ನವದೆಹಲಿ: ಕೇಂದ್ರ ಸರ್ಕಾರ ಕಳೆದ ವಾರ ಮೊಬೈಲ್ ಫೋನ್ ಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಿದ ಪರಿಣಾಮ ಆಪಲ್ ಕಂಪನಿಯು ಭಾರತದಲ್ಲಿ ತನ್ನ ಐಫೋನ್ ಗಳ ಬೆಲೆ ಏರಿಕೆ ಮಾಡಿದೆ.
ಐಫೋನ್ ಎಸ್ ಇ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಮೊಬೈಲ್ ಗಳ ಮೇಲಿನ ಬೆಲೆ ಶೇ.3.5ರಷ್ಟು ಹೆಚ್ಚಳ ಮಾಡಲಾಗಿದೆ. ಐಫೋನ್ ಎಸ್ ಇ ಅನ್ನು ಬೆಂಗಳೂರಿನಲ್ಲೇ ಅಸೆಂಬಲ್ ಮಾಡುವುದರಿಂದ ಈ ಸ್ಮಾರ್ಟ್ ಫೋನ್ ದರ ಏರಿಕೆಯಾಗಿಲ್ಲ.
256 ಜಿಬಿ ಐಫೋನ್ ಎಕ್ಸ್ ಮೊಬೈಲ್ ಬೆಲೆ ಈಗ 3000-3500 ರುಪಾಯಿ ಹೆಚ್ಚಳವಾಗಿದೆ. ಐಫೋನ್ 6 ಮತ್ತು 6ಎಸ್ ಗಳ ಮೇಲಿನ ದರ ಕೂಡ 1500 ರುಪಾಯಿ ಏರಿಕೆ ಕಂಡಿದೆ.
ಬೆಲೆ ಏರಿಕೆಯನ್ನು ಆಪಲ್ ಕಂಪನಿ ಖಚಿತಪಡಿಸಿದ್ದು, ಇಂದಿನಿಂದ್ಲೇ ಹೊಸ ಬೆಲೆ ಜಾರಿಯಾಗಲಿದೆ. ಆ್ಯಪಲ್ ಕಂಪನಿಯ ವೆಬ್ ಸೈಟ್ ನಲ್ಲಿ ಕೂಡ ಪರಿಷ್ಕೃತ ದರವನ್ನು ಅಪ್ಡೇಟ್ ಮಾಡಲಾಗಿದೆ.