

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 2 ರಿಂದ ರಾಜ್ಯದಲ್ಲಿ ಎರಡು ದಿನಗಳ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದಾರೆ. ಶನಿವಾರ ಸಂಜೆ ಮೈಸೂರಿಗೆ ಆಗಮಿಸುವ ಪ್ರಧಾನಿ ಅವರು ಶ್ರೀ ಗಣಪತಿ ಸಚ್ಚಿದಾನಾಂದ ಸ್ವಾಮೀಜಿ ಯವರ `ಶ್ರೀ ಅವಧೂತ ದತ್ತ ಪೀಠಂ' ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಮಹಾರಾಜ ಕಾಲೇಜಿನ ಆವರಣದಲ್ಲಿ ಏರ್ಪಡಿಸಿರುವ ಸುತ್ತೂರು ಮಠದ ಶ್ರೀ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾರನೇ ದಿನ ಅಂದರೆ ಜನವರಿ 3 ರಂದು ಪ್ರಧಾನಿ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‍ನ 103ನೇ ಅಧಿವೇಶನ ಉದ್ಘಾಟಿಸುವರು. ಮೈಸೂರಿನಿಂದ ಮಧ್ಯಾಹ್ನ ಹೊರಡುವ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿ ಎಚ್ ಎಎಲ್ ಸಂಸ್ಥೆ ನೂತನವಾಗಿ ಪ್ರಾರಂಭಿಸುತ್ತಿರುವ ಹೆಲಿಕಾಪ್ಟರ್ ತಯಾರಿಕಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.