

ಬೆಂಗಳೂರು: ನೂತನ ಲೋಕಾಯುಕ್ತರ ನೇಮಕ ಸಂಬಂಧ ಡಿ. 21ರಂದು ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ 114ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಲೋಕಾಯುಕ್ತರ ನೇಮಕ ಸಂಬಂಧ ಡಿ. 21ರಂದು ಈಗಾಗಲೇ ಸಭೆ ಕರೆಯಲಾಗಿದೆ. ನಾನು, ಪ್ರತಿಪಕ್ಷ ನಾಯಕರು, ಸ್ಪೀಕರ್, ವಿಧಾನ ಪರಿಷತ್ ಸಭಾಪತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಲ್ಲಿ ನೂತನ ಲೋಕಾಯುಕ್ತರ ನೇಮಕದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.
ನಿಜಲಿಂಗಪ್ಪ ಅವರ 114ನೇ ಜನ್ಮದಿನ ಸಂಬಂಧ ಅವರಿಗೆ ಗೌರವ ಸಲ್ಲಿಸಿದ್ದೇವೆ. ನಿಜಲಿಂಗಪ್ಪ ಅವರು ಏಕೀಕರಣಕ್ಕೆ ಹೋರಾಟ ಮಾಡಿದ್ದರು. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಕನಸು ಕಂಡಿದ್ದರು. ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅತ್ಯಂತ ಪ್ರಾಮಣಿಕವಾಗಿ ಕೆಲಸ ಮಾಡಿದ್ದರು.
ಕೊನೆವರೆಗೂ ಭ್ರಷ್ಟಾಚಾರದ ವಿರುದದ್ಧ ಮಾತಾಡುತ್ತಿದ್ದರು. ನಾನು ಭೇಟಿಯಾದಾಗಲೆಲ್ಲ ಕೈ ಬಾಯಿ ಶುದ್ಧವಾಗಿರುವಂತೆ ಹೇಳುತ್ತಿದ್ದರು. ಭ್ರಷ್ಟಾಚಾರ ಮಾಡಿದ ಮಂತ್ರಿಗಳ ಮುಖಕ್ಕೆ ಹೇಳುತ್ತಿದ್ದರು ಎಂದು ಸ್ಮರಿಸಿದರು.