

ಬೆಂಗಳೂರು: ಕಳೆದ ವಾರವಷ್ಟೇ ಮೇಕೆದಾಟು ವಿವಾದದಿಂದಾಗಿ ಬಂದ್ ಎದುರಿಸಿದ್ದ ಜನತೆ ಇದೀಗ ಮತ್ತೊಂದು ಬಂದ್ ಗೆ ಸಿದ್ಧರಾಗಬೇಕಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಏ.30 ರಂದು ದೇಶಾದ್ಯಂತ ಒಂದು ದಿನದ ಸಾರಿಗೆ ಮುಷ್ಕರ ಹಮ್ಮಿಕೊಂಡಿದೆ. ಬಂದ್ ವಿವಿಧ ಸಂಘಟನೆಗಳು, ಸಾರಿಗೆ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿದ್ದು, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ, ಸಿಐಟಿಯು, ಬಿಎಂಎಸ್, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಸಂಘ, ಸಾರಿಗೆ ನಿಗಮಗಳ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಘ, ಕನ್ನಡ ಕ್ರಿಯಾ ಸಮಿತಿ, 20 ಆಟೋ ಸಂಘಟನೆಗಳು, ನಾಲ್ಕು ಸಾರಿಗೆ ನಿಗಮಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಬಂದ್ ದಿನದಂದು ಸರ್ಕಾರಿ ಬಸ್ ಸೇವೆಗಳು ಹಾಗೂ ಆಟೋ ರಿಕ್ಷಾ ಸೇವೆಗಳು ಸ್ಥಗಿತಗೊಳ್ಳಲಿವೆ. ಬೆಂಗಳೂರಿನಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಆಟೋಗಳು ರಸ್ತೆಗಿಳಿಯುವುದಿಲ್ಲ. ವಿವಿಧ ಟ್ಯಾಕ್ಸಿ ಸಂಸ್ಥೆಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಟ್ಯಾಕ್ಸಿ ಸೇವೆ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇನ್ನು ಸಾರಿಗೆ ನಿಗಮದ ನಾಲ್ಕು ಸಂಸ್ಥೆಯ 1.2ಲಕ್ಷ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ. ಖಾಸಗಿ ಬಸ್‌ಗಳವರು ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಗಿದೆಯಾದರೂ ಅವರು ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಮುಷ್ಕರದ ದಿನ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ. ಕೆಲವೇ ಟ್ಯಾಕ್ಸಿಗಳ ಸೇವೆ ಲಭ್ಯವಿರುತ್ತದೆ.
ಕೇಂದ್ರಸರ್ಕಾರದ ನಡೆಯನ್ನು ವಿರೋಧಿಸಿರುವ ಆಟೋ ಚಾಲಕರ ಒಕ್ಕೂಟ, "ಮಸೂದೆಯು ಕಾನೂನಾಗಿ ಜಾರಿಯಾದರೆ ಆಟೋಗಳಿಗೆ ಮರಣ ಶಾಸನವಾಗುತ್ತದೆ. ಬೆಂಗಳೂರು ಒಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಆಟೋಗಳಿದ್ದು, ರಾಜ್ಯದೆಲ್ಲೆಡೆ ಆಟೋಗಳು ಮುಷ್ಕರಕ್ಕೆ ಬೆಂಬಲ ಸೂಚಿಸಲಿವೆ ಎಂದು ಹೇಳಿದೆ. ಅಲ್ಲದೆ ಲಾರಿ ಮಾಲೀಕರು ಈ ಹೋರಾಟದಲ್ಲಿ ಪಾಲ್ಗೊಳ್ಳುವ ಬಗ್ಗೆ ನಾಳೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.