ಸುಕೇಶ್ ಚಂದ್ರಶೇಖರ್ ಜೊತೆ 'ಫ್ರೆಂಡ್ ಶಿಪ್' ಮುಂದುವರೆಸಿದ ಜಾಕ್ವೆಲಿನ್, ಸಂಪರ್ಕ ಕಡಿದುಕೊಂಡ ನೋರಾ ಫತೇಹಿ: ತನಿಖಾ ಸಂಸ್ಥೆ

ಸುಕೇಶ್‌ನ ಪ್ರಭಾವಕ್ಕೆ ಒಳಗಾಗಿದ್ದ ಜಾಕ್ವೆಲಿನ್, ಆತನನ್ನು 'ತನ್ನ ಕನಸಿನ ಮನುಷ್ಯ' ಎಂದು ಕರೆಯುತ್ತಿದ್ದರು ಮತ್ತು ಆತನನ್ನು ಮದುವೆಯಾಗಲು ಕೂಡ ಯೋಚಿಸುತ್ತಿದ್ದರು. ಆದರೆ, ನೋರಾ ಫತೇಹಿ ಸುಕೇಶ್ ಚಂದ್ರಶೇಖರ್‌ನನ್ನು ಭೇಟಿಯಾಗಿರಲಿಲ್ಲ. ಬದಲಿಗೆ ವಾಟ್ಸಾಪ್ ಮೂಲಕ ಎರಡು ಬಾರಿ ಆತನೊಂದಿಗೆ ಮಾತನಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಜಾಕ್ವೆಲಿನ್ ಫರ್ನಾಂಡಿಸ್ - ನೋರಾ ಫತೇಹಿ
ಜಾಕ್ವೆಲಿನ್ ಫರ್ನಾಂಡಿಸ್ - ನೋರಾ ಫತೇಹಿ

ನವದೆಹಲಿ: ₹200 ಕೋಟಿ ಸುಲಿಗೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸಂಬಂಧ ಮತ್ತು ಉಡುಗೊರೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ಗುರುವಾರ ಪ್ರಶ್ನಿಸಿದೆ.

2021ರಲ್ಲಿ ಸುಕೇಶ್ ಚಂದ್ರಶೇಖರ್ ಅವರಿಂದ ನೋರಾ ಫತೇಹಿ ಅವರ ಸೋದರ ಮಾವ ಬಿಎಂಡಬ್ಲ್ಯು ಕಾರು ಪಡೆದಿದ್ದರು ಎಂದು ಇಒಡಬ್ಲ್ಯುನ ವಿಶೇಷ ಪೊಲೀಸ್ ಕಮಿಷನರ್ ರವೀಂದರ್ ಯಾದವ್ ಹೇಳಿದ್ದಾರೆ.

ಗುರುವಾರ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಕಚೇರಿಯಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನೂ ಎಂಟು ಗಂಟೆಗಳ ಕಾಲ ಇಒಡಬ್ಲ್ಯು ವಿಚಾರಣೆ ನಡೆಸಿತ್ತು. ಆದರೆ, ಈ ಪ್ರಕರಣದಲ್ಲಿ ಇಬ್ಬರು ನಟಿಯರಿಗೂ ನೇರ ಸಂಬಂಧವಿಲ್ಲ.

ಸುಲಿಗೆ ಮೂಲಕ ಅಪಾರ ಪ್ರಮಾಣದ ಹಣವನ್ನು ಹೊಂದಿದ್ದ ಸುಕೇಶ್, ಬಾಲಿವುಡ್ ನಟಿಯರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ (ಇಒಡಬ್ಲ್ಯು) ರವೀಂದ್ರ ಯಾದವ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಅಧಿಕಾರಿಗಳು ಗುರುವಾರ ನೋರಾ ಫತೇಹಿ, ಆಕೆಯ ಸೋದರ ಮಾವ ಮೆಹಬೂಬ್ ಅಕಾ ಬಾಬಿ ಖಾನ್ ಮತ್ತು ಪಿಂಕಿ ಇರಾನಿ ಮೂವರ ವಿಚಾರಣೆ ನಡೆಸಿದರು.

