೆಜ್ಜೆಯಿಟ್ಟರು. ಅವಳಿಗಿಂತ ಕೆಳಗಿದ್ದ ಇವನಲ್ಲಿ ಈಗೊಂದಿಷ್ಟು ಪ್ರಶ್ನೆಗಳು ಎದ್ದವು... 'ಅವಳು ಕೆಳಜಾತಿಯವಳಾಗಿದ್ದರೆ?', 'ಅವಳಿಗಿವತ್ತು ಮುಟ್ಟಾಗಿದ್ದರೆ? ನನ್ನ ದೇಹವೆಲ್ಲ ಮೈಲಿಯಾಗುತ್ತದೆ'. ಆ ಹಳ್ಳ ಯಾವುದೇ ಮೈಲಿಗೆಯಿಲ್ಲದೆ ಹರಿಯುತ್ತಿತ್ತು.


ಮುಖ ದರ್ಶನ
ಆ ಜನಪ್ರತಿನಿಧಿ ಇನ್ನೋವಾದಲ್ಲೇ ಕುಳಿತು ಆರ್ಡರ್ ಮಾಡಿದ. 'ಇನ್ನೊಂದು ತಿಂಗಳಲ್ಲಿ ಮಳೆ ಶುರು ಆಗ್ಬಹುದು. ಬೇಗ ರಸ್ತೆ ಗುಂಡಿಗಳನ್ನು ಮುಚ್ಚಿ' ಎಂದು ಕಂಟ್ರಾಕ್ಟರ್‌ಗೆ ಹೇಳಿದ. ಅವನು ಹೋದ ಮೇಲೆ ಕಂಟ್ರಾಕ್ಟರ್ ಕೆಲಸದವರಿಗೆ ಗದರಿದ; 'ಮಳೆಗಾಲ ಶುರು ಆಗೋದ್ರೊಳಗೆ ಕೆಲಸ ಮುಗಿಸ್ಲಿಲ್ಲ ಅಂದ್ರೆ ಯಾರಿಗೂ ಬಟವಾಡೆ ಇಲ್ಲ'. ಅಲ್ಲಿದ್ದ ಆಕೆಗೆ ಉಸಿರುಗಟ್ಟಿದ ಹಾಗಾಯ್ತು. 'ಮಳೆ ಈಗಲೇ ಶುರುವಾಗಿದ್ದರೆ ಚೆನ್ನಾಗಿತ್ತು. ಏಳು ತಿಂಗಳಿಂದ ಮುಖ ನೋಡಿಕೊಂಡಿಲ್ಲ. ಒಮ್ಮೆ ರಸ್ತೆ ಗುಂಡಿಯ ನೀರಿನಲ್ಲಿ ಮುಖ ನೋಡಿಕೊಳ್ಳಬಹುದಿತ್ತು' ಎಂದು ಅಂದುಕೊಂಡ ಆಕೆಯ ಬಳಿ ಕನ್ನಡಿ ಕೊಳ್ಳಲೂ ಇಪ್ಪತ್ತು ರುಪಾಯಿಯೂ ಇರಲಿಲ್ಲ!


ಚಪ್ಪಲಿ ಚಿತ್ತ
ಮೋಡದಿಂದ ನೇರ ಬಾಣ ಬಿಟ್ಟಂತೆ ಮಳೆ ಹನಿಗಳು ಉದುರುತಿದ್ದವು. ಅತ್ತಿತ್ತ ಮರ ತಲೆಬಡಿದುಕೊಳ್ಳುವಂತೆ ಭೀಕರ ಗಾಳಿಯೂ ಬೀಸಿತು. ವಾತಾವರಣ ಥಂಡಿ ಏರಿದ್ದೇ ತಡ ಆ ಹವಾಯಿ ಚಪ್ಪಲಿಗೆ ಜೋರು ನೆಗಡಿ- ಜ್ವರ ಬಂತು. ತಲೆ ಸಂಪೂರ್ಣ ಭಾರವಾಗಿ, ಕಣ್ಣು ಬಿಡುವುದಕ್ಕೂ ಅಸಾಧ್ಯವಾಯಿತು. ಅಷ್ಟರಲ್ಲೇ ಯಜಮಾನ ಎಲ್ಲೋ ಹೊರಡಬೇಕೆಂಬ ಅವಸರದಲ್ಲಿ ಆ ಹವಾಯಿ ಚಪ್ಪಲಿಯನ್ನು ಮೆಟ್ಟಿದ. ಹವಾಯಿಗೆ ಸಿಟ್ಟು ನೆತ್ತಿಗೇರಿತು. ಆರಾಮಿಲ್ಲದ ತನ್ನ ಶರೀರವನ್ನು ಹೀಗೆ ಮೆಟ್ಟಿದನಲ್ಲ? ಮಳೆಗಾಲ ಮುಗಿಯುವವರೆಗೂ ಅದಕ್ಕೆ ಜ್ವರ ಬಿಡಲಿಲ್ಲ. ಯಜಮಾನನನ್ನು ಹತ್ತಾರು ಸಲ ಬೀಳಿಸಿದರೂ ಅದರ ಕೋಪ ಇಳಿಯಲಿಲ್ಲ.

- ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!