

ಮುಂಬೈ: ಸತತ 4ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು, ವಾರದ ಮೊದಲ ದಿನ ಸೋಮವಾರವೂ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.67ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.66ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 521.16ಅಂಕಗಳ ಏರಿಕೆಯೊಂದಿಗೆ 78,285.07 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 159.50 ಅಂಕಗಳ ಏರಿಕೆಯೊಂದಿಗೆ 24,430.35 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಫಾರ್ಮಾ, ಆಟೋ ವಲಯಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ. 3.59ರಷ್ಟು ಏರಿಕೆ ಕಂಡು ಅತ್ಯಧಿಕ ಲಾಭ ದಾಖಲಿಸಿದವು. ಇದರ ಜೊತೆಗೆ ಮಹೀಂದ್ರಾ & ಮಹೀಂದ್ರಾ, ಭಾರತ್ ಎಲೆಕ್ಟ್ರಾನಿಕ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಹಾಗೂ ಮಾರುತಿ ಸುಜುಕಿ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
ಅಂತೆಯೇ ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಬಜಾಜ್ ಫಿನ್‌ಸರ್ವ್ ಮತ್ತು ಪವರ್ ಗ್ರಿಡ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಪ್ರಮುಖ ಬ್ಯಾಂಕಿಂಗ್ ಷೇರುಗಳಲ್ಲಿ ಖರೀದಿ ಹೆಚ್ಚಳ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆಯಿಂದಾಗಿ ದೇಶೀಯ ಷೇರುಪೇಟೆಗಳು ಸೋಮವಾರ ಸತತ ನಾಲ್ಕನೇ ದಿನವೂ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (FII) ಹೊಸ ಹೂಡಿಕೆಗಳು ಹರಿದು ಬಂದಿರುವುದು ದೇಶೀಯ ಷೇರುಪೇಟೆಯ ಸಕಾರಾತ್ಮಕ ವಾತಾವರಣಕ್ಕೆ ಮತ್ತಷ್ಟು ಬಲ ತುಂಬಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದ್ದು, ಪ್ರಮುಖ ಬ್ಲೂ-ಚಿಪ್ ಬ್ಯಾಂಕಿಂಗ್ ಷೇರುಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಹೂಡಿಕೆದಾರರ ನಿರಂತರ ಹೂಡಿಕೆ, ಜಾಗತಿಕ ಮಾರುಕಟ್ಟೆಗಳಲ್ಲಿನ ಅನುಕೂಲಕರ ವಾತಾವರಣ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆ ದೇಶೀಯ ಷೇರುಪೇಟೆಗೆ ಸಕಾರಾತ್ಮಕ ಬೆಂಬಲ ಒದಗಿಸಿದೆ. ಇದರ ಪರಿಣಾಮವಾಗಿ ಪ್ರಮುಖ ಸೂಚ್ಯಂಕಗಳು ತಮ್ಮ ಏರಿಕೆ ಸರಣಿಯನ್ನು ಮುಂದುವರಿಸಿವೆ ಎಂದಿದ್ದಾರೆ.