ಪಿಂಕಿ ಇರಾನಿ ಅವರು ಸುಕೇಶ್ ಚಂದ್ರಶೇಖರ್ ನಿರ್ದೇಶನದ ಮೇರೆಗೆ ನೋರಾ ಫತೇಹಿ ಅವರನ್ನು ಉಡುಗೊರೆಗಳಿಗಾಗಿ ಸಂಪರ್ಕಿಸಿದರು. ಕಳೆದ ವರ್ಷ ಸುಕೇಶ್ ಅವರ ಪತ್ನಿ ಲೀನಾ ಮರಿಯಾ ಒಡೆತನದ ಚೆನ್ನೈನ ಸ್ಟುಡಿಯೋದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರನ್ನು ಕರೆಸಲಾಗಿತ್ತು.

ಈ ಸಂದರ್ಭದಲ್ಲಿ ನೋರಾ ಫತೇಹಿ ಅವರಿಗೆ ಬಿಎಂಡಬ್ಲ್ಯು ಕಾರು ಮತ್ತು ಈವೆಂಟ್‌ನಲ್ಲಿ ಭಾಗವಹಿಸಿದ ಶುಲ್ಕವನ್ನು ನೀಡಲಾಗಿತ್ತು. ಈ ಬಗ್ಗೆ ವಿಚಾರಣೆ ವೇಳೆ ಫತೇಹಿ, ಆ ಉಡುಗೊರೆಯನ್ನು ಪಡೆಯಲು ನಾನು ನಿರಾಕರಿಸಿದೆ. ಆದರೆ, ಅದನ್ನು ತನ್ನ ಸೋದರ ಮಾವ ಮೆಹಬೂಬ್ ಅಲಿಯಾಸ್ ಬಾಬಿಗೆ ನೀಡಬೇಕು ಎಂದು ಅವರು ಹೇಳಿದ್ದಾಗಿ ತಿಳಿಸಿದ್ದಾರೆ.

ಮೊರಾಕೊ ಮೂಲದ ಮೆಹಬೂಬ್, ಹೆಚ್ಚಾಗಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಬಾಲಿವುಡ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸನ್ನಿ ಲಿಯೋನ್ ಮುಖ್ಯ ಪಾತ್ರದಲ್ಲಿ ನಟಿಸಿದ 'ಲೀಲಾ ಏಕ್ ಪೆಹಲಿ' ಚಿತ್ರವನ್ನು ಸಹ ನಿರ್ದೇಶಿಸಿದ್ದರು.

ಪಿಂಕಿ ಇರಾನಿ ಅವರ ಕೋಡ್ ವರ್ಡ್ 'ಏಂಜೆಲ್' ಎಂದಾಗಿತ್ತು ಎಂದು ಮೂಲಗಳು ತಿಳಿಸಿವೆ. ಆಕೆ ನೋರಾ ಫತೇಹಿ ಅವರಿಗೆ ತಾನು ಏಂಜೆಲ್ ಎಂಬ ಕೋಡ್ ಹೆಸರಿನೊಂದಿಗೆ ಪರಿಚಯಿಸಿದ್ದರು. ಇರಾನಿ ಮೂಲಕ ಚಂದ್ರಶೇಖರ್ ಪದೇ ಪದೇ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ನೋರಾ ಫತೇಹಿ ಅವರು ಆಗಾಗ್ಗೆ ನಿರ್ಲಕ್ಷಿಸುತ್ತಿದ್ದರು  ಎಂದು ಇಒಡಬ್ಲ್ಯು ಅಧಿಕಾರಿಗಳು ತಿಳಿಸಿದ್ದಾರೆ.

'ವಿಚಾರಣೆ ವೇಳೆ ನಾವು ಫತೇಹಿ, ಇರಾನಿ ಮತ್ತು ಮೆಹಬೂಬ್ ಅವರನ್ನು ಕರೆದು ಪರಸ್ಪರ ಮುಖಾಮುಖಿ ಮಾಡಿದ್ದೇವೆ. ನಾವು ಅವರ ಹೇಳಿಕೆಗಳನ್ನು ಪ್ರತ್ಯೇಕವಾಗಿ ದಾಖಲಿಸಿದ್ದೇವೆ' ಎಂದು ಅಧಿಕಾರಿಯೊಬ್ಬರು ಹೇಳಿದರು.

