

ಬೆಂಗಳೂರು: ಬೈಕ್ ಗೆ ಹಾಲಿನ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್ ವೇರ್ ಇಂಜಿನೀಯರ್ ಆಗಿದ್ದ ಉದಯೋನ್ಮುಖ ಗಾಯಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಯುವತಿ ಗಾಯಗೊಂಡಿರುವ ಘಟನೆ ಗುರುವಾರ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆರ್.ಟಿ. ನಗರ ನಿವಾಸಿ ಮಧುರಾ ಪಟವರ್ಧನ್ (24) ಮೃತ ಟೆಕ್ಕಿ. ಗಾಯಗೊಂಡಿರುವ ಸಹೋದ್ಯೋಗಿ ವಿದ್ಯಾರಣ್ಯಪುರದ ಶೋಭಾ ರಾವ್ (28) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ 9.30 ಗಂಟೆಯಲ್ಲಿ ಕಚೇರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಎಂಟೆಕ್ ಪದವೀಧರೆ ಮಧುರಾ, ಮಹಾತ್ಮಾ ಗಾಂಧಿ ರಸ್ತೆಯಲ್ಲಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ಶೋಭಾ ರಾವ್ ಜೊತೆ ದ್ವಿಚಕ್ರ ವಾಹನದಲ್ಲಿ ಕಚೇರಿಗೆ ತೆರಳುತ್ತಿದ್ದಾಗ ಕಬ್ಬನ್ ಜಂಕ್ಷನ್ನಲ್ಲಿ ಬಲಭಾಗಕ್ಕೆ ತಿರುವು ಪಡೆದಾಗ ಹಾಲಿನ ವಾಹನ ಡಿಕ್ಕಿ ಹೊಡೆದಿದೆ. ದ್ವಿಚಕ್ರವಾಹನದ ಹಿಂದೆ ಕುಳಿತಿದ್ದ ಮಧುರಾ ಧರಿಸಿದ್ದ ಹೆಲ್ಮೆಟ್ ಕಳಚಿಕೊಂಡಿದ್ದು, ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದಿದೆ. ಬಲಭಾಗಕ್ಕೆ ಬಿದ್ದ ಶೋಭಾ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಶಿವಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ ಬಿಐ ನಲ್ಲಿ ವ್ಯವಸ್ಥಾಪಕರಾಗಿರುವ ಅಶೋಕ್ ಪಟವರ್ಧನ್ ಪುತ್ರಿ ಮಧುರಾ, 2 ವರ್ಷಗಳ ಹಿಂದೆ ‘ಎದೆತುಂಬಿ ಹಾಡುವೆನು’ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಮಾತಾಗಿದ್ದರು. ಪ್ರತಿದಿನ ಕಚೇರಿಗೆ ಬಿಎಂಟಿಸಿ ಬಸ್ನಲ್ಲೇ ತೆರಳುತ್ತಿದ್ದರು. ಇತ್ತೀಚೆಗೆ ಸ್ನೇಹಿತೆ ಶೋಭಾ ರಾವ್, ಹೊಸ ದ್ವಿಚಕ್ರ ವಾಹನ ಖರೀದಿ ಮಾಡಿದ್ದಳು. ಹೀಗಾಗಿ ಕಚೇರಿಗೆ ಜತೆಯಲ್ಲೇ ಹೋಗೊಣ ಎಂದು ಕರೆದಿದ್ದಳು. ಸ್ನೇಹಿತೆಯ ಜೊತೆ ಹೋಗುವ ಖುಷಿಯಲ್ಲಿ ಬುಧವಾರ ಹೊಸ ಹೆಲ್ಮೆಟ್ ಖರೀದಿಸಿದ್ದಳು.