ಬೆಂಗಳೂರು: ಪಾಕಿಸ್ತಾನ-ಭಾರತದ ನಡುವೆ 2003ರಲ್ಲಿ ನಡೆದ ಮಾತುಕತೆಯ ಆಧಾರದ ಮೇಲೆ ಒಪ್ಪಂದ ಸಿದ್ಧವಾದರೆ, ವಾಸ್ತವ ಗಡಿ ನಿಯಂತ್ರಣ ರೇಖೆ ಕುರಿತಂತೆ ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ವೇದಿಕೆ ಸಿದ್ಧವಾದಂತಾಗುತ್ತದೆ ಎಂದು ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ಅಭಿಪ್ರಾಯಪಟ್ಟರು.
ಬೆಂಗಳೂರು ಪ್ರೆಸ್ ಕ್ಲಬ್ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕ್‍ನ ಆಗಿನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಮತ್ತು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಡುವೆ ಅರ್ಥಪೂರ್ಣ ಮಾತುಕತೆ ನಡೆದಿತ್ತು. ಅದನ್ನೇ ಒಪ್ಪಂದಕ್ಕೆ ಪರಿವರ್ತಿಸಬಹುದಿತ್ತು. ಆದರೆ, ಇದುವರೆಗೆ ಈ ಕುರಿತು ಭಾರತ ಆಸಕ್ತಿ ತೋರಿಸಿಲ್ಲ. ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯಲ್ಲಿ ಪದೇ ಪದೇ ಸಂಭವಿಸುವ ಘರ್ಷಣೆಗೆ ಇದು ಮುಖ್ಯ ಕಾರಣವಾಗಿದೆ ಎನ್ನುವ ಮೂಲಕ, ಸದ್ಯಕ್ಕೆ ಈ ಸಮಸ್ಯೆಗೆ ಪರಿಹಾರವಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಇದನ್ನೇ ಹೇಳಿದ್ದರೂ ಅದಕ್ಕೆ ಪ್ರಾಮುಖ್ಯತೆ ಸಿಗಲಿಲ್ಲ. ಎಲ್‍ಒಸಿ ಘರ್ಷಣೆ ತಪ್ಪಿಸುವುದು ಪಾಕ್‍ನ ಮೊದಲ ಆದ್ಯತೆಯಾಗಿದ್ದು, ಭಾರತ ಈ ಕುರಿತು ಸಹಕರಿಸಬೇಕು. ಪರಸ್ಪರ ದೂಷಣೆ ಮಾಡುತ್ತಿದ್ದರೆ ಸತ್ಯ ಗೊತ್ತಾಗುವುದಿಲ್ಲ. ಈ ಕಾರಣಕ್ಕಾಗಿ, ಮೂರನೇ ಪಕ್ಷದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲೆಂಬುದು ನಮ್ಮ ಪ್ರತಿಪಾದನೆ ಎಂದು ಬಸಿತ್ ಹೇಳಿದರು.
ಅಣ್ವಸ್ತ್ರ ಹೆಚ್ಚಳ ನಮ್ಮ ಹಕ್ಕು: ಪಾಕಿಸ್ತಾನ ತನ್ನ ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸುತ್ತಿರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಸಿತ್, ಅಣ್ವಸ್ತ್ರ ಸ್ಪರ್ಧೆ ಪ್ರಾರಂಭಿಸಿದ್ದೇ ಭಾರತ. ಹೀಗಾಗಿ ತನ್ನ ರಕ್ಷಣೆಗೆ ಏನೆಲ್ಲ ಅವಶ್ಯ ಎನಿಸುತ್ತದೋ ಅದೆಲ್ಲವನ್ನೂ ಮಾಡುವ ಹಕ್ಕು ಮತ್ತು ಜವಾಬ್ದಾರಿ ಪಾಕಿಸ್ತಾನಕ್ಕಿದೆ ಎಂದರು.
