

ಬೆಂಗಳೂರು: ಮಂಡೂರು ಹಾಗೂ ಮಾವಳ್ಳಿಪುರಗಳಲ್ಲಿ ಕಸ ವಿಲೇವಾರಿಗೆ ಸುತ್ತಲಿನ ಗ್ರಾಮಸ್ಥರ ವಿರೋಧದಿಂದ ಎಚ್ಚೆತ್ತಿರುವ ಬಿಬಿಎಂಪಿ ವೈಜ್ಞಾನಿಕ ಕಸ ಸಂಸ್ಕರಣೆಗೆ ಮುಂದಾಗಿದೆ.
ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿರುವ ಬೆಂಗಳೂರಿನ ಕಸ ವಿಲೇವಾರಿಗಾಗಿ ಏಳು ಸಂಸ್ಕರಣಾ ಘಟಕಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಈಗಾಗಲೇ ಪ್ರಾರಂಭವಾಗಿರುವ ಕನ್ನಳ್ಳಿ, ಸೀಗೇಹಳ್ಳಿ ಮತ್ತುದೊಡ್ಡಬಿದರಕಲ್ಲು ಘಟಕಗಳಿಗೆ ಬಿಬಿಎಂಪಿ ಆಯುಕ್ತ ಜಿ. ಕುಮಾರ ನಾಯಕ ಅವರು ಮಾಧ್ಯಮದವರ ಜತೆ ಮಂಗಳವಾರ ಭೇಟಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ನಗರದಲ್ಲಿ ಪ್ರತಿ ದಿನ ಸುಮಾರು 4 ಸಾವಿರ ಟನ್ ಕಸ ಸಂಗ್ರಹವಾಗುತ್ತಿದ್ದು, 7 ಘಟಕಗಳು ಕಾರ್ಯಾರಂಭವಾದರೆ ಪ್ರತಿದಿನ 2300 ಟನ್ ಕಸ
ವೈಜ್ಞಾನಿಕವಾಗಿ ಸಂಸ್ಕರಣೆಯಾಗಲಿದೆ. ಪ್ರಸ್ತುತ 1200 ಟನ್ ಕಸ ಸಂಸ್ಕರಣೆ ಮಾಡಲಾಗುತ್ತಿದ್ದು, ಮುಂದಿನ 2-3 ತಿಂಗಳಿನಲ್ಲಿ ಎಲ್ಲ ಘಟಕಗಳು ಪ್ರಾರಂಭವಾಗಲಿವೆ. ಸಾಧ್ಯವಾದಷ್ಟು ಮನೆಗಳಿಂದಲೇ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ನೀಡಿದರೆ ಸಂಸ್ಕರಣೆ ಸುಳವಾಗಲಿದೆ ಎಂದು ಹೇಳಿದರು.
ಸುಮಾರು ರು.400 ಕೋಟಿ ವೆಚ್ಚದಲ್ಲಿ 7 ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಕಸ ವಿಂಗಡಣೆಗೆ ಹೈ ಕೋರ್ಟ್ ಕೂಡ ಆದೇಶ ನೀಡಿರುವುದರಿಂದ ಮತ್ತಷ್ಟು ಸಹಕಾರಿಯಾಗಿದೆ. ರಾಜ್ಯ ಸರ್ಕಾರ, ತಜ್ಞರು ಒಗ್ಗೂಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಕಸ ವಿಂಗಡಣೆ ಕುರಿತು ದೊಡ್ಡ ಬಿದರಕಲ್ಲು ಮತ್ತು ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ, ಸರ್ಕಾರೇತರ ಸಂಸ್ಥೆಗಳು, ಸಂಘಸಂಸ್ಥೆಗಳ ಸಹ ಯೋಗದೊಂದಿಗೆ, ಮಾಧ್ಯಮ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದೇಶದ ಬೇರೆಲ್ಲೂ ಕಾಣದ ವಿಶೇಷವಾದ ವೈಜ್ಞಾನಿಕ ಸಹ ಸಂಸ್ಕರಣಾ ಘಟಕಗಳನ್ನು ಇಲ್ಲಿ ತೆರೆಯಲಾಗಿದೆ. ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರದಲ್ಲಿ ಸುಮ್ಮನೆ ಎಸೆಯುವ ಬದಲಾಗಿ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಸಂಸ್ಕರಣೆ ಮಾಡಿ ಗೊಬ್ಬರ ತಯಾರಿಸಲಾಗುತ್ತಿದೆ. ಪ್ಲಾಸ್ಟಿಕ್ ಸೇರಿ ಇತರೆ ತ್ಯಾಜ್ಯಗಳನ್ನು ಮರು ಬಳಕೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿ, ಜನಸ್ನೇಹಿಯಾಗಿ ಕಸ ವಿಲೇವಾರಿಯಾಗಿದೆ.
