ಆಕಸ್ಮಿಕ ಗುಂಡಿಗೆ ಪೊಲೀಸ್ ಬಲಿ

ಪೊಲೀಸ್ ಪೇದೆ ಕೈಯಲ್ಲಿದ್ದ ಪಿಸ್ತೂಲ್‍ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಓರ್ವ ಪೊಲೀಸ್ ಪೇದೆ ಮೃತಪಟ್ಟು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಕೆಎಸ್‍ಆರ್‍ಪಿ 9ನೇ ಯಾರ್ಡ್‍ನಲ್ಲಿ ಗುರುವಾರ ನಡೆದಿದೆ...
ಮೃತ ಪೇದೆ ಮಹಾದೇವಪ್ಪ
ಮೃತ ಪೇದೆ ಮಹಾದೇವಪ್ಪ
Updated on: 

ಬೆಂಗಳೂರು: ಪೊಲೀಸ್ ಪೇದೆ ಕೈಯಲ್ಲಿದ್ದ ಪಿಸ್ತೂಲ್‍ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಓರ್ವ ಪೊಲೀಸ್ ಪೇದೆ ಮೃತಪಟ್ಟು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಕೆಎಸ್‍ಆರ್‍ಪಿ 9ನೇ ಯಾರ್ಡ್‍ನಲ್ಲಿ ಗುರುವಾರ ನಡೆದಿದೆ.

ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿಯಾದ ಕೊಳ್ಳೇಗಾಲ ಮೂಲದ ಕಿನಗನಹಳ್ಳಿ ನಿವಾಸಿ ಮಹದೇವಸ್ವಾಮಿ (29) ಮೃತ ದುರ್ದೈವಿ. ಮಡಿಕೇರಿ ಮೂಲದ ಪಿಎಸ್‍ಐ ಮಂಜುಳಾ (28) ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಪೇದೆ ರಾಜಶೇಖರ್ ಅವರ ಕೈಯಲ್ಲಿದ್ದ 14 ಸುತ್ತಿನ ಪಿಸ್ತೂಲ್ ನಿಂದ ಹಾರಿದ ಗುಂಡು ಪೇದೆ ಮಹದೇವಸ್ವಾಮಿ ಅವರ ಸೊಂಟಕ್ಕೆ ತಾಗಿ, ನಂತರ ಪಿಎಸ್ಐ ಮಂಜುಳಾ ಅವರಿಗೆ ತಾಗಿ ದುರಂತ ಸಂಭವಿಸಿದೆ.

ಅಲ್ಲಿನ ಗ್ರೌಂಡ್‍ನಲ್ಲಿ ತರಬೇತಿ ಪಡೆದ ಈ ತಂಡ ಗುರುವಾರ ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ತಮ್ಮ ಬಳಿ ಇದ್ದ ಪಿಸ್ತೂಲನ್ನು ತಪಾಸಣೆ ಮಾಡುತ್ತಿದ್ದ ವೇಳೆ ಗುಂಡು ಹಾರಿ ಅವಘಡ ಸಂಭವಿಸಿದೆ. ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಲಕ್ಷ್ಯಯ ಕಾರಣ:
ಈ ಸಿಬ್ಬಂದಿ ಕೆಎಸ್‍ಆರ್‍ಪಿಯಲ್ಲಿ ನೇಮಕಗೊಂಡಿದ್ದು, ಕೆಲ ತಿಂಗಳ ಹಿಂದೆ ಇವರನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ನೇಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಂದಿನಂತೆ ಬೆಳಗ್ಗೆ ತರಬೇತಿ ಪಡೆಯಲು ಆಗಮಿಸಿದ್ದರು. ತರಬೇತಿ ನಂತರ ಸಮೀಪದ ಕೆಎಸ್ ಆರ್‍ಪಿ ಕಚೇರಿಗೆ ಶಸ್ತ್ರಾಸ್ತ್ರ ಹಿಂತಿರುಗಿಸಲು ಹೋಗುತ್ತಿದ್ದರು.

ಈ ವೇಳೆ ಜೀಪಿನಲ್ಲಿ ಸಿಬ್ಬಂದಿ ಕುಳಿತಿದ್ದಾಗ, ರಾಜಶೇಖರ್ ಅವರು, ತಮ್ಮ ಬಳಿ ಇದ್ದ ಪಿಸ್ತೂಲನ್ನು ತೆಗೆದು, ಅದರಲ್ಲಿ ಗುಂಡು ಇದೆಯೇ ಇಲ್ಲವೇ ಎಂದು ಪರಿಶೀಲಿಸಲು ಮುಂದಾಗಿದ್ದರು. ಆಗ ಆಕಸ್ಮಿಕವಾಗಿ ಪಿಸ್ತೂಲ್‍ನ ಟ್ರಿಗರ್ ಒತ್ತಿ ಅದರಲ್ಲಿನ ಗುಂಡು ಮಹದೇವಸ್ವಾಮಿ ಅವರ ಸೊಂಟದ ಭಾಗಕ್ಕೆ ತಾಗಿದೆ. ನಂತರ ಅದು ಮಂಜುಳಾ ಅವರ ಬೆನ್ನಿಗೆ ತಾಗಿದೆ.

ಅಸ್ವಸ್ಥರಾದ ಇಬ್ಬರನ್ನೂ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಹದೇವಸ್ವಾಮಿ ಅವರು ದೇಹದಿಂದ ರಕ್ತಸ್ರಾವವಾದ ಪರಿಣಾಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಂಜುಳಾ ಅವರ ದೇಹದಿಂದ ಗುಂಡನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಚಿಕಿತ್ಸೆಗೆ ಸೂಕ್ತರೀತಿಯಲ್ಲಿ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ನಿರ್ಲಕ್ಷ್ಯ  ಆರೋಪದಡಿ ದೂರು ದಾಖಲಿಸಿಕೊಂಡಿದ್ದು, ಆರೋಪಿ ರಾಜಶೇಖರ್‍ನನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪತ್ನಿ ತುಂಬು ಗರ್ಭಿಣಿ
ಮೃತ ಮಹದೇವ ಅವರು ಒಂದೂವರೆ ವರ್ಷದ ಹಿಂದೆ ಚಾಮರಾಜನಗರ ಮೂಲದ ಚೈತ್ರ ಎಂಬುವವರನ್ನು ವಿವಾಹವಾಗಿ, ಹೆಗಡೆ ನಗರದಲ್ಲಿ ವಾಸಿಸುತ್ತಿದ್ದರು. ಚೈತ್ರಾ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಸುಂದರ ಬಾಳಿನ ಕನಸು ಕಂಡಿದ್ದರು. ಆದರೆ, ದುರಾದೃಷ್ಟಾವಶಾತ್ ಮಹದೇವಸ್ವಾಮಿ ಪತ್ನಿ ಹಾಗೂ ಕುಟುಂಬ ಸದಸ್ಯರನ್ನು ಅಗಲಿದ್ದಾರೆ. ಆಸ್ಪತ್ರೆಗೆ ಗಂಡನ ಮೃತದೇಹ ನೋಡಲು ಬಂದ ಮನೆಯವರ ಆಕ್ರಂದನ ನೆರೆದಿದ್ದವರ ಮನಕಲಕುವಂತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com