

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೀಗ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅವರ ನಿಯಮಿತ ಆರಂಭಿಕ ಆಟಗಾರ ಫಿಲ್ ಸಾಲ್ಟ್, ಗುಜರಾತ್ ಟೈಟಾನ್ಸ್ (GT) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಕ್ವಾಲಿಫೈಯರ್ 1 ಪಂದ್ಯಕ್ಕೆ ಶೇ 100 ರಷ್ಟು ಫಿಟ್ ಆಗಿಲ್ಲದಿರಬಹುದು. ಗಾಯದಿಂದಾಗಿ ತವರು ಇಂಗ್ಲೆಂಡ್‌ಗೆ ಮರಳಿದ್ದ ಇಂಗ್ಲಿಷ್ ಆಟಗಾರ ಇದೀಗ ಭಾರತಕ್ಕೆ ಮರಳಿದ್ದಾರೆ. ಮೊದಲ ಆರು ಪಂದ್ಯಗಳಲ್ಲಿ ಮಾತ್ರ ಆಡಿದ್ದ ಸಾಲ್ಟ್, ಲೀಗ್ ಹಂತದ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು. ಸಾಲ್ಟ್ ಬದಲಿಗೆ ಆಡಿದ್ದ ಜೇಕಬ್ ಬೆಥೆಲ್ ಕೂಡ ಇದೀಗ ಗಾಯದಿಂದಾಗಿ ಪಂದ್ಯಾವಳಿಯಿಂದಲೇ ಹೊರಗುಳಿದಿದ್ದಾರೆ.
ಆರ್‌ಸಿಬಿ vs ಜಿಟಿ ಪಂದ್ಯದ ಮುನ್ನಾದಿನ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಸಾಲ್ಟ್ ಇನ್ನೂ ವೀಕ್ಷಣೆಯಲ್ಲಿದ್ದಾರೆ ಮತ್ತು ನಾವಿನ್ನೂ ತಂಡವನ್ನು ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.
'ಸಾಲ್ಟ್ ಫಿಟ್ ಆಗಿದ್ದಾರೆ; ಆದರೆ, ಅವರಿನ್ನೂ ವೀಕ್ಷಣೆಯಲ್ಲಿದ್ದಾರೆ. ಆದರೆ, ನಮ್ಮ ಪ್ಲೇಯಿಂಗ್ XI ಅನ್ನು ನಾವು ಇನ್ನೂ ನಿರ್ಧರಿಸಿಲ್ಲ. ನಾವು ವಿಕೆಟ್ ಅನ್ನು ನೋಡುತ್ತೇವೆ ಮತ್ತು ನಂತರ ನಾವು ನಿರ್ಧರಿಸುತ್ತೇವೆ' ಎಂದು ಪಾಟೀದಾರ್ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 1ಕ್ಕೂ ಮುನ್ನಾದಿನ ಧರ್ಮಶಾಲಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವೆಂಕಟೇಶ್ ಅಯ್ಯರ್ ಮುಂದುವರಿಕೆ?
ಜೇಕಬ್ ಬೆಥೆಲ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಮರಳಿರುವ ವೆಂಕಟೇಶ್ ಅಯ್ಯರ್, ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಆರಂಭಿಸಿ 19 ಎಸೆತಗಳಲ್ಲಿ 44 ರನ್ ಗಳಿಸಿದರು. ಸಾಂಪ್ರದಾಯಿಕವಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ವೆಂಕಟೇಶ್ ಅವರನ್ನು ಆರ್‌ಸಿಬಿ ಫ್ಲೋಟರ್ ಆಗಿ ಬಳಸಿಕೊಂಡಿದೆ ಮತ್ತು ಅವರು ತಾತ್ಕಾಲಿಕ ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಆರ್‌ಸಿಬಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸೈಮನ್ ಡೌಲ್, ಆರ್‌ಸಿಬಿ ವೆಂಕಟೇಶ್ ಅಯ್ಯರ್ ಜೊತೆಗೆ ಮುಂದುವರಿಯಬೇಕು. ಫಿಲ್ ಸಾಲ್ಟ್ ಅವರಿಗೆ ಆಟದ ಸಮಯದ ಕೊರತೆಯು ಬೆಂಗಳೂರಿಗೆ ಹಾನಿ ಮಾಡುತ್ತದೆ ಮತ್ತು 4 ಇನಿಂಗ್ಸ್‌ಗಳಲ್ಲಿ 177.52ರ ಸ್ಟ್ರೈಕ್‌ರೇಟ್‌ನಲ್ಲಿ 158 ರನ್ ಗಳಿಸಿರುವ ಫಾರ್ಮ್‌ನಲ್ಲಿರುವ ವೆಂಕಟೇಶ್ ಜೊತೆ ಅವರು ಮುಂದುವರಿಯುವುದು ಉತ್ತಮ ಎಂದಿದ್ದಾರೆ.
