ವಾಣಿಜ್ಯ

ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ

ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ
ಆರ್ ಬಿಐ (ಸಂಗ್ರಹ ಚಿತ್ರ)
Published On :

ನವದೆಹಲಿ: ಕಳೆದ ನವೆಂಬರ್ 8ರಂದು ನಿಷೇಧಗೊಂಡ 500 ಮತ್ತು 1000 ರು.ಮುಖಬೆಲೆಯ ನೋಟುಗಳ ಎಣಿಕೆಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಆರ್ ಬಿಐ ಹೇಳಿದೆ.

ನೋಟು ನಿಷೇಧವಾದ ದಿನದಿಂದ ಈ ವರೆಗೂ ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸ್ ಮೂಲಕವಾಗಿ ಭಾರಿ ಪ್ರಮಾಣದ  ಹಳೆಯ ನೋಟುಗಳು ಹರಿದುಬಂದಿದ್ದು, ಹೀಗೆ ಆರ್ ಬಿಐಗೆ ಬಂದ ನೋಟುಗಳು ಎಷ್ಟಿವೆ ಎಂಬ ನಿಖರ  ಉತ್ತರಕ್ಕಾಗಿ ಮತ್ತಷ್ಟು ದಿನ ಕಾಯಬೇಕಿದೆ ಎಂದು ಆರ್ ಬಿಐ ಹೇಳಿದೆ. ನೋಟುಗಳು ಎಷ್ಟಿವೆ ಎಂದು ತಿಳಿಸಲು ನಿಖರ ದಿನಾಂಕವನ್ನು ನೀಡುವುದು ಅಸಾಧ್ಯ. ಏಕೆಂದರೆ ನೋಟು ನಿಷೇಧವಾಗಿ 50 ದಿನಗಳು ಕಳೆದರೂ ಬ್ಯಾಂಕಿಗೆ  ಆಗಮಿಸುತ್ತಿರುವ ಹಳೆಯ ನಿಷೇಧಿತ ನೋಟುಗಳು ನಿಂತಿಲ್ಲ. ಹೀಗಾಗಿ ನಿಖರ ದಿನಾಂಕ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಆರ್ ಬಿಐ ಹೇಳಿದೆ.

ಮುದ್ರಣವಾದ ನೋಟುಗಳ ಸಂಖ್ಯೆ ಹಾಗೂ ಚಲಾವಣೆಗೆ ಬಂದಿರುವ ನೋಟುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದರೆ ಆಗ ಕೆಲ ಶಂಕೆಗಳು ಮೂಡುತ್ತವೆ. ನಕಲಿ ನೋಟುಗಳು ಹರಿದಾಡಿರುವ ಶಂಕೆ ವ್ಯಕ್ತವಾಗುತ್ತದೆ. ಬ್ಯಾಂಕಿಗೆ  ಬಂದಿರುವ ನೋಟುಗಳು ನಕಲಿಯೇ ಅಥವಾ ಎಣಿಕೆ ಕಾರ್ಯದ ದೋಷವೇ ಎಂದ ತಿಳಿಯಬೇಕಾಗುತ್ತದೆ. ಒಂದು ವೇಳೆ ನೋಟುಗಳು ಕಡಿಮೆ ಪ್ರಮಾಣದಲ್ಲಿ ಬಂದಿದ್ದರೆ ಆಗ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ  ಎಂದು ಆರ್ ಬಿಐ ತಿಳಿಸಿದೆ.

ಕಳೆದ ನವೆಂಬರ್ 29ರಂದು ವಿತ್ತ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು, ನಿಷೇಧಿತ 500 ರು. ಮುಖಬೆಲೆಯ ಸುಮಾರು 17,165 ಮಿಲಿಯನ್ ನೋಟುಗಳು ಮತ್ತು 1000 ರು.ಮುಖಬೆಲೆಯ 6,858 ಮಿಲಿಯನ್  ನೋಟುಗಳಿವೆ ಎಂದು ಹೇಳಿದ್ದರು. ಈ ಅಂಕಿ ಅಂಶದ ಪ್ರಕಾರ 15.44 ಲಕ್ಷ ಕೋಟಿ ನಿಷೇಧಿತ ನೋಟುಗಳಿದ್ದು, ಡಿಸೆಂಬರ್ 30ರವೆರಗೂ ಸರಿ ಸುಮಾರು 15 ಲಕ್ಷ ಕೋಟಿ ಹಣ ಬ್ಯಾಂಕುಗಳಿಗೆ ಜಮೆಯಾಗಿದೆ. ಈ ಪೈಕಿ ಎಣಿಕೆ ದೋಷ  ಹಾಗೂ ಖೋಟಾ ನೋಟುಗಳನ್ನು ವಿಂಗಡಿಸಬೇಕಾಗುತ್ತದೆ. ಹೀಗಾಗಿ ಹಳೆಯ ನೋಟುಗಳ ನಿಖರ ಮಾಹಿತಿಗೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಆರ್ ಬಿಐ ಹೇಳಿದೆ.

ಈ ಹಿಂದೆಯೂ ಕೂಡ ಕೇಂದ್ರ ವಿತ್ತ ಸಚಿವಾಲಯ ಬ್ಯಾಂಕುಗಳಿಗೆ ಬಂದಿರುವ ನೋಟುಗಳ ಅಂಕಿಅಂಶವನ್ನು ಗಮನಿಸಿದರೆ ಎಣಿಕೆಯಲ್ಲಿ ಲೋಪವಾಗಿರುವ ಕುರಿತು ಶಂಕೆ ಮೂಡುತ್ತಿದೆ. ಎರಡೆರಡು ಬಾರಿ ಎಣಿಕೆಯಾಗಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.