ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಈಗಾಗಲೇ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಟ್ಟಿಗೆ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ. ಸದ್ಯ ಅವರು ಹೊಟ್ಟೆ ಸೋಂಕಿನಿಂದ ಬಳಲುತ್ತಿದ್ದು, ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯವಿರುವ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಅಭಿಷೇಕ್ ಶರ್ಮಾ ಅವರ ಅಬ್ಬರಕ್ಕೆ ಈಗಾಗಲೇ ಪಾಕಿಸ್ತಾನವು ಗಲಿಬಿಲಿಗೊಂಡಿದೆ. ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಅವರು ಅಭಿಷೇಕ್ ಅವರನ್ನು 'ಸ್ಲೋಗರ್' ಎಂದು ಕರೆದಿದ್ದಾರೆ.
ಪಾಕಿಸ್ತಾನಿ ಚಾನೆಲ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಅಭಿಷೇಕ್ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವುದರಿಂದ ಅವರು ವಿಫಲಗೊಳ್ಳುವ ಹೆಚ್ಚಿನ ಸಾಧ್ಯತೆಗಳಿವೆ. ಅವರು ತಂತ್ರಕ್ಕಿಂತ ಪವರ್ ಹಿಟ್ಟಿಂಗ್ ಅನ್ನು ಹೆಚ್ಚು ಅವಲಂಬಿಸಿದ್ದಾರೆ ಎಂದಿರುವ ಅವರು, ಬ್ಯಾಟ್ಸ್‌ಮನ್ ಆಗಿ ಅಭಿಷೇಕ್ ಅವರ ಸ್ಥಿರತೆ ಮತ್ತು ತಾಂತ್ರಿಕ ಸದೃಢತೆಯನ್ನು ಪ್ರಶ್ನಿಸಿದ್ದಾರೆ.
'ನಾನು ನೋಡಿದ ಮಟ್ಟಿಗೆ, ನೀವು ನನ್ನನ್ನು ಪ್ರಾಮಾಣಿಕವಾಗಿ ಕೇಳಿದರೆ, ಅವರು ಕೇವಲ ಸ್ಲೋಗರ್ ಎಂದು ನನಗೆ ಅನಿಸುತ್ತದೆ. ಅವರು ಪ್ರತಿ ಬಾಲ್ ಅನ್ನು ಆಕ್ರಮಣಕಾರಿಯಾಗಿಯೇ ಹೊಡೆಯಲು ನೋಡುತ್ತಾರೆ. ಆದರೆ, ಒಂದು ದಿನ, ಉಸ್ಕೆ ಫೇಲ್ಯೂರ್ ಕೆ ಚಾನ್ಸಸ್ ಜ್ಯಾದಾ ಹೈ (ಅವರ ವೈಫಲ್ಯದ ಸಾಧ್ಯತೆಗಳು ಹೆಚ್ಚು). ಅವರು 8 ಇನಿಂಗ್ಸ್‌ಗಳಲ್ಲಿ 10, 15, 0 ಮತ್ತು 20 ರನ್ ಗಳಿಸಿದ್ದಾರೆ. ಅವನು ತಾಂತ್ರಿಕವಾಗಿ ಉತ್ತಮ ಎಂದು ನಾನು ಭಾವಿಸುವುದಿಲ್ಲ' ಎಂದು ಅಮೀರ್ 'ಹರನಾ ಮನ ಹೈ' ಕಾರ್ಯಕ್ರಮದಲ್ಲಿ ಹೇಳಿದರು.
ಅಭಿಷೇಕ್ ಶರ್ಮಾಗೆ ಸವಾಲು ಹಾಕುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಶಾರ್ಟ್-ಪಿಚ್ ಎಸೆತಗಳನ್ನು ಬೌಲಿಂಗ್ ಮಾಡುವುದು. ಅಭಿಷೇಕ್ ಅವರು ಸ್ವಿಂಗ್ ಎಸೆತಗಳನ್ನು ಉತ್ತಮವಾಗಿ ನಿಭಾಯಿಸಲು ಪ್ರಾರಂಭಿಸಿದಾಗ ಮಾತ್ರ ಉತ್ತಮ ಬ್ಯಾಟರ್ ಎಂದು ಪರಿಗಣಿಸಲಾಗುತ್ತದೆ ಎಂದು ಎಂದು ಅಮೀರ್ ಭಾವಿಸುತ್ತಾರೆ.
'ಅವರು ನಿಂತಲ್ಲಿಯೇ ನಿಂತಿರುತ್ತಾರೆ ಮತ್ತು ಎಲ್ಲ ಚೆಂಡುಗಳು ನಿರ್ದಿಷ್ಟ ಪ್ರದೇಶದಲ್ಲಿ ಬೌಲಿಂಗ್ ಮಾಡಬೇಕೆಂದು ಬಯಸುತ್ತಾರೆ. ಇದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಆದಾಗ್ಯೂ, ಅಭಿಷೇಕ್ ತನ್ನ ಲಯವನ್ನು ಕಂಡುಕೊಂಡರೆ, ಅವರು ಹೆಚ್ಚು ಸ್ಕೋರ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಎದುರಾಳಿ ತಂಡಕ್ಕೆ ನಿಜವಾದ ಬೆದರಿಕೆಯನ್ನು ಒಡ್ಡುತ್ತಾರೆ. ಆದರೆ, ಅವರು ಹೆಚ್ಚಿನ ಸಮಯದಲ್ಲಿ ಅಪಾಯಕಾರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ. ಚೆಂಡು ಸ್ವಲ್ಪಮಟ್ಟಿಗೆ ಸ್ವಿಂಗ್ ಆದಾಗ ಅದನ್ನು ಅವರು ಚೆನ್ನಾಗಿ ನಿಭಾಯಿಸಿದಾಗ ಮಾತ್ರ ನಾನು ಅವರನ್ನು ಉತ್ತಮ ಬ್ಯಾಟರ್ ಎಂದು ಪರಿಗಣಿಸುತ್ತೇನೆ' ಎಂದರು.
ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ. ಅವರು USA ವಿರುದ್ಧದ ಪಂದ್ಯದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು 2 ಕೆಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗುಳಿಯುತ್ತಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
Advertisement