ಜಿಲ್ಲಾ ಸುದ್ದಿ

ಬಯಲಾಗುತ್ತಾ "ನಿತ್ಯಾ" ಸತ್ಯ?

ಬಯಲಾಗುತ್ತಾ "ನಿತ್ಯಾ" ಸತ್ಯ?
Published On :

ಬೆಂಗಳೂರು: ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ಪೂರ್ಣಗೊಂಡಿದ್ದರೂ, ಅದರ ವರದಿಗಳು ಅಸ್ಪಷ್ಟವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ಪೂರ್ಣಗೊಂಡಿದ್ದು, ಎಲ್ಲರ ಚಿತ್ತ ಈಗ ವೈದ್ಯರು ನೀಡುವ ಪರೀಕ್ಷಾ ವರದಿಯತ್ತ ನೆಟ್ಟಿದೆ. ಪುರುಷತ್ವ ಪರೀಕ್ಷೆ ವೇಳೆ ನಿತ್ಯಾನಂದನ ಅಸಹಾಕಾರದ ಆಧಾರದ ಮೇಲೆ ತಜ್ಞರು ಒಂದಷ್ಟು ಮಾಹಿತಿಗಳನ್ನು ವಿಶ್ಲೇಷಿಸಿದ್ದು, ವೈದ್ಯರು ನೀಡುವ ವರದಿ ಅಸ್ಪಷ್ಟವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಶ್ರಮದಲ್ಲಿನ ಮಹಿಳಾ ಭಕ್ತರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಸುಪ್ರೀಂಕೋರ್ಟ್ ನಿತ್ಯಾನಂದನನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಪುರುಷತ್ವ ಪರೀಕ್ಷೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದ ನಿತ್ಯಾನಂದ, 'ತನ್ನ ಮನಸ್ಸು ಆರು ವರ್ಷದ ಬಾಲಕನದ್ದಾಗಿದ್ದು, ದೇಹ ಮಾತ್ರ ಬೆಳೆದಿದೆ. ಹೀಗಾಗಿ ನನಗೆ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವಿಲ್ಲ' ಎಂದು ವಾದಿಸಿದ್ದ. ಆದರೆ ಸುಪ್ರೀಂಕೋರ್ಟ್ ಆದೇಶವಿದ್ದರಿಂದ ಒಲ್ಲದ ಮನಸ್ಸಿನಿಂದಲೇ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದ.

ಪುರುಷತ್ವ ಪರೀಕ್ಷೆಗೂ ಮೊದಲು ನಿತ್ಯಾನಂದ ತನ್ನ ವಕೀಲರು ಮತ್ತು ವೈದ್ಯರೊಂದಿಗೆ ಚರ್ಚಿಸಿರುವ ಸಾಧ್ಯತೆ ಇದ್ದು, ಪರೀಕ್ಷೆ ಹೇಗೆ ಮತ್ತು ಯಾವ ರೀತಿ ನಡೆಯುತ್ತದೆ ಮತ್ತು ತಾನು ಹೇಗೆ ವರ್ತಿಸಬೇಕು ಎಂಬುದರ ಕುರಿತು ಸಮಗ್ರವಾಗಿ ಚರ್ಚಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪರೀಕ್ಷೆಯ ಯಾವುದೇ ಹಂತದಲ್ಲಿಯೂ ವೈದ್ಯರಿಗೆ ಸಹಕರಿಸದಿರಲು ನಿತ್ಯಾನಂದ ಮಾನಸಿಕವಾಗಿ ಸಿದ್ಧನಾಗಿ ಆಗಮಿಸಿರುವ ಸಾಧ್ಯತೆಯೇ ಹೆಚ್ಚು. ಇದೇ ಅಂಶವನ್ನು ಆಸ್ಪತ್ರೆಯ ಮೂಲಗಳು ಪುಷ್ಟೀಕರಿಸಿದ್ದು, ಪರೀಕ್ಷೆಯ ಯಾವುದೇ ಹಂತದಲ್ಲಿಯೂ ನಿತ್ಯಾನಂದ ವೈದ್ಯರಿಗೆ ಸಂಪೂರ್ಣವಾಗಿ ಸಹಕರಿಸಲಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪರೀಕ್ಷಾ ದಿನ ನಿತ್ಯಾನಂದನ ಸಂಪೂರ್ಣ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರಿವಾಗುತ್ತದೆ. ಬೆಳಗ್ಗೆ 9 ಗಂಟೆಗೆ ನಿತ್ಯಾನಂದನ ಪರುಷತ್ವ ಪರೀಕ್ಷೆ ನಿಗದಿ ಮಾಡಲಾಗಿತ್ತು. ಆದರೆ ನಿತ್ಯಾನಂದ ನಿಗದಿತ ಸಮಯಕ್ಕಿಂತ 1 ಗಂಟೆ ಮೊದಲೇ ವಿಕ್ಟೋರಿಯಾ ಆಸ್ಪತ್ರೆಗೆ ಹಾಜರಾಗಿದ್ದನು. 8 ಗಂಟೆಗೆ ಪುರುಷತ್ವ ಪರೀಕ್ಷೆಯ ಕ್ರಿಯಾ ವಿಧಿಗಳು ಆರಂಭವಾಯಿತಾದರೂ, ಪರೀಕ್ಷೆಯ ಪ್ರತಿಯೊಂದು ಸಂದರ್ಭದಲ್ಲಿಯೂ ನಿತ್ಯಾನಂದ ತಕರಾರು ತೆಗೆಯುತ್ತಿದ್ದ. ತನ್ನ ವೈದ್ಯರೊಂದಿಗೆ ಪರೀಕ್ಷೆಯ ಕುರಿತು ಮೊದಲೇ ಚರ್ಚಿಸಿದ್ದ ನಿತ್ಯಾ, ಪರೀಕ್ಷಾ ಸಂದರ್ಭದಲ್ಲಿ ವಿನಾಕಾರಣ ವೈದ್ಯರೊಂದಿಗೆ ವಾದಕ್ಕಿಳಿಯುತ್ತಿದ್ದ.

