ಚಿಕ್ಕಮಗಳೂರು

ದೇವಾಲಯಗಳಿಂದ ಮಾನಸಿಕ ಶಾಂತಿ

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಏ.9
ತಾಲೂಕಿನ ಹಂಪಾಪುರದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿದ್ದ ಶ್ರೀ ಹಂಪೆ ವಿರೂಪಾಕ್ಷೇಶ್ವರಸ್ವಾಮಿ ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜೆ ನೂರಾರು ಭಕ್ತರ ನಡುವೆ ಮಂಗಳವಾರ ಶ್ರದ್ದಾಭಕ್ತಿಗಳಿಂದ ನಡೆಯಿತು.
ಮಂಡಲ ಪೂಜೆ ಅಂಗವಾಗಿ ಶ್ರೀ ವಿರೂಪಾಕ್ಷೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ ನಡೆಯಿತು. ನಂತರ ವೇದಬ್ರಹ್ಮ ಶ್ರೀ ರಘುನಾಥ ಅವದಾನಿಗಳ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ನವಗ್ರಹ, ಶ್ರೀ ವೀರಾಂಜನೇಯ ಮತ್ತು ರುದ್ರ ಹೋಮಗಳು ಜರುಗಿದವು.
ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರುದ್ರ ಹೋಮದ ಪೂರ್ಣಾಹುತಿ ನೆರವೇರಿಸಿ ಮಾತನಾಡಿದ ಶ್ರೀ ಕಾಮಧೇನು ಗಣಪತಿ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ, ದೇವಾಲಯಗಳನ್ನು ನಿರ್ಮಿಸುವುದು ಭಗವಂತನಿಗಾಗಿ ಅಲ್ಲ ಭಕ್ತರಿಗಾಗಿ ಅವರ ಆತ್ಮೋದ್ಧಾರಕ್ಕಾಗಿ ಎಂದು ಹೇಳಿದರು.
ಮಾನಸಿಕ ನೆಮ್ಮದಿ: ಸರ್ವವ್ಯಾಪಿಯಾಗಿದ್ದು ಎಲ್ಲದರಲ್ಲೂ ಅಡಗಿರುವ ಭಗವಂತನಿಗೆ ದೇವಾಲಯದ ಅವಶ್ಯಕತೆಯಿಲ್ಲ. ಆದರೆ, ಭಕ್ತರ ಆತ್ಮೋದ್ಧಾರಕ್ಕೆ ಮತ್ತು ಅವರ ಮಾನಸಿಕ ಶಾಂತಿ, ನೆಮ್ಮದಿಗೆ ದೇವಾಲಯಗಳು ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಗ್ರಾಮಸ್ಥರು ಇದನ್ನರಿತು ನೂತನವಾಗಿ ನಿರ್ಮಿಸಲಾಗಿರುವ ದೇವಾಲಯಕ್ಕೆ ಪ್ರತಿದಿನ ತೆರಳಿ ಪೂಜೆ, ಪುನಸ್ಕಾರ ನಡೆಸುವ ಮೂಲಕ ತಮ್ಮ ಆತ್ಮೋದ್ಧಾರ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕುಂಬಾಭಿಷೇಕ ನೆರವೇರಿಸಿ ಮಾತನಾಡಿದ ಶ್ರೀ ಶಂಕರಮಠದ ಧರ್ಮದರ್ಶಿ ಎಚ್.ಎನ್. ಅನಂತರಾಮು, ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ಪ್ರತಿದಿನ ನಡೆಯುವುದರಿಂದ ಗ್ರಾಮದ ಅಭಿವೃದ್ಧಿಯ ಜೊತೆಗೆ ಮಳೆ, ಬೆಳೆ ಆಗಿ ದೇಶ ಸುಭಿಕ್ಷವಾಗುತ್ತದೆ ಎಂದು ಕಿವಿಮಾತು ಹೇಳಿದರು. ರೂವಾರಿ ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಡಿವೈಎಸ್ಪಿ ಎಸ್. ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.