

ಕೊಲಂಬೋ: ಶ್ರೀಲಂಕಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಆಕರ್ಷಕ ಶತಕ ಸಿಡಿಸಿದ ದ್ರುವ್ ಜುರೆಲ್ ಐತಿಹಾಸಿಕ ಸಾಧನೆ ಮಾಡಿದ್ದು ಇದೇ ಸಂದರ್ಭದಲ್ಲಿ ತಮ್ಮ ಹೊಸ ಟ್ಯಾಟೂವನ್ನು ಕೂಡ ರಿವೀಲ್ ಮಾಡಿದರು.
ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಶ್ರೀಲಂಕಾ ಬೌಲರ್ ಗಳ ಬೆವರಿಳಿಸಿದ ಜುರೆಲ್, 171 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದರು.
ಈ ಹಿಂದೆ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಜುರೇಲ್, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಲಂಕಾ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದಾಖಲಿಸಿದ್ದಾರೆ.
ಐತಿಹಾಸಿಕ ಶತಕ
ಜುರೆಲ್ ಅವರ ಶತಕ ಐತಿಹಾಸಿಕವಾಗಿದ್ದು, ಶ್ರೀಲಂಕಾ ನೆಲದಲ್ಲಿ ಭಾರತೀಯ ವಿಕೆಟ್‌ಕೀಪರ್‌ನಿಂದ ಬಂದ ಮೊದಲ ಟೆಸ್ಟ್ ಶತಕ ಇದಾಗಿದೆ. ಈ ಮೊದಲು 2010 ರಲ್ಲಿ ಶ್ರೀಲಂಕಾದಲ್ಲಿ ಧೋನಿ ಬಾರಿಸಿದ್ದ 76 ರನ್ಗಳು ಭಾರತದ ವಿಕೆಟ್ ಕೀಪರ್ ಲಂಕಾ ನೆಲದಲ್ಲಿ ಕಲೆಹಾಕಿದ್ದ ಅತ್ಯಧಿಕ ಮೊತ್ತವಾಗಿತ್ತು.
ಅಲ್ಲದೆ ಶ್ರೀಲಂಕಾ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೆಸ್ಟ್ ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಜುರೆಲ್ 2017 ರಲ್ಲಿ ಹಾರ್ದಿಕ್ ಪಾಂಡ್ಯ ಪಲ್ಲೆಕೆಲೆಯಲ್ಲಿ 108 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದರು.
4 ವರ್ಷಗಳ ನಂತರ ಇಂತಹ ಶತಕ
ಅಂತೆಯೇ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ 7ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಧ್ರುವ್ ಜುರೆಲ್ ಪಾತ್ರರಾದರು. ಜುರೇಲ್ಗೂ ಮೊದಲು ಕಪಿಲ್ ದೇವ್ ಮತ್ತು ರಿಷಭ್ ಪಂತ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಇತ್ತ ಜುರೆಲ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದು, ಜಡೇಜಾ ಕೊನೆಯ ಬಾರಿಗೆ 2022 ರಲ್ಲಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ್ದರು.
ಹೊಸ ಟ್ಯಾಟೂ ರಿವೀಲ್
ಇನ್ನು ಶ್ರೀಲಂಕಾ ಶತಕ ಪೂರ್ಣಗೊಳಿಸಿದ ಬಳಿಕ ತಮ್ಮ ಬೈಸೆಪ್ ಮೇಲಿದ್ದ ‘ಜೈ ಜವಾನ್, ಜೈ ಕಿಸಾನ್’ ಟ್ಯಾಟೂವನ್ನು ಪ್ರದರ್ಶಿಸುವ ಮೂಲಕ ವಿಶೇಷ ರೀತಿಯಲ್ಲಿ ಸಂಭ್ರಮಿಸಿದರು. 99 ರನ್‌ಗಳಲ್ಲಿ ಬರೋಬ್ಬರಿ 22 ಎಸೆತಗಳನ್ನು ಕಳೆದ ಜುರೇಲ್, ಕೊನೆಗೂ ಅಪಾಯಕಾರಿ ಸಿಂಗಲ್ ತೆಗೆದುಕೊಂಡು ಶತಕದ ಗಡಿ ದಾಟಿದರು. ಶತಕ ಪೂರ್ಣಗೊಂಡ ತಕ್ಷಣ ಗಾಳಿಯಲ್ಲಿ ಮುಷ್ಟಿ ಬೀಸಿ, ಹೆಲ್ಮೆಟ್ ತೆಗೆದು ತಮ್ಮ ಕೈ ಮೇಲಿನ ಟ್ಯಾಟೂವನ್ನು ತೋರಿಸಿದರು.
