

ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಯ್ಲ್ ತಮ್ಮ ಮೋಜು ಮಸ್ತಿಯಿಂದಲೇ ಖ್ಯಾತಿ-ಕುಖ್ಯಾತಿ ಎರಡನ್ನೂ ಪಡೆದಿದ್ದಾರೆ. ಕ್ರಿಕೆಟ್ ಗೂ ತಮ್ಮ ಮೋಜಿಗೂ ಯಾವುದೇ ಸಂಬಂಧ ಬೆಸೆಯದ ಗೇಯ್ಲ್ ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.
ಗೇಯ್ಲ್ ಮೋಜು ಮಸ್ತಿ ಸಾಮಾನ್ಯವೇ ಆದರೂ, ಪ್ರಮುಖ ಟೂರ್ನಿಯೊಂದರ ಬಳಿಕ ಅಂದರೆ ಇತ್ತೀಚೆಗೆ ಕೊನೆಗೊಂಡ ಐಪಿಎಲ್ ಟೂರ್ನಿ ಸೋಲಿನ ಬಳಿಕ ಗೇಯ್ಲ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ತಮ್ಮ ಯಾವುದೇ ಸಹ ಆಟಗಾರರು ಇಲ್ಲದೇ.. ಇದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಾಸ್ಪದ ವಿಷಯವಾಗಿದ್ದು, ಪಾರ್ಟಿಯಲ್ಲಿ ಗೇಯ್ಲ್ ಕುಣಿದಿರುವ ದೃಶ್ಯ ಇದೀಗ ವೈರಲ್ ಆಗಿದೆ.
ಆರ್ ಸಿಬಿಯ ಯಾವುದೇ ಆಟಗಾರರು ಪಾರ್ಟಿ ಮಾಡುವ ಯೋಚನೆಯಲ್ಲಿ ಇಲ್ಲದೇ ಇದ್ದರೂ ಕ್ರಿಸ್ ಗೇಯ್ಲ್ ಮಾತ್ರ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕ್ರಿಸ್ ಗೇಯ್ಲ್ ಸರ್ಫರಾಜ್ ಖಾನ್ ಸಾಥ್ ನೀಡಿದ್ದರಾದರೂ, ಅವರು ಸ್ಟೇಜ್ ಮೇಲೆ ಬಂದು ಗೇಯ್ಲ್ ರೊಂದಿಗೆ ಹೆಜ್ಜೆ ಹಾಕಲಿಲ್ಲ. ಕೇವಲ ಗೇಯ್ಲ್ ಡ್ಯಾನ್ಸ್ ನೋಡುವುದರಲ್ಲೇ ಸರ್ಫರಾಜ್ ಖಾನ್ ತಲ್ಲೀನರಾಗಿದ್ದರು.
ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕ್ರಿಸ್ ಗೇಯ್ಲ್, ಸೋಲಿರಲಿ ಅಥವಾ ಗೆಲುವಿರಲಿ ನಾನು ಇರುವುದೇ ಹೀಗೆ. ಭಾರತದಲ್ಲಿ ಇದೇ ನನ್ನ ಕೊನೆಯ ರಾತ್ರಿ. ನಾಳೆ ಬೆಳಗ್ಗೆ ಲಂಡನ್ ಗೆ ಹೋಗುತ್ತಿದ್ದು, ಅಲ್ಲಿ ನನ್ನ ಡ್ಯಾನ್ಸ್ ಮುಂದುವರೆಯುತ್ತದೆ. ನೀವು ನನ್ನ ಚಾಂಪಿಯನ್ ಡ್ಯಾನ್ಸ್ ಅನ್ನು ಮಿಸ್ ಮಾಡಿಕೊಳ್ಳುವುದರಿಂದ ಈಗಲೇ ಡ್ಯಾನ್ಸ್ ಪಾಠ ಕಲಿಯಿರಿ ಎಂದು ಗೇಯ್ಲ್ ಇನ್ಸ್ ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಡ್ಯಾನ್ಸಿಂಗ್ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.