ಜಿಲ್ಲಾ ಸುದ್ದಿ

ಹೇರಾಮ! ಇದೆಂಥಾ ಗಾಂಧಿ ಗ್ರಾಮ?

Published On :

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೆಲೂರ ಎಂಬ ಗ್ರಾಮ ಪ್ರಸಕ್ತ ಸಾಲಿನ 'ಗಾಂಧಿ ಗ್ರಾಮ' ಪುರಸ್ಕಾರಕ್ಕೆ ಪಾತ್ರವಾಗಿದೆ. ದುರದೃಷ್ಟ ಎಂದರೆ, ಗಾಂಧಿ ಗ್ರಾಮಕ್ಕೆ ಇರಬೇಕಾದ ಒಂದೇ ಒಂದು ಅಂಶವೂ ಇಲ್ಲಿ ಕಾಣುತ್ತಿಲ್ಲ.

ಇಂಥ ದುರಂತ ಮತ್ತೊಂದಿಲ್ಲ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾದ ಈ ಗ್ರಾಮಕ್ಕೆ ಕನ್ನಡಪ್ರಭ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದಗಾ ಇಂಥ ಘೋರ ಸತ್ಯ ಘೋಚರಿಸಿದೆ.

ಹೇಗಿದೆ: ಒಂದು ಕೈಯಲ್ಲಿ ತೊಡೆ ಕಾಣುವಂತೆ ಧೋತಿ ಎತ್ತಿ ಹಿಡಿದು ಮತ್ತೊಂದು ಕೈಯಲ್ಲಿ ಚೆಂಬು ಹಿಡಿದು ಶೌಚಕ್ಕೆಂದು ಬಯಲಿಗೆ ಓಡುವ ಜನ, ಕಸದ ರಾಶಿಯಲ್ಲಿ ಹಂದಿಗಳ ಉರುಳಾಟ, ಚರಂಡಿ ತುಂಬಿ ರಸ್ತೆ ಮೇಲೆ ಹರಿಯುವ ಕೊಳಚೆ ನೀರು, ರಸ್ತೆ ತುಂಬ ಕಾಣುವ ತಿಪ್ಪೆಗುಂಡಿಗಳು, ಸೊಳ್ಳೆಗಳ ಸಾಮ್ರಾಜ್ಯ, ಸ್ವಂತ ಕಟ್ಟಡವಿಲ್ಲದೆ ಸಮುದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಪಂಗೆ ಹೆಸರಿಗಷ್ಟೆ ಅಧ್ಯಕ್ಷೆ ದರ್ಬಾರು ಪತಿರಾಯನದ್ದು, ಅಂಗನವಾಡಿ ಪಕ್ಕದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಶೌಚಾಲಯದ ಕಮೋಡ್‌ಗಳು! ಇಷ್ಟೆಲ್ಲ ಅದ್ಭುತ ಅಂಶ ಹೊಂದಿದ ಈ ಗ್ರಾಮಕ್ಕೆ ಪ್ರಶಸ್ತಿ ಸಿಕ್ಕಿದ್ದೇ ದೊಡ್ಡ ಪವಾಡ.

ಅರ್ಜಿ ಹಾಕಿದ್ದೇ ಬಂತು ನೋಡ್ರಿ: ಗಾಂಧಿ ಪ್ರಶಸ್ತಿ ಕೊಡ್ತೇವೆ ಅಂತ ಸರ್ಕಾರ ಕಾಲ್ ಮಾಡಿತ್ತು. ಅರ್ಜಿ ಮಾಡಿ ಪಂಚತಂತ್ರ ಸಾಫ್ಟ್‌ವೇರ್‌ಗೆ ಹಾಕಿದ್ದೆ. ಮೈಸೂರಿನ ಅಬ್ದುಲ್ ನಜೀರ ಸಾಬ್ ಫೌಂಡೇಶನ್ ಅಧಿಕಾರಿಗಳು ಬಾಗಲಕೋಟೆಗೆ ಬಂದು ಅಲ್ಲಿಗೆ ನನ್ನನ್ನು ಕರೆದು ಕಳಿಸಿದ ಮಾಹಿತಿ ಸರಿ ಇದೆಯಾ ಅಂದ್ರು. ಎಲ್ಲದಕ್ಕೂ ಹುಂ ಅಂದೆ.

ಪ್ರಶಸ್ತಿ ಬಂತು. ಇಡೀ ತಾಲೂಕಿಗೆ ನಾನೊಬ್ಬನೇ ಅರ್ಜಿ ಹಾಕಿದ್ದೆ ಎನ್ನುತ್ತಾರೆ ಕಾರ್ಯದರ್ಶಿ ಎಸ್.ಬಿ.ಚಂದ್ರಗಿರಿ. ಪಂಚಾಯಿತಿಗೆ ಸ್ವಂತಕ್ಕೊಂದು ಕಟ್ಟಡವಿಲ್ಲ.ಸದ್ಯ ಸಮುದಾಯ ಭವನದಲ್ಲಿ ಕುರ್ಚಿ ಹಾಕಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಗ್ರಾಮದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿದ್ದು ಅಲ್ಲಿನ ಶೌಚಾಲಯ ನಿರ್ಮಾಣದ ಸೊಗಸಾದ ಕತೆಯನ್ನು ಈ ಕಮೋಡ್‌ಗಳೇ ಹೇಳುತ್ತವೆ. ಕುಡಿಯುವ ನೀರಿನ ಸಾರ್ವಜನಿಕ ನಲ್ಲಿಯ ಮುಂಭಾಗ ಕೊಚ್ಚೆಗುಂಡಿಗಳು ನಿರ್ಮಾಣವಾಗಿದ್ದು, ಅಲ್ಲಿಂದಲೇ ನೀರು ಒಯ್ಯಲಾಗುತ್ತಿದೆ. ಬಾದಾಮಿ ತಾಲೂಕಿನ ಚೊಳಚಗುಡ್ಡ ಪಂಚಾಯಿತಿ ಕತೆ ಕೂಡ ಇದಕ್ಕಿಂತ ಭಿನ್ನವಾಗಿ ಏನಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.