ಸುಪ್ರೀಂಕೋರ್ಟ್ ಆದೇಶವಿರುವುದರಿಂದ ವೈದ್ಯರು ಒತ್ತಾಯ ಮಾಡುವಂತಿಲ್ಲ ಎಂಬ ಅಂಶ ತಿಳಿದಿದ್ದ ನಿತ್ಯಾ, ಪರೀಕ್ಷೆಗೆ ಒಳಪಡಲು ಪದೇ ಪದೇ ನಕಾರಾ ವ್ಯಕ್ತಪಡಿಸುತ್ತಿದ್ದ. ವೈದ್ಯರೂ ಕೂಡ ಆತನನ್ನು ಒತ್ತಾಯ ಮಾಡುವಂತಿರಲಿಲ್ಲ. ಜನನಾಂಗದ ನಿಮಿರುವಿಕೆಗಾಗಿ ನೀಡಲಾಗುವ ಇಂಜೆಕ್ಷನ್ 'ಪಾಪವೆರಿನ್‌' ಅನ್ನು ಕೂಡ ನಿತ್ಯಾನಂದ ಉದ್ದೇಶಪೂರ್ವಕವಾಗಿ ನಿರಾಕರಿಸಿದ್ದ. ಹೀಗಾಗಿ ನಿತ್ಯಾನಂದನ ಜನನಾಂಗದ ಬೆಳವಣೆಗೆ ಕುರಿತು ತಿಳಿಯಲು ಅನಿವಾರ್ಯವಾಗಿ ವೈದ್ಯರು ಎನ್‌ಜಿಒದ ಇಬ್ಬರು ಮಹಿಳಾ ಪರಿಣಿತರ ಸಹಾಯ ಪಡೆಯಬೇಕಾಯಿತು. ಈ ವಿಚಾರದಲ್ಲಿ ಪರಿಣಿತಿ ಹೊಂದಿದ್ದ ಇಬ್ಬರು ಮಹಿಳಾ ತಜ್ಞರು, ನಿತ್ಯಾನಂದನನ್ನು ಮಾತಿಗೆಳೆದು ಆತನ ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿದ್ದರು.

ನಿತ್ಯಾನಂದ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಎಂದು ಆರತಿರಾವ್ ಅವರು ಆರೋಪ ಮಾಡಿದ್ದರು. ಆಕೆಯ ವಿರುದ್ಧ ನಿತ್ಯಾನಂದ ಕೂಡ ಆರೋಪಗಳ ಸುರಿಮಳೆ ಸುರಿಸಿದ್ದನು. 'ಆಕೆಗೆ ಹರ್ಪಿಸ್ ಎಂಬ ಲೈಂಗಿಕ ಖಾಯಿಲೆ ಇದೆ' ಎಂದು ನಿತ್ಯಾನಂದ ಹೇಳಿದ್ದ. ಆರತಿರಾವ್ ಅವರಿಗೆ ಹರ್ಪಿಸ್ ಖಾಯಿಲೆ ಇದ್ದರೆ, ಮತ್ತು ನಿತ್ಯಾನಂದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರೆ ಆ ರೋಗ ಈತನಿಗೂ ಹಬ್ಬಿರುವ ಸಾಧ್ಯತೆ ಇದೆ ಎಂದು ಭಾವಿಸಿದ್ದ ಅಧಿಕಾರಿಗಳು, ನಿತ್ಯಾನಂದನಿಗೆ ಲೈಂಗಿಕ ಖಾಯಿಲೆಗಳಿವೆಯೇ ಎಂಬುದರ ಕುರಿತು ಪರೀಕ್ಷೆಗೆ ಮುಂದಾಗಿದ್ದರು. ಈ ಬಗ್ಗೆ ಮೊದಲೇ ಅಧಿಕಾರಿಗಳು ತಿಳಿಸಿದ್ದರಿಂದ ವೈದ್ಯರು ಆತನ ಪರೀಕ್ಷೆ ನಡೆಸಲು ಮುಂದಾಗಿದ್ದರು.

