ಚಿಕ್ಕಮಗಳೂರು

ದತ್ತ ಗೆಲವು ಖಚಿತ: ವಿಶ್ವಾಸ

Published On :

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಸರಳ ನುಡಿಯ ವ್ಯಕ್ತಿಯಾಗಿರುವ ವೈ.ಎಸ್.ವಿ. ದತ್ತರವರ ಉತ್ತಮ ವ್ಯಕ್ತಿತ್ವದ ಮುಂದೆ ವಿರೋಧ ಪಕ್ಷದ ಹಣ, ಆಮಿಷ ಯಾವುದೇ ಪರಿಣಾಮ ಬೀರದೆ ಜನರು ದತ್ತ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಯುವ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಹೇಳಿದರು.    
   ಈ ಬಗ್ಗೆ ಹೇಳಿಕೆ ನೀಡಿ, ಕಳೆದ 2 ವಿಧಾನಸಭಾ ಚುನಾವಣೆಗಳಲ್ಲಿ ವೈ.ಎಸ್.ವಿ. ದತ್ತರವರ ಸ್ಪಂದನೆ ಮತ್ತು ಜಾತ್ಯತೀತ ಮನೋಭಾವದ ಸರಳತೆ ಮೆಚ್ಚಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಮತದಾರರು ಹೆಚ್ಚು ಮತ ನೀಡುವ ಮೂಲಕ ಜಾತ್ಯತೀತ ನಿಲುವಿಗೆ ಬೆಂಬಲ ನೀಡಿದ್ದಾರೆ. ಕಳೆದ ಸರಸ್ವತಿಪುರ ಜಿಪಂ ಚುನಾವಣೆಯಲ್ಲೂ  ಜೆಡಿಎಸ್ ಗೆಲವು ಸಾಧಿಸುವ ಮೂಲಕ ಜನರು ದತ್ತರವರ ವ್ಯಕ್ತಿತ್ವಕ್ಕೆ ಬೆಂಬಲ ನೀಡಿದರು ಎಂದರು.
 ಈ ಬಾರಿ ಜಾತಿ ಪ್ರಾಬಲ್ಯ ಅಳಿಸುವ ಮೂಲಕ ಕಡೂರು ಕ್ಷೇತ್ರದಲ್ಲಿ ದತ್ತ ಅವರು ಅತಿಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಿ ರಾಜ್ಯ ರಾಜಕಾರಣಕ್ಕೆ ಹೊಸ ಸಂದೇಶ ರವಾನಿಸಲಿದ್ದಾರೆ. ಕ್ಷೇತ್ರದ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತ ನೋಡಿ ಬೇಸತ್ತು ದತ್ತರವರನ್ನು ಗೆಲ್ಲಿಸಲಿದ್ದಾರೆ ಎಂದರು.
ಅಪಪ್ರಚಾರ ಬೇಡ: ಮನವಿ
ಮೂಡಿಗೆರೆ: ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಿರುವ ಬಿ.ಎನ್.ಚಂದ್ರಪ್ಪರನ್ನು ಟಿಕೆಟ್ ವಿಚಾರದಲ್ಲಿ ಹೊರಗಿನವರಂತೆ ಬಿಂಬಿಸುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಗ್ರವಳ್ಳಿ ಸಂಪತ್ ಹೇಳಿದರು.
 ಅವರು ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಚಂದ್ರಪ್ಪ ಮೂಡಿಗೆರೆ ಪಟ್ಟಣದ 2ನೇ ವಾರ್ಡ್‌ನಲ್ಲಿ ಸ್ವಂತ ಮನೆ ಹೊಂದಿದ್ದು,  ಗೋಣಿಬೀಡಲ್ಲಿ ಕಾಫಿ ತೋಟವಿದೆ. ಹೀಗಿರುವಾಗ ಅವರು ಹೊರಗಿನವರಾಗಲು ಹೇಗೆ ಸಾದ್ಯ ಎಂದು ಅವರು ಪ್ರಶ್ನಿಸಿದರು.
