ವಿದೇಶ

ವಿಮಾನ ಸಂಚಾರ ಪುನರಾರಂಭಿಸಲು ತಾಲಿಬಾನ್ ನಾಯಕತ್ವದ ಅಫ್ಘಾನಿಸ್ತಾನ ಸರ್ಕಾರ ಭಾರತಕ್ಕೆ ಮನವಿ

Harshavardhan M

ಕಾಬೂಲ್: ಅಫ್ಘಾನಿಸ್ತಾನ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಭಾರತದೊಂದಿಗೆ ಸಂವಹನ ನಡೆಸಿದೆ. ಸ್ಥಗಿತಗೊಂಡಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲು ತಾಲಿಬಾನ್ ಮುಂದಾಳತ್ವದ ಆಫ್ಘನ್ ಸರ್ಕಾರ ಭಾರತವನ್ನು ಕೋರಿದೆ. 

ಅಫ್ಘಾನಿಸ್ತಾನದ ವಿಮಾನಯಾನ ಸಚಿವ ಅಲ್ಹಜ್ ಹಮೀದುಲ್ಲ ಅಖುಂಝಾದಾ ಈ ಬಗ್ಗೆ ಭಾರತದ ವಿಮಾನಯಾನ ಮುಖ್ಯಸ್ಥ ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. 

ಪತ್ರದ ಸಾರಾಂಶ- 
ನಿಮಗೆ ತಿಳಿದಿರುವಂತೆ ಅಮೆರಿಕ ಪಡೆಗಳು ನಿರ್ಗಮಿಸುವ ಮುನ್ನ ವಿಮಾನ ನಿಲ್ದಾಣಕ್ಕೆ ಹಾನಿ ಉಂಟುಮಾಡಿ ತೆರಳಿದ್ದರು. ಈ ಸಂದರ್ಭದಲ್ಲಿ ನಮ್ಮ ಮಿತ್ರ ರಾಷ್ಟ್ರವಾದ ಕತಾರ್ ತಾಂತ್ರಿಕ ಸಹಕಾರದಿಂದ ವಿಮಾನನಿಲ್ದಾನದ ದೋಷಗಳನ್ನು ಸರಿಪಡಿಸಲಾಗಿದೆ. ಈಗ ಕಾಬೂಲ್ ವಿಮಾನನಿಲ್ದಾಣ ವಿಮಾನ ಕಾರ್ಯಚಾಲನೆಗೊಂಡಿದೆ.

ಅಫ್ಘಾನಿಸ್ತಾನದ ದೇಶೀಯ ವಿಮಾನ ಸಂಸ್ಥಗಳಾದ ಅರಿಯಾನ ಆಫ್ಘನ್ ಏರ್ ಲೈನ್ ಮತ್ತು ಕಾಮ್ ಏರ್ ವಿಮಾನಗಳು ಭಾರತಕ್ಕೆ ಹಾರಾಟ ಶುರುಮಾಡಲು ಸಿದ್ಧವಾಗಿವೆ. ಅದೇ ರೀತಿ ಭಾರತ ವಿಮಾನಯಾನ ಸಂಸ್ಥೆಗಳೂ ಆಫ್ಘನ್ ನೆಲದ ಮೇಲೆ ಹಾರಾಟ ಮುಂದುವರಿಸಬಹುದು. 

ಪತ್ರದಲ್ಲಿ ಭದ್ರತೆಯ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಅಫ್ಘಾನಿಸ್ತಾನ ಭಾರತಕ್ಕೆ ಭರವಸೆ ನೀಡಿದೆ. ಈ ಹಿಂದೆ ಭಾರತದ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಭಾರತ ಮತ್ತು ಕಾಬೂಲ್ ನಡುವೆ ವಿಮಾನ ಹಾರಾಟ ಸದ್ಯಕ್ಕೆ ಮುಂದುವರಿಯುವ ಸೂಚನೆ ನೀಡಿದ್ದರು.

SCROLL FOR NEXT