ಆದರೆ ಈ ವೇಳೆಯಲ್ಲಿಯೂ ತಕರಾರು ತೆಗೆದ ನಿತ್ಯಾನಂದ ನನಗಾವ ಲೈಂಗಿಕ ಖಾಯಿಲೆಯೂ ಇಲ್ಲ. ನಿಮಗೇನಾದರೂ ಅನುಮಾನಗಳಿದ್ದರೆ ನನ್ನ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿ ಎಂದು ಸ್ವಯಂ ಪ್ರೇರಿತನಾಗಿ ಪರೀಕ್ಷೆಗೆ ಮುಂದಾದ. ಆ ಮೂಲಕ ಆರತಿರಾವ್ ರನ್ನು ತಾನು ಲೈಂಗಿಕವಾಗಿ ಬಳಸಿಕೊಂಡಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಸಾರಲು ನಿತ್ಯಾನಂದ ಸ್ವಾಮಿ ಮುಂದಾಗಿದ್ದ.

ಇದಾದ ಬಳಿಕ ಆತನನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದರು. ಮಡಿವಾಳದಲ್ಲಿರುವ ಎಸ್‌ಎಫ್‌ಎಲ್ ಕೇಂದ್ರದಲ್ಲಿ ನಿತ್ಯಾನಂದನ ಧ್ವನಿ ಪರೀಕ್ಷೆಗೆ ಆಯೋಜನೆ ಮಾಡಲಾಗಿತ್ತು. ಆದರೆ ಇದಕ್ಕೂ ಅಡ್ಡಗಾಲು ಹಾಕಿದ ನಿತ್ಯಾ, ತನಗೆ ಎದೆನೋವು ಮತ್ತು ತೀವ್ರ ಸುಸ್ತಾಗುತ್ತಿದೆ ಎಂದು ಕ್ಯಾತೆ ತೆಗೆಯಲಾರಂಭಿಸಿದ. ಅಲ್ಲದೆ ತನಗೆ ವಿಶ್ರಾಂತಿ ಬೇಕೆಂದು ಮನವಿ ಮಾಡಿಕೊಂಡ. ಹೀಗಾಗಿ ಅನಿವಾರ್ಯವಾಗಿ ಅಧಿಕಾರಿಗಳು ಆತನಿಗೆ ವಿಶ್ರಾಂತಿ ನೀಡಬೇಕಾಯಿತು. ನಿತ್ಯಾ ಬೇಕೆಂದೇ ಸಮಯ ವ್ಯರ್ಥ ಮಾಡಲು ಯತ್ನಿಸಿದ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಲ್ಲದೆ ಎಸ್‌ಎಫ್‌ಎಲ್ ಕೇಂದ್ರದಲ್ಲಿಯೂ ಧ್ವನಿ ಪರೀಕ್ಷೆ ವೇಳೆ ನಿತ್ಯಾನಂದ ಬೇಕೆಂದೇ ತೊದಲು ಮಾತುಗಳನ್ನಾಡುವ ಮೂಲಕ ತನ್ನ ಅಸಹಾಕಾರ ತೋರಿದ್ದ. ಹೀಗಾಗಿಯೇ ಧ್ವನಿ ಪರೀಕ್ಷೆ ರಾತ್ರಿ 9 ಗಂಟೆಯವರೆವಿಗೂ ವಿಸ್ತರಣೆಯಾಯಿತು ಎಂದು ಹೇಳಲಾಗುತ್ತಿದೆ.

ಪರೀಕ್ಷಾ ಸಂದರ್ಭದಲ್ಲಿ ನಡೆದ ಈ ಘಟನೆಗಳನ್ನು ಆಧರಿಸಿ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ವೈದ್ಯರು ತಮ್ಮ ವರದಿಯಲ್ಲಿ ನಿತ್ಯಾನಂದ ದೈಹಿಕವಾಗಿ ಫಿಟ್ ಎಂದು ಹೇಳಿದರೂ, ಆತನ ಲೈಂಗಿಕ ಸಾಮರ್ಥ್ಯದ ಕುರಿತ ವರದಿಗಳು ಅಸ್ಪಷ್ಟವಾಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ವೈದ್ಯರು ತಮ್ಮ ವರದಿಯಲ್ಲಿ ನಿತ್ಯಾನಂದನನ್ನು ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಒಳಪಡಿಸಬೇಕಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ ಅಚ್ಚರಿಯೇನಿಲ್ಲ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ನಾಳೆ ಸಂಜೆ ಅಥವಾ ಗುರುವಾರ ಬೆಳಗ್ಗೆ ನಿತ್ಯಾನಂದನ ವೈದ್ಯಕೀಯ ಪರೀಕ್ಷಾ ವರದಿ ಅಧಿಕಾರಿಗಳ ಕೈ ಸೇರಲಿದ್ದು, ಬಳಿಕವಷ್ಟೇ 'ನಿತ್ಯಾನಂದ ಲೈಂಗಿಕವಾಗಿ ಸಮರ್ಥನೇ..?, ಆತನಿಗೆ ಲೈಂಗಿಕ ಖಾಯಿಲೆಗಳಿವೆಯೇ..?, ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನೇ..? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.