ಹುಟ್ಟಿದ ಮಗು ಕೂಡ ಮೊಬೈಲ್ ರಿಂಗಾದರೆ ಹೊರಳಿ ನೋಡುವ ಕಾಲ ಸನ್ನಿಹಿತವಾಗಿದೆ. ಇನ್ನು ಬೆಳೆಯುತ್ತಿರುವ, ಬೆಳೆದ ಮಕ್ಕಳ ಪಾಡೇನು ಮೊಬೈಲ್ ಆಟಿಕೆಗಳಂತೆ ಎಲ್ಲರ ಕೈಗೂ ಬಂದು ಎಲ್ಲರನ್ನು ಆಟ ಆಡಿಸುತ್ತಿವೆ. ಅಮೂಲ್ಯ ಕ್ಷಣಗಳು ಮೊಬೈಲ್ನಿಂದ ಸೋರಿ ಹೋಗುತ್ತಿವೆ. ಬೆಲೆಯುಳ್ಳ ಮೊಬೈಲ್ ಪ್ರತಿಷ್ಠೆಯ ಸಂಕೇತವೆಂಬಂತೆ ಮಕ್ಕಳಿಗೆ ನೀಡುವುದು ಸರಿಯಲ್ಲ. ಕಂಪ್ಯೂಟರ್ ಹಾಗೂ ಮೊಬೈಲ್ ಇತ್ಯಾದಿ ಸಾಮಾನುಗಳನ್ನು ಮಕ್ಕಳು ಕೇಳಿದರು ಅಂತ ಕೊಡಿಸಬೇಡಿ. ಪಾಲಕರ ಅತಿಯಾದ ವ್ಯಾಮೋಹ ಮಹಾಭಾರತದ ಗಾಂಧಾರಿಯ ಅತಿ ವ್ಯಾಮೋಹ ಮಕ್ಕಳನ್ನು ಹಾಳು ಮಾಡಿದಂತೆಯೇ ಆಗುತ್ತದೆ. ಡಿಗ್ರಿಗೆ ಬಂದ ನಂತರ ಅವರಿಗೆ ಜೀವನದ ಅರಿವಾಗಿರುತ್ತದೆ. ಆಗ ಮೊಬೈಲ್ ಕೊಡಿಸಿದರೆ ಯಾವ ಅಡ್ಡದಾರಿಯ ಅಪಾಯವಿರುವುದಿಲ್ಲ.ಟಿ
- ಜಯಶ್ರೀ ಭಂಡಾರಿ, ಬಾದಾಮಿ
ಭವಿಷ್ಯದ ಭೂತ ಮೊಬೈಲ್!
ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಅತ್ಯಂತ ಕೆಟ್ಟ ಪರಿಣಾಮವಾಗುತ್ತಿದೆ. ಒಮ್ಮೆ ಮೊಬೈಲ್ ಹಿಡಿದರೆ ದಿನಪೂರ್ತಿ ಅದರಲ್ಲೆ ಕಾಲ ಕಳೆಯುತ್ತಾರೆ. ಇದರಿಂದ ಬೇರೆ ವಿಷಯಗಳತ್ತ ಗಮನಹರಿಸಲು ಆಗುವುದಿಲ್ಲ. ಅವರ ತಿಳುವಳಿಕೆ ಕಡಿಮೆಯಾಗುತ್ತ ಹೋಗುತ್ತದೆ. ಮೊಬೈಲನ್ನು ಕೆಟ್ಟ ರೀತಿಯಲ್ಲಿ ಬಳಸಿ ಮಕ್ಕಳು ಹಾಳಾಗುತ್ತಿದ್ದಾರೆ. ಇದರಿಂದಾಗಿ ಮಕ್ಕಳು ತಮ್ಮ ಭವಿಷ್ಯಕ್ಕೆ ಚ್ಯುತಿ ತಂದುಕೊಳ್ಳುತ್ತಿದ್ದಾರೆ. ಈ ವಾತಾವರಣದ ಸೃಷ್ಟಿಗೆ ಪೋಷಕರೇ ಕಾರಣ. ಮಕ್ಕಳ ರಂಪಾಟಕ್ಕೆ ಸಮಾದಾನದ ಅಸ್ತ್ರವಾಗಿ ನಿಂತಿರುವ ಮೊಬೈಲ್ ಇಂದು ಲಾಲಿ ಪದಗಳನ್ನು ತುಳಿಯುತ್ತಿದೆ. ಮೊಬೈಲ್ನಲ್ಲಿ ಕಾಣಸಿಗುವ ಹಾಡು, ನೃತ್ಯ ಹಾಗೂ ಆಟಗಳು ಇಂದು ಮಕ್ಕಳ ಮನದಾಳದ ಸಂಬಂಧಿಗಳಾಗಿವೆ. ಈ ಅಪಾಯಗಳನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ.ಟಿ
- ಮಮತ ಎಂ, ತುಮಕೂರು
ಮೊಬೈಲ್ ದಾಸರಾಗದಿರಿ
ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪೋಷಕರು ಮೊಬೈಲ್ ನೀಡಬಾರದು. ಏಕೆಂದರೆ ಇಂದಿನ ಈ ಸಮಾಜದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾವಳಿಗೆ ಒಳಗಾಗಿ ಜೀವನವನ್ನೆ ಹಾಳು ಮಾಡಿಕೊಂಡ ಘಟನೆಗಳು ನಮ್ಮೊಂದಿಗಿವೆ. ಅದರಲ್ಲಿಯೂ ಹೆಣ್ಣು ಮಕ್ಕಳು ದಾರಿ ತಪ್ಪಿದ ಘಟನೆಗಳಿವೆ. ಪೋಷಕರು ಮಕ್ಕಳಿಗೆ ಮೊಬೈಲ್ ದಾಸರಾಗಿಸುವ ಮೊದಲು ಯೋಚಿಸಬೇಕಾಗಿದೆ. ಈ ಹಿಂದೆ ಯಾವುದೇ ರೀತಿಯ ಸವಲತ್ತು ಇಲ್ಲದೆ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ವಿದ್ಯಾರ್ಥಿ ಜೀವನ ಮುಗಿದ ಮೇಲೆ ಪರವಾಗಿಲ್ಲ. ಹೀಗಾಗಿ ಪಾಲಕರು ಈ ಬಗ್ಗೆ ಗಂಭಿರವಾಗಿ ಚಿಂತನೆ ನಡೆಸಿ ಮಕ್ಕಳ ಬಗ್ಗೆ ಗಮನಹರಿಸಬೇಕು. ಸರ್ಕಾರ ಕೂಡ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಬಳಕೆಯನ್ನು ನಿಷೇಧಿಸಬೇಕು.ಟಿ
- ರಾಘವೇಂದ್ರ ಪ್ರಭು, ಕರ್ವಾಲು ಉಡುಪಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com