ಸರಗಳ್ಳಿಗೆ ಧರ್ಮದೇಟು, ಬಂಧನ

ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತು ಕೊಂಡು ಪರಾರಿಯಾಗಲು ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ...
ಸರಗಳ್ಳಿಗೆ ಧರ್ಮದೇಟು, ಬಂಧನ (ಸಾಂದರ್ಭಿಕ ಚಿತ್ರ)
ಸರಗಳ್ಳಿಗೆ ಧರ್ಮದೇಟು, ಬಂಧನ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತು ಕೊಂಡು ಪರಾರಿಯಾಗಲು ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬ್ಯಾಟರಾಯನಪುರ ನಿವಾಸಿ ಗೀತಾ(30), ಸರ ಕಳವಿಗೆ ಯತ್ನಿಸಿ ಸ್ಥಳದಲ್ಲೇ ಸಿಕ್ಕಿ ಬಿದ್ದ ಮಹಿಳೆ. ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಗೀತಾ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಕೃತ್ಯ ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 9.30ರ ವೇಳೆ ಶ್ರೀನಗರದ ಕಾಳಿದಾಸ ರಸ್ತೆಯಲ್ಲಿ ರಾಘವೇಂದ್ರ ಸ್ವಾಮಿ ಮಠ ಬಳಿ ರಾಜಮ್ಮ(65) ಅವರು ತರಕಾರಿ ತೆಗೆದುಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಗೀತಾ, ಸರ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ರಾಜಮ್ಮ ಕಿರುಚಿದಾಗ ಸಮೀಪದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರು ಹಾಗೂ ಸ್ಥಳೀಯರು ನೆರವಿಗೆ ಧಾವಿಸಿ
ಪರಾರಿಯಾಗುತ್ತಿದ್ದ ಗೀತಾಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಮೈಸೂರು ರಸ್ತೆ ಟಿಂಬರ್ ಯಾರ್ಡ್ ಬಡಾವಣೆಯಲ್ಲಿ ವಾಸವಿದ್ದು, ಸಾಲ ತೀರಿಸಲು ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾಗಿ ಗೀತಾ ಹೇಳಿಕೆ ನೀಡಿದ್ದಾಳೆ.

ಈ ಹಿಂದೆ ಸರಗಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿ ಬ್ಯಾಗ್ ಕಳವು: ವಿದೇಶಿ ವಿದ್ಯಾರ್ಥಿನಿಯೊಬ್ಬರ ವ್ಯಾನಿಟಿ ಬ್ಯಾಗನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಲಾಲ್ ಬಾಗ್ ರಸ್ತೆಯಲ್ಲಿ ಶನಿವಾರ ನಡೆದಿದೆ. ಬ್ಯಾಗ್ ಕಳೆದುಕೊಂಡ ಶ್ರೀಲಂಕಾ ಮೂಲದ ಕೋಯಲ್ ಪಿಳ್ಳೈ ಎಂಬುವರು ಸಿಲ್ವರ್ ಜ್ಯುಬಿಲಿ (ಎಸ್‍ಜೆ) ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕೋಯಲ್, ಮಿಷನ್ ರಸ್ತೆಯಲ್ಲಿರುವ ಪೇಯಿಂಗ್ ಗೆಸ್ಟ್‍ನಲ್ಲಿ ವಾಸವಿದ್ದರು.

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಲಾಲ್‍ಬಾಗ್ ರಸ್ತೆಯಲ್ಲಿ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಪೇಯಿಂಗ್ ಗೆಸ್ಟ್ ಕಡೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದು ದುಷ್ಕರ್ಮಿ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಕೃತ್ಯ ಸಮೀಪದ ಕಟ್ಟಡದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬ್ಯಾಗ್‍ನಲ್ಲಿ ರು.200 ನಗದು ಹಾಗೂ ಪಾಸ್ ಪೋರ್ಟ್ ಇತ್ತು ಎಂದು ಕೋಯಲ್ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com