ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರಿ ಪೈಪೋಟಿ; 57 ಮಂದಿಯಿಂದ ಅರ್ಜಿ!

ಟೀಂ ಇಂಡಿಯಾದ ಪ್ರಧಾನ ತರಬೇತುದಾರ ಹುದ್ದೆಗೆ ಭಾರಿ ಪೈಪೋಟಿ ಎದುರಾಗಿದ್ದು, ಬರೊಬ್ಬರಿ 57 ಮಂದಿ ಮಾಜಿ ಕ್ರಿಕೆಟಿಗರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ...
ಕೋಚ್ ಸ್ಥಾನಕ್ಕೆ 57 ಅರ್ಜಿ (ಸಂಗ್ರಹ ಚಿತ್ರ)
ಕೋಚ್ ಸ್ಥಾನಕ್ಕೆ 57 ಅರ್ಜಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಟೀಂ ಇಂಡಿಯಾದ ಪ್ರಧಾನ ತರಬೇತುದಾರ ಹುದ್ದೆಗೆ ಭಾರಿ ಪೈಪೋಟಿ ಎದುರಾಗಿದ್ದು, ಬರೊಬ್ಬರಿ 57 ಮಂದಿ ಮಾಜಿ ಕ್ರಿಕೆಟಿಗರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು  ತಿಳಿದುಬಂದಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದು, ತಂಡದ ಮಾಜಿ ನಿರ್ದೇಶಕ ರವಿಶಾಸ್ತಿ, ಆಯ್ಕೆ ಸಮಿತಿಯ ಹಾಲಿ ಅಧ್ಯಕ್ಷ ಸಂದೀಪ್  ಪಾಟೀಲ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೇಸನ್ ಗಿಲ್ಲೆಸ್ಪಿ, ಸ್ಟುವರ್ಟ್ ಲಾ ಅವರು ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ಭಾರತದ ಮಾಜಿ ಆಟಗಾರರಾದ  ಹೃಷಿಕೇಶ್ ಕಾನಿಟ್ಕರ್, ವಿಕ್ರಮ್ ರಥೌರ್,  ಪ್ರವೀಣ್ ಅಮ್ರೆ, ವೆಂಕಟೇಶ್ ಪ್ರಸಾದ್, ಬಲ್ವೀಂದರ್ ಸಿಂಗ್ ಸಂಧು, ಸುರೇಂದರ್ ಭಾವೆ ಸೇರಿದಂತೆ 57 ಮಂದಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು  ಬಿಸಿಸಿಐ ತಿಳಿಸಿದೆ.

ಟೀಂ ಇಂಡಿಯಾ ಕೋಚ್‌ಗಾಗಿ ಜಾಹೀರಾತು ನೀಡಿದ್ದ ಬಿಸಿಸಿಐ ಜೂನ್ 10ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಜೂನ್ 10ರ ಗಡುವು ಮುಕ್ತಾಯವಾದ ಬಳಿಕ ಎಷ್ಟು ಅರ್ಜಿಗಳು ಬಂದಿವೆ  ಎನ್ನುವುದನ್ನು ಪ್ರಕಟಣೆಯ ಮೂಲಕ ತಿಳಿಸಿದೆ. ಭಾರತ ಹಾಗೂ ವಿದೇಶದ ಮಾಜಿ ಆಟಗಾರರಿಂದಲೂ ಅರ್ಜಿಗಳು ಬಂದಿದ್ದು, ಸ್ವೀಕರಿಸಿದ ಅರ್ಜಿಗಳನ್ನು ಅಜಯ್ ಶಿರ್ಕೆ ನೇತೃತ್ವದ  ಕಾರ್ಯದರ್ಶಿಗಳ ತಂಡ ಪರಿಶೀಲಿಸಲಿದೆ. ನಮ್ಮ ಎಲ್ಲ ಮಾನದಂಡಗಳಿಗೆ ಅರ್ಹವಾಗಿರುವ ಅರ್ಜಿಗಳನ್ನು ಬಳಿಕ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದೆ.

ಇನ್ನು ಪ್ರಮುಖ ಬೆಳವಣಿಗೆಯಲ್ಲಿ ಟೀಂ ಇಂಡಿಯಾದ ಕೋಚ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಂಜಯ್ ಬಂಗಾರ್ ಅವರು ಅರ್ಜಿ ಸಲ್ಲಿಸದೇ ಇರುವುದು ಕುತೂಹಲ ಕೆರಳಿಸಿದೆ. ಟಿ20  ವಿಶ್ವಕಪ್ ಅಂತ್ಯದೊಂದಿಗೇ ಟೀಂ ಇಂಡಿಯಾದ ಸಹಾಯಕ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರ ಅಧಿಕಾರವಧಿ ಮುಕ್ತಾಯವಾಗಿತ್ತು. ಹೀಗಾಗಿ ಬಂಗಾರ್ ಟೀಂ ಇಂಡಿಯಾ ಕೋಚ್  ಸ್ಥಾನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ಆದರೆ ಪ್ರಸ್ತುತ ಸಂಜಯ್ ಬಂಗಾರ್ ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ತಂಡದ ತಾತ್ಕಾಲಿಕ ಕೋಚ್ ಜವಾಬ್ದಾರಿ  ನಿಭಾಯಿಸುತ್ತಿದ್ದು, ಇದೇ ಕಾರಣಕ್ಕೆ ಅವರು ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಲಾಗುತ್ತಿದೆ. ಬಂಗಾರ್ ಅವರ ತಂಡದ ಇತರೆ ಸದಸ್ಯರಾದ ಭರತ್ ಅರುಣ್, ಆರ್.ಶ್ರೀಧರ್ ಕೋಚ್  ಸ್ಥಾನಕ್ಕೆ ಅರ್ಜಿ ಸಲ್ಲಿಸಿಲ್ಲ. ಆದರೆ ಬಿಸಿಸಿಐ ವಿಶೇಷಜ್ಞ ಕೋಚ್ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್) ಹುದ್ದೆಗಳಿಗೂ ಅರ್ಜಿ ಆಹ್ವಾನಿಸುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com