

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಈಗಾಗಲೇ ಅತೀ ಹೆಚ್ಚು ರನ್ ಗಳಿಸಿ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಆಕಾಂಕ್ಷಿಯಾಗಿರುವ ಭಾರತದ ಶಿಖರ್ ಧವನ್ ಮತ್ತೊಂದು ದಾಖಲೆ ನಿರ್ಮಿಸಿದ್ದು, ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಶಿಖರ ಧವನ್ ಈ ವರೆಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ 9 ಪಂದ್ಯಗಳನ್ನಾಡಿದ್ದು, 85.00 ಸರಾಸರಿಯಲ್ಲಿ ಮತ್ತು 101.79 ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 680 ರನ್ ಕಲೆಹಾಕಿದ್ದಾರೆ. ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಕೆ ಮಾಡಿದ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಲಿತ್ತು. ಗಂಗೂಲಿ ಒಟ್ಟು 11 ಪಂದ್ಯಗಳಲ್ಲಿ 665 ರನ್ ಕಲೆ ಹಾಕಿದ್ದರು. ಇದೀಗ ಈ ದಾಖಲೆಯನ್ನು ಧವನ್ ಹಿಂದಿಕ್ಕಿದ್ದಾರೆ.
ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ ಧವನ್ 4ನೇ ಸ್ಥಾನ ಪಡೆದಿದ್ದು, ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಯ್ಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಯ್ಲ್ ಒಟ್ಟು 17 ಪಂದ್ಯಗಳಲ್ಲಿ 791 ರನ್ ಸಿಡಿಸಿದ್ದು, 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಇದ್ದು ಅವರು 21 ಪಂದ್ಯಗಳಲ್ಲಿ 742 ರನ್ ಗಳಿಸಿದ್ದಾರೆ. ಇದೇ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ 3ನೇ ಸ್ಥಾನದಲ್ಲಿದ್ದು, 21 ಪಂದ್ಯಗಳಿಂದ ಅವರು 383 ರನ್ ಗಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಧವನ್ ಇದ್ದರೆ, ಐದನೇ ಸ್ಥಾನದಲ್ಲಿ ಗಂಗೂಲಿ ಇದ್ದಾರೆ.
ಆರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ ಜಾಕ್ ಕಾಲಿಸ್ ಇದ್ದು, ಅವರು ಒಟ್ಟು 17 ಪಂದ್ಯಗಳಿಂದ 653 ರನ್ ಗಳಿಸಿದ್ದಾರೆ.