ದೊಡ್ಡಮಟ್ಟದ ತಂತ್ರಜ್ಞಾನ ಬಳಸಿಕೊಳ್ಳದೆ ಆಮ್ಲಜನಕ ಸಹಾಯದಿಂದ ಕರಗಿಸಿ ಗೊಬ್ಬರವನ್ನಾಗಿಸಲಾಗುತ್ತಿದೆ. ಹಸಿ ಕಸ ವಿಂಗಡಣೆ ಮಾಡುವ ವೇಳೆ ಜಿನುಗಿದ ನೀರನ್ನು ಒಂದೆಡೆ ಸಂಗ್ರಹಿಸಿ ಮತ್ತೆ ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹಸಿ ಕಸವನ್ನು 30 ದಿನಗಳ ಕಾಲ ಸಂಗ್ರಹಿಸಿ ನಂತರ 15 ದಿನಗಳಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ಅಂದರೆ 45 ದಿನಗಳ ನಂತರ ಕಸವನ್ನು ಗೊಬ್ಬರವಾಗಿ ಮಾರ್ಪಡಿಸಲಾಗುತ್ತದೆ. ದೊಡ್ಡಗಾತ್ರದ ಕಸವನ್ನು 4 ಎಂಎಂಗಿಂತಲೂ ಸಣ್ಣ ಸಣ್ಣ ಪುಡಿಯಾಗಿ ಗೊಬ್ಬರವಾಗುತ್ತದೆ. ಇಂಧನ ಮೂಲದ ಕಸವನ್ನು ಸಂಗ್ರಹಿಸಿ ಪ್ಯಾಕ್ ಮಾಡಿ ಕಾರ್ಖಾನೆ, ಸಿಮೆಂಟ್ ಫ್ಯಾಕ್ಟರಿಗಳಿಗೆ ಕಳುಹಿಸಲಾಗು ತ್ತಿದೆ. ಕಲ್ಲು ಮತ್ತು ಮಣ್ಣನ್ನು ಬೇರ್ಪಡಿ ಸುವ ವ್ಯವಸ್ಥೆ ಇದೆ ಎಂದು ಹೇಳಿದರು.
ನೀರಿಗೆ ತ್ಯಾಜ್ಯ ಸೇರಲ್ಲ: ವೈಜ್ಞಾನಿಕ ಕಸ ಸಂಸ್ಕರಣೆಯಾಗುತ್ತಿರುವ ಕಾರಣ ಕಸದ ತ್ಯಾಜ್ಯ ನೀರು ಕೆರೆ, ಕುಂಟೆ, ನದಿಗಳ ಮತ್ತು ಭೂಮಿಯ ಒಳಪದರಕ್ಕೆ ಸೇರುವುದಿಲ್ಲ. ಬದಲಾಗಿ ಕಸದಿಂದ ಬಂದ ನೀರನ್ನು ಮರು ಬಳಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಸದ ಸಂಸ್ಕರಣೆ ದೃಶ್ಯಗಳು ಸುತ್ತಮುತ್ತಲ ಜನರಿಗೆ ಕಾಣದಂತೆ ಶೆಟ್ ನಿರ್ಮಿಸಿದ್ದು, ದುರ್ವಾಸಣೆ ಬೀರದಂತೆಯೂ ಜಾಗ್ರತೆ ವಹಿಸಲಾಗಿದೆ. ಆಮ್ಲಜನಕದ ಸಹಾಯದಿಂದ ಸಂಸ್ಕರಣೆ ಮಾಡಿದರೆ ಕೆಟ್ಟವಾಸನೆ ಬರುವುದಿಲ್ಲ. ಕಸವನ್ನು ತಿರುವಾಕುವ ಸಂದರ್ಭದಲ್ಲಿ ಕೊಳೆತ ಹಣ್ಣಿನ ವಾಸನೆ ಬರಲಿದೆ. ಅದನ್ನು ನಿವಾರಿಸಲು ನೀರಿನ ಮೂಲಕ ದ್ರಾವಣಗಳನ್ನು ಚಿಮುಕಿಸಲಾಗುತ್ತಿದ್ದು, ಈ ದ್ರಾವಣಗಳು ಪ್ರಾಕೃತಿಕವಾಗಿ ತಯಾರಿಸಿರುವ ದ್ರಾವಣಗಳಾಗಿವೆ ಎಂದು ಹೇಳಿದರು.
