

ಬೆಂಗಳೂರು: ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಅನುಮಾನಸ್ಪದ ಸೂಟ್ ಕೇಸ್ ರಹಸ್ಯ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದಾಗಿ ಬಯಲಾಗಿದೆ.
ಮಲೇಶಿಯಾ ಏರ್ ಲೈನ್ಸ್ ಕಚೇರಿ ಸಿಬ್ಬಂದಿ ಕೊಟ್ಟಿದ್ದ ಸೂಟ್ ಕೇಸ್ ಅನ್ನು ಹೌಸ್ ಕೀಪಿಂಗ್ ಮಹಿಳೆಯೊಬ್ಬರು ಅಲ್ಲೇ ಬಿಸಾಡಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೇವನಹಳ್ಳಿಯ ನಿವಾಸಿ ನಾಗವೇಣಿ ಕೆಲ ವರ್ಷಗಳಿಂದ ಮಲೇಶಿಯಾ ಏಱ್ ಲೈನ್ಸ್ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಶುಕ್ರವಾರ ತಮ್ಮ ಕಚೇರಿಯಲ್ಲಿದ್ದ ಹಳೇ ಸೂಟ್ ಕೇಸನ್ನು ಅಲ್ಲಿನ ಸಿಬ್ಬಂದಿ ನಾಗವೇಣಿಗೆ ಕೊಟ್ಟಿದ್ದು, ಬಟ್ಟೆಗಳನ್ನು ಇಟ್ಟುಕೊಳ್ಳಲು ಆಗುತ್ತದೆ ಬಳಸಿಕೋ ಎಂದು ಹೇಳಿದ್ದಾರೆ. ಆದರೆ ಸಂಜೆ ಕೆಲಸ ಮುಗಿಸಿದ ನಾಗವೇಣಿ, ಪತಿ ಅಂಜನಪ್ಪ ಜತೆ ಬೈಕ್ ನಲ್ಲಿ ಹೋಗುವಾಗ ಸೂಟ್ ಕೇಸ್ ಕಂಡು ಪತಿ ಬೈದಿದ್ದರಿಂದ ಕಚೇರಿ ಹಿಂಭಾಗದಲ್ಲೇ ಬಿಸಾಡಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.