ಚೀನಾ ನಮ್ಮ ಅತ್ಯುತ್ತಮ ಮಿತ್ರನಾಗಿದ್ದು, ಸಹಜವಾಗಿ ಆ ದೇಶದೊಂದಿಗಿನ ವಾಣಿಜ್ಯ ಬಾಂಧವ್ಯ ಬಲಪಡಿಸಿಕೊಳ್ಳಲು ಮುಂದಾಗಿದ್ದೇವೆ. ಇದು ತಪ್ಪೆ? ಹಾಗೆ ನೋಡಿದರೆ ಭಾರತ ಚೀನಾದೊಂದಿಗೆ ವಾರ್ಷಿಕ 60 ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟು ನಡೆಸುತ್ತಿದೆ. ಇದನ್ನೇನಾದರೂ ಪಾಕಿಸ್ತಾನ ಪ್ರಶ್ನಿಸಿದೆಯೇ? ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.
ನಾವೂ ಉಗ್ರ ಸಂತ್ರಸ್ತರೇ: ಭಯೋತ್ಪಾದನೆಯನ್ನು ಪಾಕಿಸ್ತಾನ ಬೆಂಬಲಿಸಿಲ್ಲ.ಅಂಥ ಎಲ್ಲಾ ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಲಾಗಿದೆ. 9/11 ಘಟನೆ ನಂತರದಿಂದ ಇಲ್ಲಿಯವರೆಗೆ ಭಯೋತ್ಪಾದನೆಯಿಂದಾಗಿ ಪಾಕ್‍ನ 60,000 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ನಾವು ಕೂಡಾ ಭಯೋತ್ಪಾದನಾ ಸಂತ್ರಸ್ತ ದೇಶ ಎಂದ ಬಸಿತ್, ಉಗ್ರ ಸಂಘಟನೆ ಎಂದು ಭಾರತ ಆರೋಪಿಸುವ ಜಮಾದ್ ಉದ್ ದುವಾ ಸಮಾಜ ಸೇವಾ ಸಂಘಟನೆ ಎಂದು ಸಮರ್ಥಿಸಿಕೊಂಡರು.
ಮುಂಬೈ ದಾಳಿ ಕುರಿತಂತೆ 6 ಜನರ ವಿಚಾರಣೆ ನಡೆಯುತ್ತಿದ್ದು, ಆರೋಪ ಕುರಿತಂತೆ ಭಾರತದಿಂದ ಹೆಚ್ಚಿನ ಮಾಹಿತಿ ಕೋರಿದ್ದೆವು. ಆದರೆ, ಇದುವರೆಗೆ ಭಾರತ ಸ್ಪಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪಾಕ್‍ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಚೆನ್ನಾಗಿದ್ದಾರೆ. ಅವರಿಗೆ ಎಲ್ಲಾ ರಕ್ಷಣೆ ಒದಗಿಸಲಾಗಿದೆ. ನಿಮ್ಮ ಹಿರಿಯ ನಾಯಕರಲ್ಲೊಬ್ಬರಾದ ಎಲ್.ಕೆ. ಆಡ್ವಾಣಿ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಾಗ ಇದೆಲ್ಲವನ್ನೂ ಕಣ್ಣಾರೆ ನೋಡಿ ತೃಪ್ತಿವ್ಯಕ್ತಪಡಿಸಿದ್ದಾರೆ. ಹೀಗಾಗಿ, ಹಿಂದುಗಳಿಗೆ ರಕ್ಷಣೆಯಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.
ದಾವೂದ್ ಇಬ್ರಾಹಿಂ ಪಾಕ್‍ನಲ್ಲಿಲ್ಲ. ಮಾಧ್ಯಮದ ವರದಿಗಳ ಆಧಾರದ ಮೇಲೆ ಜವಾಬ್ದಾರಿಯುತ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ. ನಿಮ್ಮ ಸರ್ಕಾರ ದಾಖಲೆ ಕೊಟ್ಟರೆ ನಾವು ಖಂಡಿತ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.