

ಬೆಂಗಳೂರು: ಮೋಜಿನ ಜೀವನಕ್ಕಾಗಿ ಸ್ನೇಹಿತರ ಮನೆಯಲ್ಲೇ ಕಳವು ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ 2ನೇ ಹಂತದ ಲತಾ(32) ಹಾಗೂ ಆಕೆಯ ಗೆಳತಿ ಎಂಪಿಎಂ ಬಡಾವಣೆಯ ಶ್ವೇತಾ(24) ಬಂಧಿತರು. ಆರೋಪಿಗಳಿಂದ ರು.4 ಲಕ್ಷ ಮೌಲ್ಯದ 182 ಗ್ರಾಂ ಚಿನ್ನಾಭರಣ,
ಅರ್ಧ ಕೆಜಿ ಬೆಳ್ಳಿ ವಸ್ತುಗಳು, ರು.10,500 ನಗದು ಹಾಗೂ 1 ಬೈಕ್ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಎಂ.ಎಸ್.ರಾಮಯ್ಯ ಬಡಾವಣೆಯಲ್ಲಿರುವ ಖಾಸಗಿ ಕಂಪನಿ ಉದ್ಯೋಗಿ ವಸಂತ ಎಂಬುವರ ಮನೆಯಲ್ಲಿ ಆರೋಪಿಗಳು ಕಳವು ಮಾಡಿದ್ದರು. ಆರೋಪಿಗಳಾದ ಲತಾ ಹಾಗೂ ಶ್ವೇತಾ ಗಾರ್ಮೆಂಟ್ಸ್ ಉದ್ಯೋಗಿಗಳು. ಸ್ನೇಹಿತರಾಗಿರುವ ಇವರು ಮೋಜಿನ
ಜೀವನಕ್ಕಾಗಿ ತಮಗೆ ಪರಿಚಯ ಇರುವ ಆರ್ಥಿಕವಾಗಿ ಸ್ಥಿತಿವಂತರ ಮನೆಗಳಲ್ಲಿ ಕಳವು ಮಾಡುತ್ತಿದ್ದರು.
ಹೇಗೆ ಕದಿಯುತ್ತಿದ್ದರು?: ಖಾಸಗಿ ಕಂಪನಿ ಉದ್ಯೋಗಿ ವಸಂತ, ತಮ್ಮ ಕುಟುಂಬದ ಜತೆ ಎಂ.ಎಸ್.ರಾಮಯ್ಯ ಬಡಾವಣೆಯಲ್ಲಿ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆ ಪರಿಚಿತರಾಗಿರುವ ವಸಂತ ಅವರ ಮೊಬೈಲ್ ಫೋನ್‍ಗೆ ಕರೆ ಮಾಡಿದ ಶ್ವೇತಾ, ಆರೋಗ್ಯ ವಿಚಾರಿಸಿ ಮಾತನಾಡಿ ಫ್ರೀಯಾಗಿದ್ದಾಗ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದಾಳೆ. ಗೆಳತಿ ಕರೆ ಹಿನ್ನೆಲೆಯಲ್ಲಿ ವಸಂತ ಅವರು ಶ್ವೇತಾ ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ವಸಂತ ಅವರಿಗೆ ಲತಾಳನ್ನು ನನ್ನ ಗೆಳತಿ ಎಂದು ಹೇಳಿ ಶ್ವೇತಾ ಪರಿಚಯ ಮಾಡಿಸಿದ್ದಳು.
ಪೂರ್ವ ನಿಯೋಜಿತ ಸಂಚಿನಂತೆ ಶ್ವೇತಾ, ವಸಂತಳನ್ನು ಗಮನ ಬೇರೆಡೆ ಸೆಳೆದು ಆಕೆಯ ಬ್ಯಾಗ್‍ನಿಂದ ಅವರ ಮನೆಯ ಕೀಯನ್ನು ತೆಗೆದು ಲತಾಳಿಗೆ ಕೊಟ್ಟಿದ್ದಳು. ಕೂಡಲೇ ವಸಂತ ಮನೆಗೆ ತೆರಳಿದ ಲತಾ, ಬೀಗ ತೆರೆದು ಮನೆಯಲ್ಲಿ ಒಡವೆಗಳು ಹಾಗೂ ಹಣ ದೋಚಿದ್ದಾಳೆ. ಕಳವು ಮಾಡಿಕೊಂಡು ಬಂದ ಲತಾ, ಶ್ವೇತಾಳ ಮನೆಗೆ ಬಂದು ವಸಂತಗೆ ಗೊತ್ತಾಗದಂತೆ ಆಕೆಯ ಬ್ಯಾಗ್‍ನಲ್ಲಿ ಮನೆ ಕೀಯನ್ನು ಇಟ್ಟಿದ್ದಳು ಎಂದು ಪೊಲೀಸರು ತಿಳಿಸಿದರು.
ಸಿಸಿ ಟಿವಿ ಕ್ಯಾಮೆರಾ ಸುಳಿವು: ಶ್ವೇತಾ ಮನೆಯಿಂದ ಬಂದ ನಂತರ ವಸಂತ ಅವರಿಗೆ, ತನ್ನ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಡಲೇ ಪೀಣ್ಯ ಠಾಣೆಯಲ್ಲಿ
ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ, ಮನೆ ಬೀಗ ಮುರಿದು ಒಳ ಪ್ರವೇಶಿಸಿರದ ಕಾರಣ ಯಾರೋ ಪರಿಚಿತರೇ ಕೃತ್ಯ ಎಸಗಿರುವ ಅನುಮಾನ ಉಂಟಾಗಿತ್ತು. ಹೀಗಾಗಿ, ವಸಂತ ಅವರ ಮನೆ ಎದುರಿನ ಮನೆಯಲ್ಲಿರುವ ಸಿಸಿ ಟಿವಿ ಕ್ಯಾಮೆರಾ ವಿಡಿಯೋ ಪರಿಶೀಲಿಸಿದಾಗ ಲತಾ ಒಳಗೆ ಹೋಗಿರುವುದು ಗೊತ್ತಾಗಿದೆ. ವಿಡಿಯೋ ನೋಡಿದ ವಸಂತ ಅದು ತನ್ನ ಸ್ನೇಹಿತೆಯೆಂದು ಹೇಳಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಈ ಹಿಂದೆ ಚಂದ್ರ ಬಡಾವಣೆಯಲ್ಲಿ ನಡೆದಿದ್ದ ಮತ್ತೊಂದು ಮನೆಗಳ್ಳತನದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.