ಯಾಕೆ ಸಂತಾನಫಲ ಮರೀಚಿಕೆಯಾಗೇ ಉಳಿಯುತ್ತಿದೆ ಎಂಬುದು ತಾಯ್ತನ ಬಯಸಿ ಕಾದು ಕುಳಿತಿರುವ ಅದೆಷ್ಟೋ ಮಹಿಳೆಯರ ಪ್ರಶ್ನೆ. ಕಣ್ಣಿಗೆ ಕಾಣಿಸದ ದೈಹಿಕ ಸಮಸ್ಯೆಗಳು ಕಾರಣವಾಗಿರಬಹುದು ಎಂದು ಅವರು ಯೋಚಿಸುವುದು ಕಡಿಮೆ.
ಮಹಿಳೆಯರ ಆರೋಗ್ಯ ಹದಗೆಡಿಸುವ ಅನೇಕ ಕಾಯಿಲೆಗಳು ನೇರವಾಗಿ ಗರ್ಭಕೋಶಕ್ಕೆ ಸಂಬಂಧಿಸಿವೆ. ಅದರಲ್ಲೂ ಎಂಡೋಮೆಟ್ರಿಯಾಸಿಸ್ ಎಂಬ ಕಾಯಿಲೆ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ. ಆಧುನಿಕ ಜೀವನ ಶೈಲಿ, ಒತ್ತಡದ ಬದುಕಿನ ಫಲ ಎನ್ನಬಹುದಾದ ಈ ಕಾಯಿಲೆ ಯಾವ ಮಹಿಳೆಗೂ, ಯಾವ ಕ್ಷಣದಲ್ಲೂ ಕಾಣಿಸಿಕೊಳ್ಳಬಹುದು.
ಗರ್ಭಕೋಶದ ಒಳ ಪದರಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಎಂಡೋಮೆಟ್ರಿಯಮ್ ಎನ್ನಲಾಗುವುದು. ಇದೇ ರೀತಿಯ ಒಳಪದರದ ಅಂಗಾಂಶ ರೂಪ ದೇಹದ ಇತರ ಭಾಗಗಳಿಗೂ ಹರಡುವ ಸಾಧ್ಯತೆಗಳಿವೆ. ಹೀಗೆ ಬೆಳೆದರೆ ಇದನ್ನು ಎಂಡೋಮೆಟ್ರಿಯಾಸಿಸ್ ಎಂದು ಗುರುತಿಸಬಹುದು. ಇದು ಸಾಮಾನ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸುವುದು ಹೆಚ್ಚು. ಇದಲ್ಲದೆ ಅಂಡಾಶಯ, ಗರ್ಭನಾಳ, ಮೂತ್ರಕೋಶಗಳಲ್ಲೂ ಕಾಣಿಸಬಹುದು.
ಈ ಕಾಯಿಲೆ ನಿರಂತರವಾಗಿ ಮಹಿಳೆಯನ್ನು ನಿತ್ರಾಣಗೊಳಿಸುತ್ತದೆ. ಅಂಡಾಶಯದಲ್ಲಿ ಕಾಣಿಸಿಕೊಂಡರೆ ನೀರು ಗುಳ್ಳೆ ರೂಪ ಪಡೆಯುತ್ತದೆ. ಉರಿಯ ಅನುಭವವಾಗುತ್ತದೆ. ಗರ್ಭಕೋಶದ ಹೊರಗೆ ಬೆಳೆಯುವ ಎಂಡೋಮೆಟ್ರಿಯಾಸಿಸ್, ಶರೀರದಲ್ಲಾಗುವ ಹಾರ್ಮೋನ್ ಬದಲಾವಣೆಗೆ ಸ್ಪಂದಿಸುತ್ತದೆ. ಪ್ರತಿ ತಿಂಗಳು ರಕ್ತಸ್ರಾವ, ಹೊಟ್ಟೆನೋವು ಉಂಟಾಗುತ್ತದೆ. ಇದು ಸಾಧಾರಣವಾಗಿ, ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಲಕ್ರಮೇಣ ಜಾಸ್ತಿಯಾಗುತ್ತದೆ.
25ರಿಂದ 40ರ ಆಸುಪಾಸಿನಲ್ಲಿರುವ ಸ್ತ್ರೀಯರಲ್ಲಿ ಹೆಚ್ಚು. ಮಕ್ಕಳಾಗದವರಲ್ಲಿ ಹೆಚ್ಚಾಗಿ ಕಂಡುಬರುವ ಸಾಧ್ಯತೆಯಿದೆ. ಕುಟುಂಬದಲ್ಲಿ ಅಕ್ಕ, ತಾಯಿ ಅಥವಾ ಮಗಳು ಈ ತೊಂದರೆಯಲ್ಲಿ ಸಿಲುಕಿದ್ದರೂ ಕೂಡಾ ಬರಬಹುದು. ಎಂಡೋಮೆಟ್ರಿಯಾಸಿಸ್ ಹೊಂದಿದ 30-40 ಶೇ. ರೋಗಿಗಳು ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ.
ರೋಗ ನಿರ್ಧಾರ ಮತ್ತು ಚಿಕಿತ್ಸೆ
ವೈದ್ಯಕೀಯ ಪರೀಕ್ಷೆಯಿಂದ ಕಾಯಿಲೆ ಪತ್ತೆ ಸಾಧ್ಯ. ಇದನ್ನು ಲ್ಯಾಪ್ರೋಸ್ಕೋಪಿ ನಡೆಸಿ ಪತ್ತೆಹಚ್ಚಬಹುದು. ಕಾಯಿಲೆಯ ತೀವ್ರತೆಯನ್ನು ಅವಲಂಬಿಸಿ ಚಿಕಿತ್ಸೆ ಲಭ್ಯ. ಔಷಧ, ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದು. ಅಪಾಯಕಾರಿ ಸಂದರ್ಭದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಸಲಹೆ ನೀಡಬಹುದು. ಇದರಿಂದ ಬಂಜೆತನ ಇದ್ದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದು.
ಐವಿಎಫ್ ಚಿಕಿತ್ಸೆಯು ಎಂಡೋಮೆಟ್ರಿಯೋಸಿಸ್ ಇರುವ ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುವ ಪರಿಣಾಮಕಾರಿ ಕಾರ್ಯವಿಧಾನ. ಇದು ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಿಗೆ ಒಂದು ಪ್ರಮುಖ ಆಯ್ಕೆ ಮತ್ತು ವರದಾನ. ಎಂಡೊಮೆಟ್ರಿಯಾಸಿಸ್ ಮತ್ತು ಬಂಜೆತನ ಕುರಿತು ಸಮಾಲೋಚನೆಗೆ: 080-26673585, 26673586.
-ಡಾ. ದೇವಿಕಾ ಗುಣಶೀಲ
ಸ್ತ್ರೀರೋಗ ತಜ್ಞರು, ಗುಣಶೀಲ ಐವಿಎಫ್ ಕೇಂದ್ರ, ಬಸವನಗುಡಿ