

ಬೆಂಗಳೂರು: ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರಗಳ ಬಳಿ ಕಾರ್ಯಕರ್ತರ ವಿಜಯೋತ್ಸವ ಮೇರೆ ಮೀರಿತ್ತು.
ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಗರ ಕ್ಷೇತ್ರದ ಮತ ಎಣಿಕೆ ಹಾಗೂ ಬಸವೇಶ್ವರ ವೃತ್ತದ ಬಳಿಯ ಆರ್ ಸಿಸಿ ವಾಣಿಜ್ಯ ಕಾಲೇಜಿನಲ್ಲಿ ಗ್ರಾಮಾಂತರ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಿತು. ಎಣಿಕೆ ಆರಂಭವಾದ ಎರಡು ಗಂಟೆಯೊಳಗೆ ಉಭಯ ಕ್ಷೇತ್ರದ ಫಲಿತಾಂಶ ಲಭಿಸಿತು. ಮಹಾರಾಣಿ ಕಾಲೇಜಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡ ಸಲೀಂ ಅಹಮ್ಮದ್ ವಿಜೇತ ಅಭ್ಯರ್ಥಿ ನಾರಾಯಣಸ್ವಾಮಿಗೆ ಅಭಿನಂದಿಸಿದರು. ಸುದ್ದಿ ವಾಹಿನಿಗಳಿಂದ ವಿಷಯ ತಿಳಿದು ಆಗಮಿಸಿದ ನಾರಾಯಣಸ್ವಾಮಿ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದರು.
ಆರ್‍ಸಿಸಿ ಕಾಲೇಜಿನಲ್ಲಿಯೇ ಮೊಕ್ಕಾಂ ಹೂಡಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಭಾರಿ ಬೆಂಬಲಿಗರೊಂದಿಗೆ ಆಗಮಿಸಿದ್ದರು. ಪಕ್ಷದ ಅಭ್ಯರ್ಥಿ ಎಸ್.ರವಿ ಗೆಲವು ಪ್ರಕಟವಾಗುತ್ತಿದ್ದಂತೆ ಕೇಂದ್ರದ ಹೊರಗಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು. ಎಸ್.ರವಿ ಪ್ರಮಾಣ ಪತ್ರ ಪಡೆದುಕೊಂಡು ಹೊರ ಬರುವವರೆಗೂ ಸ್ಥಳ ಬಿಟ್ಟು ಕದಲದ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗುತ್ತಲೇ ಇದ್ದರು.
ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ: ಬಿಜೆಪಿ ಗೆಲ್ಲುವ ಸ್ಥಾನಗಳಿಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಗೆ ಗೆದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವಿರುದ್ಧ ವಿದ್ಯಾರ್ಥಿ ಕಾಂಗ್ರೆಸ್ ಘಟಕದಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಲಾಯಿತು.
ನಗರದ ಮೌರ್ಯ ಹೋಟೆಲ್ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಈಶ್ವರಪ್ಪ ಭಾವಚಿತ್ರದ ಮುಖವಾಡ ಧರಿಸಿ, ಸೀರೆಯುಟ್ಟು ಆಕ್ರೋಶ ವ್ಯಕ್ತಪಡಿಸಿದರು. ತಾವು ಆಡಿದ ಮಾತಿನಂತೆಯೇ ಈಶ್ವರಪ್ಪ ನಡೆದುಕೊಂಡು ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.