ಆಯುಕ್ತರಿಗೆ ಘೇರಾವ್: ಸೀಗೇಹೇಳ್ಳಿ ಘಟಕಕ್ಕೆ ಬಿಬಿಎಂಪಿ ಆಯುಕ್ತ ಕುಮಾರ ನಾಯಕ್ ಅವರು ಪರಿಶೀಲನೆ ವೇಳೆಯಲ್ಲಿ ಸಂಸ್ಕರಣಾ ಘಟಕಕ್ಕೆ ಆಗಮಿಸಿದ ಸುತ್ತುಮುತ್ತಲ ಜನರು, ಕಸ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿ ಆಯುಕ್ತರಿಗೆ ಘೇರಾವ್ ಹಾಕಿದರು. ಸೀಗೇಹಳ್ಳಿ ಸುತ್ತಮುತ್ತಲ ಸುಮಾರು 30 ಹಳ್ಳಿಗಳಿಗೆ ಕಸದ ದುರ್ವಾಸನೆ ಹರಡುತ್ತಿದ್ದು, ನಾಗರಿಕರು ಆಸ್ಪತ್ರೆ ಸೇರುತ್ತಿದ್ದಾರೆ. ಅದರಲ್ಲಿಯೂ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು ಸಂಸ್ಕರಣಾ ಘಟಕಗಳ ಸುತ್ತಮುತ್ತಲ ಪ್ರದೇಶದಲ್ಲಿ ವಾಸ ಮಾಡಿದರೆ ಪರಿಸ್ಥಿತಿ ತಿಳಿಯುತ್ತದೆ ಎಂದರು.
ಜ.3ರವರೆಗೆ ಅಷ್ಟೇ ನಮ್ಮ ತಾಳ್ಮೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಸಂಸ್ಕರಣಾ ಘಟಕದ ಗೇಟ್‍ಗಳಿಗೆ ಬೀಗ ಜಡಿಯಲು ಮುಂದಾದ ಗ್ರಾಮಸ್ಥರು ಗೇಟಿನೊಳಗೆ ಆಯುಕ್ತರನ್ನು ಕೂಡಿಹಾಕಲು ಮುಂದಾಗಿದ್ದರು.
ಇದೇ ಸನ್ನಿವೇಶ ದೊಡ್ಡ ಬಿದರ ಕಲ್ಲಿನಲ್ಲೂ ಕಂಡುಬಂತು. ಸಂಸ್ಕರಣಾ ಘಟಕದಿಂದ ತ್ಯಾಜ್ಯ ನೀರನ್ನು ಅರ್ಕಾವತಿ ನದಿ ಮೂಲಕ ತಿಪ್ಪಗೊಂಡ ನಹಳ್ಳಿ ಕೆರೆಗೆ ನೀರನ್ನು ಬಿಡಲಾಗುತ್ತಿದೆ. ಜಲ ಮೂಲಗಳ ಜೊತೆಗೆ ಸುತ್ತಲಿನ ಜನ ವಾಸಿಸಲು ತೊಂದರೆಯಾಗುತ್ತಿದೆ ಎಂದರು.