

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಜೆಟ್‍ನಲ್ಲೇ ಘೋಷಿಸಿದಂತೆ ನೇಮಿಸಿದ್ದ ಕೃಷಿ ಬೆಲೆ ಆಯೋಗವು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಬಗ್ಗೆ ವಿಸ್ತೃತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಸದಸ್ಯ ಹನುಮನಗೌಡ ಬೆಳಗುರಕಿ ವರದಿಯನ್ನು ಹಸ್ತಾಂತರಿಸಿದರು. ಸುಮಾರು 11.45ಕ್ಕೆ ಆರಂಭವಾದ ಭೇಟಿ ಕಾರ್ಯಕ್ರಮವು ಮಧ್ಯಾಹ್ನ 1.30 ರವರೆಗೂ ನಡೆಯಿತು. ಈ ವೇಳೆ ವರದಿಯಲ್ಲಿನ ಎಲ್ಲಾ ಉಲ್ಲೇಖಿತ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಪ್ರತಿಯೊಂದನ್ನು ಕೂಲಂಕಷವಾಗಿಯೇ ಪರಿಶೀಲಿಸಿದ ಸಿಎಂ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ತೆಗೆದುಕೊಂಡು ಅನುಷ್ಠಾನಗೊಳಿಸುವ ಬಗ್ಗೆ ಆಯೋಗದ ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಕಮ್ಮರಡಿ, ಇದೇ ಮೊದಲ ಬಾರಿಗೆ ನೇಮಿಸಿದ್ದ ಕೃಷಿ ಬೆಲೆ ಆಯೋಗವು ತನ್ನ ಕಾರ್ಯವನ್ನು ಮುಗಿಸಿದೆ. ರಾಜ್ಯಾದ್ಯಂತ ಸುತ್ತಾಡಿ, ರೈತರನ್ನು ಭೇಟಿ ಮಾಡಿ ಈ ವರದಿ ತಯಾರಿಸಿದ್ದು, ಕೃಷಿ ಮತ್ತು ತೋಟಗಾರಿಕೆಯ ಒಟ್ಟು 17 ಬೆಳೆಗಳಿಗೆ ಪೇಟೆ ಧಾರಣೆ ಮತ್ತು ರೈತರು ಮಾಡುವ ವೆಚ್ಚ ಒಳಗೊಂಡಂತೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಆಧಾರವಾಗಲಿದೆ. ಅತ್ಯಂತ ವಸ್ತುನಿಷ್ಠವಾಗಿ ಈ ವರದಿ ತಯಾರಿಸಲಾಗಿದ್ದು, ಸಮಗ್ರತೆಯಿಂದ ಕೂಡಿದೆ. ವರದಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಸವಿವರವಾಗಿ ತಿಳಿಸಲಾಯಿತು ಎಂದು ಹೇಳಿದರು.
ಯಾವುವು 17 ಬೆಳೆಗಳು?:
ರೈತ ಬೆಳೆಯುವ ಬತ್ತ (ಮಳೆಯಾಶ್ರಿತ ಮತ್ತು ನೀರಾವರಿ ಆಶ್ರಿತ), ರಾಗಿ, ಗೋವಿನ ಜೋಳ, ಹೈಬ್ರಿಡ್ ಜೋಳ, ಮೆಕ್ಕೆಜೋಳ, ಈರುಳ್ಳಿ, ಟೊಮೆಟೊ, ಹತ್ತಿ, ಹೆಸರು, ಉದ್ದು, ಆಲೂಗೆಡ್ಡೆ, ತೊಗರಿ, ಕಡಲೆಕಾಯಿ ಸೇರಿದಂತೆ ಒಟ್ಟು 17 ಬೆಳೆಗಳನ್ನು ಪಟ್ಟಿ ಮಾಡಲಾಗಿದೆ. ಅಡಿಕೆಯನ್ನು ಈ ಪಟ್ಟಿಗೆ ಸೇರಿಸಿಲ್ಲ. ಬದಲಾಗಿ ಕಾಫಿ ಮಂಡಳಿಯಂತೆ
ಅಡಿಕೆ ಮಂಡಳಿ ರಚಿಸಿ ಅದರ ನಿರ್ವಹಣೆಯನ್ನು ಕೇಂದ್ರಕ್ಕೆ ವಹಿಸುವಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬೆಳೆಗಳಿಗೆ ಪ್ರಸ್ತುತ ಮಾರುಕಟ್ಟೆ ಧಾರಣೆ, ಕಾರ್ಯಸಿದ್ಧತೆ, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು. ಬೆಂಬಲ ಬೆಲೆ ನೀಡುವುದು ಕೇಂದ್ರ ಸರ್ಕಾರವಾದ್ದರಿಂದ ರೈತರಿಗೆ ಲಾಭಾದಾಯಕ ವಾತಾವರಣ ನಿರ್ಮಾಣ ಮಾಡುವುದು ಮತ್ತು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯುವಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು. ಇದೇ ವೇಳೆ ಕೃಷಿ ಸಚಿವ ಕೃಷ್ಣಭೈರೇಗೌಡ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.