

ನವದೆಹಲಿ: ಬಹು ನಿರೀಕ್ಷಿತ ಟೀಂ ಇಂಡಿಯಾ ಕೋಚ್ ಸ್ಥಾನಕ್ಕಾಗಿ ಗುರುವಾರ ಬಿಸಿಸಿಐ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದ್ದು, ಹಿಂದಿ ಮಾತನಾಡಬಲ್ಲ ಕೋಚ್ ಗಾಗಿ ಬಿಸಿಸಿಐ ಶೋಧ ನಡೆಸಿದೆ.
ಬಿಸಿಸಿಐ ಅಹ್ವಾನಿಸಿರುವ ಕೋಚ್ ಹುದ್ದೆಗೆ 9 ಮಾನದಂಡಗಳನ್ನು ಕೇಳಲಾಗಿದ್ದು, ಪ್ರಮುಖವಾಗಿ ಹಿಂದಿ ಮಾತನಾಡಬಲ್ಲವರಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮೇ 22ರಂದೇ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಇಂದು ಈ ವಿಚಾರ ಬಹಿರಂಗವಾಗಿದೆ. ಅರ್ಜಿ ಸಲ್ಲಿಸಲು ಜೂನ್ 10ನೇ ತಾರಿಖು ಕೊನೆಯ ದಿನಾಂಕವೆಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು, "ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲವರಿಗೆ ಮತ್ತು ತಮ್ಮ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸುವ ಕೋಚ್ ಗಾಗಿ ಹುಡುಕಾಟ ನಡೆದಿದೆ. ಅರ್ಜಿ ಸಲ್ಲಿಸಲು ಜೂನ್ 10 ಅಂತಿಮ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ಅರ್ಜಿಗಳು ಬಂದ ನಂತರ ಅವುಗಳನ್ನು ಪರಿಶೀಲಿಸಿ ಸೂಕ್ತ ವ್ಯಕ್ತಿಯನ್ನು ಇನ್ನೆರಡು ತಿಂಗಳಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ರೇಸ್ ನಲ್ಲಿ ದ್ರಾವಿಡ್ ಮತ್ತು ಶಾಸ್ತ್ರಿ ಮುಂಚೂಣಿಯಲ್ಲಿ
ಇನ್ನು ಪ್ರಸ್ತುತ ಟೀಂ ಇಂಡಿಯಾದ ಕೋಚ್ ಸ್ಥಾನಕ್ಕಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಕರ್ನಾಟಕದ ಕ್ರಿಕೆಟ್ ದಂತಕಥೆ ದಿವಾಲ್ ಖ್ಯಾತಿ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ರಾಹುಲ್ ದ್ರಾವಿಡ್ ಅವರು ಅಂಡರ್ 19 ವಿಶ್ವಕಪ್ ತಂಡಕ್ಕೆ ಕೋಚ್ ಆಗಿ ಸಮರ್ಥವಾಗಿ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ಮುಕ್ತಾಯವಾದ ಅಂಡರ್ 19 ವಿಶ್ವಕಪ್ ನಲ್ಲಿ ದ್ರಾವಿಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಭಾರತ ತಂಡ ಫೈನಲ್ ಗೆ ತಲುಪಿತ್ತು. ಅಂತೆಯೇ ರವಿಶಾಸ್ತ್ರಿ ಕೂಡ ಟೀಂ ಇಂಡಿಯಾದ ಹಂಗಾಮಿ ಕೋಚ್ ಮತ್ತು ತಂಡದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಕೂಡ ಗಮನಾರ್ಹ ಪ್ರದರ್ಶನ ನೀಡಿತ್ತು. ಹೀಗಾಗಿ ಈ ಇಬ್ಬರ ಹೆಸರು ಕೋಚ್ ಸ್ಥಾನಕ್ಕಾಗಿ ಬಲವಾಗಿ ಕೇಳಿಬರುತ್ತಿವೆ.
ದ್ರಾವಿಡ್ ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗರು
ಭಾರತ ತಂಡದ ಮಾಜಿ ಆಟಗಾರರು ಹಾಗೂ ಇತರೆ ವಿದೇಶಿ ಆಟಗಾರರು ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆದ್ರಾವಿಡ್ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದು, ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಕೋಚ್ ಡೇನಿಯಲ್ ವೆಟ್ಟೋರಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇದಲ್ಲದೇ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್, ಜೆಸ್ಟಿನ್ ಲ್ಯಾಂಗರ್ ಅವರ ಹೆಸರುಗಳು ಸಹ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕೇಳಿಬರುತ್ತಿವೆ. ಇದರಿಂದ ಯಾರನ್ನು ಕೋಚ್ ಆಗಿ ನೇಮಿಸಬೇಕು ಎಂಬ ವಿಚಾರ ಇದೀಗ ಬಿಸಿಸಿಐಗೆ ತಲೆ ನೋವಾಗಿದೆ. ಹೀಗಾಗಿ ಅರ್ಜಿ ಆಹ್ವಾನಿಸಿರುವ ಬಿಸಿಸಿಐ ತಮ್ಮ ಮಾನದಂಡಗಳಿಗೆ ಅನುಗುಣವಾಗಿರುವ ಕೋಚ್ ಆಯ್ಕೆಗೆ ನಿರ್ಧರಿಸಿದೆ.
ಡಂಕನ್ ಫ್ಲೆಚ್ಚರ್ ಅವರ ಅವಧಿ ಮುಗಿದ ನಂತರ ಕಳೆದ 2015 ವಿಶ್ವಕಪ್ ನಿಂದ ಟೀಂ ಇಂಡಿಯಾದ ಕೋಚ್ ಸ್ಥಾನ ಖಾಲಿ ಇದ್ದು. ಇದುವರೆಗೂ ಯಾರನ್ನು ಸಹ ಆಯ್ಕೆ ಮಾಡದೆ ರವಿಶಾಸ್ತ್ರಿ ಅವರು ಕೋಚ್ ಹಾಗೂ ನಿರ್ದೇಶಕ ಎರಡೂ ಸ್ಥಾನಗಳನ್ನು ನಿಭಾಯಿಸುತ್ತಿದ್ದರು. ಇದೇ ಜೂನ್ ನಲ್ಲಿ ಜಿಂಬಾಬ್ಬೆ ಪ್ರವಾಸ ಮಾಡಲಿರುವ ಭಾರತ ತಂಡ 3 ಏಕದಿನ ಕ್ರಿಕೆಟ್ ಹಾಗೂ 2 ಟ್ವೆಂಟಿ20 ಪಂದ್ಯಗಳನ್ನಾಡಲಿದ್ದು, ನಂತರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಹೀಗಾಗಿ ಈ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆಯಾಗುವ ಸಾಧ್ಯತೆ ಇದೆ.