

ಬೆಂಗಳೂರು: ಬೆಂಗಳೂರು ನಗರದ ಪಾರ್ಕಿಂಗ್ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಮಾರ್ಚ್ 1ರಿಂದ ಸುಮಾರು 56 ರಸ್ತೆಗಳಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮುಂದಿನ ವಾರದಿಂದಲೇ ಬಿಬಿಎಂಪಿ ಪಾರ್ಕಿಂಗ್ ಬಿಡ್ಡಿಂಗ್ ಕರೆಯುವ ಸಾಧ್ಯತೆ ಇದ್ದು, ಮಾರ್ಚ್ 1ರಿಂದ ಪಾವತಿ ಪಾರ್ಕಿಂಗ್ ಕಡ್ಡಾಯವಾಗಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, ಮುಂದಿನವಾರದಿಂದಲೇ ತಾಂತ್ರಿಕ ಬಿಡ್ಡಿಂಗ್ ಅವಕಾಶ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಕಾಂಟ್ರಾಕ್ಟರ್ ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಿಬಿಎಂಪಿ ಆಯ್ಕೆ ಮಾಡುವ ಬಿಡ್ಡರ್ ಗಳು ಎಲ್ಲ 56 ರಸ್ತೆಗಳಲ್ಲಿಯೂ ಸುಮಾರು 2, 500 ಕಾರುಗಳು ಮತ್ತು 4 ಸಾವಿರ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು. ಪ್ರತಿಯೊಂದು ರಸ್ತೆಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದಲ್ಲದೆ ಪಾರ್ಕಿಂಗ್ ಗೆ ಸಂಬಂಧಿಸಿದಂತೆ ಸ್ಥಳ ಮತ್ತು ಇತರೆ ಮಾಹಿತಿಗಳ ಡಿಜಿಟಲ್ ಫಲಕವನ್ನು ಪ್ರತಿಯೊಂದು ರಸ್ತೆಗೆ ಅಳವಡಿಸಬೇಕು. ಈ ಎಲ್ಲ ಮೂಲಾಂಶಗಳನ್ನು ಒಳಗೊಂಡ ಬಿಡ್ಡಿಂಗ್ ಅರ್ಜಿಯನ್ನು ಬಿಡ್ಡರ್ ಗಳು ಸಲ್ಲಿಸಬೇಕು. ಅರ್ಜಿ ಬಂದ ಬಳಿಕ ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ಪಾರ್ಕಿಂಗ್ ಶುಲ್ಕವನ್ನು ಬಿಬಿಎಂಪಿಯೇ ನಿರ್ಧರಿಸಲಿದ್ದು, ಕಾರ್ ಪಾರ್ಕಿಂಗ್ ಪ್ರತೀ ಗಂಟೆಗೆ 10 ರಿಂದ 30 ರು. ಮತ್ತು ದ್ವಿಚಕ್ರವಾಹನದ ಪಾರ್ಕಿಂಗ್ ಪ್ರತೀ ಗಂಟೆಗೆ 5 ರಿಂದ 10 ರು.ಗಳಾಗಿರಬೇಕು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.