ಈಮಧ್ಯೆ, ಫರ್ನಾಂಡೀಸ್‌ ಅವರ ಮ್ಯಾನೇಜರ್ ಆಗಿರುವ ಪ್ರಶಾಂತ್ ಅವರಿಂದ ಸುಮಾರು ₹ 8 ಲಕ್ಷ ಬೆಲೆಯ ಡುಕಾಟಿ ಎಂಬ ಸೂಪರ್ ಬೈಕ್ ಅನ್ನು ಇಒಡಬ್ಲ್ಯು ವಶಪಡಿಸಿಕೊಂಡಿದೆ. ಈ ಬೈಕ್ ಅನ್ನು ಚಂದ್ರಶೇಖರ್ ಅವರು ಪ್ರಶಾಂತ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

ಸುಕೇಶ್ ಚಂದ್ರಶೇಖರ್‌ನ ಪ್ರಭಾವಕ್ಕೆ ಒಳಗಾಗಿದ್ದ ಜಾಕ್ವೆಲಿನ್, ಆತನನ್ನು 'ತನ್ನ ಕನಸಿನ ಮನುಷ್ಯ' ಎಂದು ಕರೆಯುತ್ತಿದ್ದರು ಮತ್ತು ಆತನನ್ನು ಮದುವೆಯಾಗಲು ಕೂಡ ಯೋಚಿಸುತ್ತಿದ್ದರು. ಆದರೆ, ನೋರಾ ಫತೇಹಿ ಸುಕೇಶ್ ಚಂದ್ರಶೇಖರ್‌ನನ್ನು ಭೇಟಿಯಾಗಿರಲಿಲ್ಲ. ಬದಲಿಗೆ ವಾಟ್ಸಾಪ್ ಮೂಲಕ ಎರಡು ಬಾರಿ ಆತನೊಂದಿಗೆ ಮಾತನಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಎಎನ್‌ಐ ಜೊತೆ ಮಾತನಾಡಿದ ರವೀಂದರ್ ಯಾದವ್, ಸುಕೇಶ್‌ನ ಅಪರಾಧದ ಪೂರ್ವಾಪರ ತಿಳಿದ ನಂತರವೂ ಜಾಕ್ವೆಲಿನ್‌ ಫರ್ನಾಂಡಿಸ್ ಅವರು ಆತನೊಂದಿಗಿನ ಸಂಬಂಧವನ್ನು ಕಡಿತಗೊಳಿಸಿಲ್ಲದ ಕಾರಣ ಜಾಕ್ವೆಲಿನ್‌ಗೆ ಹೆಚ್ಚಿನ ತೊಂದರೆಗಳಿವೆ. ಆದರೆ, ಇದರಲ್ಲಿ ಏನೋ ಸಂಚಿದೆ ಎಂಬುದನ್ನು ಅರಿತ ನೋರಾ ಫತೇಹಿ, ಆತನ ಸಂಪರ್ಕವನ್ನು ಕಡಿತಗೊಳಿಸಿದ್ದರು' ಎಂದು ತಿಳಿಸಿದ್ದಾರೆ.

ಗುರುವಾರ ನಡೆದ ವಿಚಾರಣೆಯಲ್ಲಿ ನೋರಾ ಫತೇಹಿ ಅವರು ಉಡುಗೊರೆಯನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಬಿಎಂಡಬ್ಲ್ಯು ಕಾರನ್ನು ನೋರಾ ಅವರ ಸೋದರ ಮಾವ ಇಟ್ಟುಕೊಂಡಿದ್ದರು ಎಂಬುದು ತಿಳಿದುಬಂದಿದೆ.

ದೆಹಲಿ ಪೊಲೀಸರ ಪ್ರಕರಣದಲ್ಲಿ ನೋರಾ ಕೂಡ ಸಾಕ್ಷಿಯಾಗುವ ಸಾಧ್ಯತೆಯಿದೆ. ಆದರೆ, ತನಿಖೆ ಇನ್ನೂ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com