ರೈತ ಮತ್ತು ಯೋಧರಿಗೆ ಶತಕ ಅರ್ಪಣೆ
ಇನ್ನು ಜುರೆಲ್ ತಮ್ಮ ಬೈಸೆಪ್ ಮೇಲೆ ಜೈ ಜವಾನ್, ಜೈ ಕಿಸಾನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ತಮ್ಮ ಇಂದಿನ ಶತಕ ಯೋಧರಿಗೆ ಮತ್ತು ರೈತರಿಗೆ ಅರ್ಪಣೆ ಎಂಬ ರೀತಿಯಲ್ಲಿ ಟ್ಯಾಟೂ ತೋರಿಸಿ ಸಂಭ್ರಮಿಸಿದರು. ಅವರ ಸಂಭ್ರಮಕ್ಕೆ ಇಡೀ ತಂಡವೂ ಸಂಭ್ರಮಿಸಿತು. ಜುರೇಲ್ 177 ಎಸೆತಗಳಲ್ಲಿ ಅಜೇಯ 115 ರನ್ ಗಳಿಸಿದರು.
ಟ್ಯಾಟೂ ಕುರಿತ ಮಾಹಿತಿ ಹಂಚಿಕೊಂಡ ಜುರೆಲ್
ದಿನದಾಟದ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜುರೆಲ್, ತಮ್ಮ ಕೈ ಮೇಲಿನ ‘ಜೈ ಜವಾನ್, ಜೈ ಕಿಸಾನ್’ ಟ್ಯಾಟೂ ಹಿಂದಿನ ಭಾವನಾತ್ಮಕ ಕಾರಣವನ್ನು ಬಹಿರಂಗಪಡಿಸಿದ್ದಾರೆ.
'“ನನ್ನ ತಾತ ರೈತರಾಗಿದ್ದರು, ನನ್ನ ತಂದೆ ಸೈನಿಕರಾಗಿದ್ದರು. ಅವರೇ ನನ್ನ ಬೇರುಗಳು, ನಾನು ಎಲ್ಲಿಂದ ಬಂದಿದ್ದೇನೆ ಎಂಬುದನ್ನು ಎಂದಿಗೂ ಮರೆಯಲು ಬಯಸುವುದಿಲ್ಲ. ಹಾಗಾಗಿ ಆ ಸೆಲ್ಯೂಟ್ ನನ್ನ ತಂದೆ ಮತ್ತು ತಾತನಿಗೆ ಅರ್ಪಣೆ” ಎಂದು ಜುರೇಲ್ ಹೇಳಿದ್ದಾರೆ.
ದಾಖಲೆಯ ಶತಕ
ಈ ಶತಕದೊಂದಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ ಕೇವಲ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯದಲ್ಲಿ 7ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡಿದ ಭಾರತೀಯ ಬ್ಯಾಟರ್‌ಗಳ ಪೈಕಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ ಆಟಗಾರನೂ ಜುರೇಲ್ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಶತಕ ಸಿಡಿಸಿದ್ದರು. ಹೀಗಾಗಿ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನೂ ಜುರೇಲ್ ತಮ್ಮದಾಗಿಸಿಕೊಂಡರು.