'ವಿರಾಟ್ ಕೊಹ್ಲಿ ಜೊತೆಗೆ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕ ಆಟಗಾರನಾಗಿ ನಾನು ಮುಂದುವರಿಸುತ್ತೇನೆ. ಫಿಲ್ ಸಾಲ್ಟ್ ಮೂರುವರೆ ವಾರಗಳ ಕಾಲ ತಂಡದಿಂದ ಹೊರಗಿದ್ದಾರೆ. ವಿಶೇಷವಾಗಿ ಬೆರಳಿನ ಗಾಯದಿಂದಾಗಿ ದೀರ್ಘ ವಿರಾಮದಿಂದ ಹಿಂತಿರುಗುವುದು ಎಂದಿಗೂ ಸುಲಭವಲ್ಲ. ಅವರು ಉತ್ತಮ ಆಟಗಾರರಾಗಿದ್ದು, ಟಿ20ಗಳಲ್ಲಿ ಆರ್‌ಸಿಬಿ ಮತ್ತು ಇಂಗ್ಲೆಂಡ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಪಂದ್ಯದ ಫಿಟ್‌ನೆಸ್ ಮತ್ತು ಶಾಟ್-ಟೈಮಿಂಗ್‌ಗೆ ಮರಳಲು ಸಮಯ ತೆಗೆದುಕೊಳ್ಳುತ್ತದೆ. ಪ್ಲೇಆಫ್‌ಗಳು ಅದನ್ನು ಪರೀಕ್ಷಿಸಲು ಸೂಕ್ತ ಸ್ಥಳವಲ್ಲ. ಕಳೆದ ಎರಡು ಪಂದ್ಯಗಳಲ್ಲಿ ವೆಂಕಟೇಶ್ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ಅವರು ಎಸ್‌ಆರ್‌ಎಚ್ ವಿರುದ್ಧ ಚೆನ್ನಾಗಿ ಆಡಿದ್ದಾರೆ ಮತ್ತು ಪಂಜಾಬ್ ವಿರುದ್ಧವೂ ಚೆನ್ನಾಗಿ ಆಡಿದ್ದಾರೆ' ಎಂದು ಡೌಲ್ ಜಿಯೋಸ್ಟಾರ್‌ನಲ್ಲಿ ಹೇಳಿದರು.
'ಕೊಹ್ಲಿ ಜೊತೆ ಅವರು ಅಗ್ರಸ್ಥಾನದಲ್ಲಿ ಉತ್ತಮ ಲಯವನ್ನು ಸಾಧಿಸಿದ್ದಾರೆ. ಹೌದು, ವಿರಾಟ್ ಜೊತೆ ಸಾಲ್ಟ್ ಬಲವಾದ ಜೊತೆಯಾಟದ ದಾಖಲೆ ಹೊಂದಿದ್ದಾರೆ. ಆದರೆ ಕ್ರಿಕೆಟ್‌ನಲ್ಲಿ, ನೀವು ಯಾವಾಗಲೂ ಫಾರ್ಮ್‌ನಲ್ಲಿರುವ ಆಟಗಾರನೊಂದಿಗೆ ಹೋಗುತ್ತೀರಿ. ಖ್ಯಾತಿಗಿಂತ ಫಾರ್ಮ್ ಮುಖ್ಯವಾಗಿದೆ. ವಿಶೇಷವಾಗಿ ನಾಕೌಟ್ ಪಂದ್ಯಗಳಲ್ಲಿ. ವಾರಗಳವರೆಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡದ ವ್ಯಕ್ತಿಯನ್ನು ಈಗ ತರುವುದು ದೊಡ್ಡ ಅಪಾಯ. ನಾನು ವೆಂಕಟೇಶ್ ಅವರನ್ನು ಅಗ್ರಸ್ಥಾನದಲ್ಲಿ ಮುಂದುವರಿಸುತ್ತೇನೆ. ಫಿಲ್ ಸಾಲ್ಟ್ ಅವರನ್ನು ಬೆಂಚ್‌ನಲ್ಲಿ ಇರಿಸುವುದು ಉತ್ತಮ ಆಯ್ಕೆಯಾಗಿದೆ. ಆದರೆ ಇದೀಗ, ವೆಂಕಟೇಶ್ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಅರ್ಹರು' ಎಂದು ಅವರು ಹೇಳಿದರು.
Advertisement