ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ದ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿದ್ದಾರೆ.
ನಿದಾನಗತಿಯ ಆರಂಭ ಕಂಡರೂ ಆಸಿಸ್ ವೇಗಿಗಗಳನ್ನು ಸಮರ್ಥವಾಗಿ ಎದುರಿಸಿದ ಧವನ್ ಕ್ರಮೇಣ ತಮ್ಮ ರನ್ ವೇಗವನ್ನು ಹೆಚ್ಚಿಸಿಕೊಂಡು ಕೇವಲ 96 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಶಿಖರ್ ಧವನ್ ಗೆ ಇದು ಏಕದಿನ ವೃತ್ತಿ ಜೀವನದ 17 ಶತಕವಾಗಿದೆ. ಧವನ್ ರ ಈ ಅದ್ಭುತ ಇನ್ನಿಂಗ್ಸ್ ನಲ್ಲಿ 16 ಬೌಂಡರಿಗಳು ಸೇರಿದ್ದವು.
ಇದಕ್ಕೂ ಮೊದಲು ಧವನ್ ರೋಹಿತ್ ಶರ್ಮಾ ಜೊತೆಗೂಡ ದಾಖಲೆಯ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 127 ರನ್ ಗಳ ಭರ್ಜರಿ ಜೊತೆಯಾಟವಾಡಿತ್ತು. ರೋಹಿತ್ ಶರ್ಮಾ ನಿರ್ಗಮನದ ಬಳಿಕ ನಾಯಕ ಕೊಹ್ಲಿ ಜೊತೆಗೂಡಿದ ಧವನ್ ಭರ್ಜರಿ ಬ್ಯಾಟಿಂಗ್ ಮೂಲಕ ತಮ್ಮ ಶತಕ ಸಿಡಿಸಿದರು. ಅಲ್ಲದೆ ಕೊಹ್ಲಿ ಜೊತೆಗೂಡಿ 93 ರನ್ ಗಳ ಉತ್ತಮ ಜೊತೆಯಾಟವಾಡಿದರು.
ಇನ್ನು ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 39 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿದೆ. 117 ರನ್ ಗಳಿಸಿದ್ದ ಶಿಖರ್ ಧವನ್ ಸ್ಟಾರ್ಕ್ ವಿಕೆಟ್ ಒಪ್ಪಿಸಿದ್ದು, 48 ರನ್ ಗಳಿಸಿರುವ ಕೊಹ್ಲಿ ಮತ್ತು 2 ರನ್ ಗಳಿಸಿರುವ ಹಾರ್ದಿಕ್ ಪಾಂಡ್ಯಾ ಕ್ರೀಸ್ ನಲ್ಲಿದ್ದಾರೆ.