

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯ ವೀಕ್ಷಿಸಲು ಆರ್ಥಿಕವಾಗಿ ದುರ್ಬಲವಾಗಿರುವ ಸುಮಾರು 15 ಸಾವಿರ ಬಡ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ಆಯೋಜಕರು ನಿರ್ಧರಿಸಿದ್ದಾರೆ.
ಮಾರ್ಚ್ 4ರಿಂದ ಮಾರ್ಚ್ 8ರವರೆಗೆ ಒಟ್ಟು ಐದು ದಿನಗಳ ಕಾಲ ನಡೆಯುವ ಪಂದ್ಯದಲ್ಲಿ ಮಕ್ಕಳಿಗೆ ಮೂರು ದಿನಗಳ ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಲಾಗುತ್ತಿದೆ. ಪ್ರತಿ ನಿತ್ಯ ಐದು ಸಾವಿರ ಮಕ್ಕಳಂತೆ ಮೂರು ದಿನಗಳ ಕಾಲ 15 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪಂದ್ಯ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಎ, ಬಿ ಮತ್ತು ಸಿ ಸ್ಯ್ಟಾಂಡ್ ಗಳಲ್ಲಿ ಸ್ಥಳಾವಕಾಶ ಮೀಸಲಿಡಲಾಗಿದ್ದು, ಮಕ್ಕಳಿಗೆ ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಈಗಾಗಲೇ ಕೆಲವು ಶಾಲೆಗಳನ್ನು ಗುರುತಿಸಲಾಗಿದ್ದು, ಮಕ್ಕಳ ಪ್ರಯಾಣಕ್ಕಾಗಿ ಲವು ಶಾಲೆಗಳು ತಮ್ಮದೇ ಸಾರಿಗೆ ವ್ಯವಸ್ಥೆಗಳನ್ನು ಮಾಡಲಿವೆ. ಉಳಿದ ಮಕ್ಕಳಿಗಾಗಿ ಕೆಎಸ್‌ಆರ್‌ಟಿಸಿ ಸಾರಿಗೆಯನ್ನು ಸಂಪರ್ಕಿಸಲಾಗುತ್ತದೆ ಎಂದು ಇದೇ ವೇಳೆ ಆಯೋಜಕರು ತಿಳಿಸಿದ್ದಾರೆ.
ಮೊದಲೆರಡು ದಿನದ ಟಿಕೆಟ್ ಗಾಗಿ ಭಾರಿ ಬೇಡಿಕೆ
ಇನ್ನು ಪಂದ್ಯ ಶನಿವಾರ ಆರಂಭಗೊಳ್ಳುವುದರಿಂದ ಮೊದಲೆರೆಡು ದಿನ ಅಂದರೆ ಶನಿವಾರ ಮತ್ತು ಭಾನುವಾರದ ಟಿಕೆಟ್ ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಆನ್ ಲೈನ್ ಮತ್ತು ಕೌಂಟರ್ ಗಳ ಟಿಕೆಟ್ ಗಳಿಗೆ ಈಗಾಗಲೇ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಕ್ರೀಡಾಂಗಣದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು 2015ರ ನವೆಂಬರ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವೆ ಫ್ರೀಡಂ ಸೀರಿಸ್'ನ ಆತಿಥ್ಯವಹಿಸಿದ್ದ ಸಂದರ್ಭದಲ್ಲಿ ಕೆಎಸ್‌ಸಿಎ ಐದು ದಿನಗಳ ಕಾಲ 25,000ಕ್ಕೂ ಅಧಿಕ ಬಡಮಕ್ಕಳಿಗೆ ಉಚಿತವಾಗಿ ಟೆಸ್ಟ್ ಪಂದ್ಯ ವೀಕ್ಷಿಸಲು ಆಹ್ವಾನ ನೀಡಿತ್ತು. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಕೇವಲ ಒಂದುದಿನ ಪಂದ್ಯ ಸಾಧ್ಯವಾಗಿತ್ತು.