ನಮ್ಮಲ್ಲಿ ಬಹುತೇಕರಿಗೆ ಒಂದು ಅಭ್ಯಾಸ. ಅದನ್ನು ದುರಭ್ಯಾಸ ಎಂದೂ ಹೇಳಬಹುದು, ನಂಬಿಕೆ ಎಂದೂ ಕರೆಯಬಹುದು. ಒತ್ತಡದ ಸನ್ನಿವೇಶಗಳಲ್ಲಿ ಕಾಫಿ, ಟೀ ಕುಡಿದರೆ ಮನಸ್ಸು ನಿರಾಳವಾಗುತ್ತದೆ ಎಂದು. ವಾಸ್ತವ ಎಂದರೆ ಇದು ತಪ್ಪು ಕಲ್ಪನೆ. ಈ ಪೇಯಗಳನ್ನು ಕುಡಿದಾಗ ನಿರಾಳತೆಯ ಅನುಭವ ಆಗುವುದು ಒಂದು ವಿಶ್ವಾಸ ಅಷ್ಟೆ. ಕೆಫೀನ್, ಥಿಯೊಬ್ರೊವೈನ್ ಮೊದಲಾದ ನರ ಪ್ರಚೋದಕ ಅಂಶಗಳನ್ನು ಇವು ಹೊಂದಿರುತ್ತವೆ ಎನ್ನುವುದು ಗೊತ್ತಿರುವಂಥದ್ದೇ. ಒತ್ತಡ ತೀವ್ರವಾಗಿದ್ದರೆ ಅದು ಖಿನ್ನತೆಗೂ ದಾರಿಯಾಗಬಲ್ಲದು. ನಿರಂತರ ಒತ್ತಡದ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವವರು ನರ ಪ್ರಚೋದಕಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ನರ ಪ್ರಚೋದಕಗಳಿಂದಾಗಿ ಒತ್ತಡ ಇನ್ನಷ್ಟು ಹೆಚ್ಚುವುದರಿಂದ ಅದು ಕಾಲಕ್ರಮೇಣ ಖಿನ್ನತೆ, ನಿದ್ರಾಹೀನತೆ ಇತ್ಯಾದಿಗಳಿಗೂ ಕಾರಣ ಆಗಬಲ್ಲದು.
ಜಂಕ್ಫುಡ್ಗಳ ಮೋಹಕ್ಕೆ ಬಲಿಯಾಗದವರು ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ಇವು ಒತ್ತಡ ಹೆಚ್ಚಿಸುವುದರಲ್ಲಿ ನಂಬರ್ ಒನ್. ಇವು ತಮ್ಮ ಸ್ವಾದದಿಂದಾಗಿ ನಾಲಗೆಗೆ ರುಚಿ ಕೊಡಬಲ್ಲವೇ ವಿನಾ ಪೌಷ್ಟಿಕತೆಯಿಂದ ದೇಹಕ್ಕೆ ಶಕ್ತಿ ನೀಡಲಾರವು. ಕೊಬ್ಬು ಮತ್ತು ಕಾರ್ಬೊಹೈಡ್ರೇಟ್ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಅವು ಒತ್ತಡ ಉದ್ದೀಪಕ ಗುಣ ಹೊಂದಿವೆ. ಮಿಗಿಲಾಗಿ ಜಂಕ್ಫುಡ್, ಫಾಸ್ಟ್ಫುಡ್ಗಳು ಸಮತೋಲಿತ ಆಹಾರ ಅಲ್ಲವೇ ಅಲ್ಲ. ಆದಕಾರಣ ಒತ್ತಡದ ಸಂದರ್ಭಗಳನ್ನು ಅವುಗಳನ್ನು ವರ್ಜಿಸುವುದು ಒಳ್ಳೆಯ ಉಪಾಯ. ಸಾಧ್ಯವಾದಷ್ಟು ಇಂಥ ಆಹಾರಗಳ ಮೇಲಿನ ಅವಲಂಬನೆ ತಪ್ಪಿಸಿಕೊಳ್ಳಲು ಯತ್ನಿಸುವುದು ಇನ್ನೂ ಒಳ್ಳೆಯದು.
ಒತ್ತಡದ ಸಂದರ್ಭದಲ್ಲಿ ಸಾಫ್ಟ್ಡ್ರಿಂಕ್ಸ್ಗಳನ್ನಂತೂ ಸೇವಿಸಲೇಕೂಡದು. ಅವುಗಳಲ್ಲಿ ವಿಟಮಿನ್, ಖನಿಜಾಂಶ ಏನೇನೂ ಇರುವುದಿಲ್ಲ. ಅವುಗಳಲ್ಲಿ ತುಂಬಿರುವುದೆಲ್ಲ ಕಾರ್ಬೊಹೈಡ್ರೇಟ್ಗಳೇ. ಸಾಮಾನ್ಯವಾಗಿ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ಶರೀರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮತ್ತು ಲ್ಯಾಕ್ಟೇಟ್ಗಳು ಉತ್ಪತ್ತಿಯಾಗುತ್ತವೆ.ಅವನ್ನು 'ಆ್ಯಸಿಡೋಸ್'ಗಳು ಎನ್ನಲಾಗುತ್ತದೆ. ಇವು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಸಾಫ್ಟ್ಡ್ರಿಂಕ್ಸ್ನಲ್ಲಿನ ಕಾರ್ಬೊಹೈಡ್ರೇಟ್ಗಳು ಒತ್ತಡವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ, ಆ್ಯಸಿಡೋಸ್ ಪ್ರಮಾಣವೂ ಹೆಚ್ಚುತ್ತದೆ. ಹಾಗೆಯೇ ಅವುಗಳಲ್ಲಿನ ಸಕ್ಕರೆ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಹೆಚ್ಚಿಸಿ ಇನ್ನಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಾಫ್ಟ್ಡ್ರಿಂಕ್ಸ್ ಜತೆಗೆ ಸಕ್ಕರೆ ಅಧಿಕ ಪ್ರಮಾಣದಲ್ಲಿರುವ ಪದಾರ್ಥಗಳನ್ನೂ ಒತ್ತಡದ ಸಂದರ್ಭಗಳಲ್ಲಿ ಅವಾಯ್ಡ್ ಮಾಡುವುದು ಉತ್ತಮ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)