ಅಪಪ್ರಚಾರ: ಕಾಂಗ್ರೆಸ್‌ಗೆ ತನ್ನದೇ ಆದ ತತ್ವ, ಸಿದ್ಧಾಂತದ ಭದ್ರ ಬುನಾದಿದೆ. ಪಕ್ಷದಲ್ಲಿ ಒಳಗಿನವರು ಅಥವಾ ಹೊರಗಿನವರು ಎನ್ನುವ ಭೇದ  ಭಾವನೆ ಈವರೆಗೆ ಬಂದಿರಲಿಲ್ಲ. ಆದರೆ ಕೆಲವರು ಸ್ವಯಂ ಪ್ರತಿಷ್ಠೆಗಾಗಿ ಚಂದ್ರಪ್ಪ ವಿರುದ್ಧ ಅಪ ಪ್ರಚಾರದಲ್ಲಿ ತೊಡಗಿರುವುದು ದುರದೃಷ್ಟಕರ ಎಂದರು.
 ಗೋಷ್ಠಿಯಲ್ಲಿ ಮೂಡಿಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಯ್ಯೂಬ್, ಮಾಜಿ ಅಧ್ಯಕ್ಷರಾದ ಜಾನಕಿ, ಯೋಗೇಶ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ಕೆ.ಕೇಶವ ಸುವರ್ಣ, ಕುಮಾರರಾಜ್ ಅರಸ್, ಶಿವಾನಂದ್, ಎಚ್.ಆರ್.ಸಂಪತ್ ಕುಮಾರ್, ಕಲ್ಲೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ
ತರೀಕೆರೆ: ಹೊಸ ಪಕ್ಷಗಳಿಗೆ ಸೈದ್ಧಾಂತಿಕ ಹಿನ್ನೆಲೆ ಇಲ್ಲ ಎಂದು ಬಿಜೆಪಿ ಮುಖಂಡ, ಮ್ಯಾಮ್‌ಕೋಸ್ ನಿರ್ದೇಶಕ ಆರ್.ದೇವಾನಂದ್ ತಿಳಿಸಿದ್ದಾರೆ. ಅವರು ಶುಕ್ರವಾರ ಸಮೀಪದ ಎಂ.ಸಿ.ಹಳ್ಳಿಯಲ್ಲಿ ಏರ್ಪಾಡಾಗಿದ್ದ ಬಿಜೆಪಿ ಕಸಬಾ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲಿ ಮಾತನಾಡುತ್ತಿದ್ದರು. ಬಿಜೆಪಿ ಸರ್ಕಾರ ಸಾಧನೆ ಮಾಡಿದೆ. ಅಭಿವೃದ್ಧಿ ಮಾಡಿದ್ದೇವೆ, ಸರ್ಕಾರ ಉಳಿಸಿಕೊಳ್ಳಲು ಸರ್ಕಸ್  ಮಾಡಬೇಕಾಯಿತು. ಬಿಜೆಪಿ ಸ್ಥಿರವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು. ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ಪಕ್ಷ ಗೆಲ್ಲಿಸಲು ಸಾಧ್ಯ. ವ್ಯಕ್ತಿಯಿಂದಲ್ಲ. ಮತದಾರ ಬಂಧುಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ರಾಷ್ಟ್ರೀಯ ಹಿತಾಸಕ್ತಿ ಕಾಪಾಡುತ್ತಿರುವ ಬಿಜೆಪಿ ಪಕ್ಷ ಗೆಲ್ಲಿಸಬೇಕು. ಪಕ್ಷದಲ್ಲಿ ಗೊಂದಲವಿತ್ತು ಅಷ್ಟೆ, ಸರ್ಕಾರದಲ್ಲಿಲ್ಲ, ಅಂತಹ ದೊಡ್ಡ ದೋಷ ಮಾಡಿಲ್ಲ ಎಂದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಪುಲ್ಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ರಾಜ್ಯ  ಕಾರ್ಯಕಾರಣಿ ಸಮಿತಿ ಸದಸ್ಯ ದುಗ್ಲಾಪುರ ಮಂಜುನಾಥ್, ಹಳೆಯೂರು ರೇಣುಕಣ್ಣ, ಪಕ್ಷದ ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.