ಬಿಜೆಪಿಯ ಭ್ರಷ್ಟ ಮುಖ ತೋರಿಸಿ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.13
ಪ್ರಜಾಪ್ರಭುತ್ವಕ್ಕೆ ಮಸಿ ಬಳಿದು ರಾಜಕೀಯ ದ್ರೋಹ ಎಸಗಿರುವ ಬಿಜೆಪಿ ಸರ್ಕಾರದ ಭ್ರಷ್ಟ ಮುಖದ ಬಗ್ಗೆ ಮತದಾರರಿಗೆ ತಿಳಿ ಹೇಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದರು.
ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಹಣ ಮಾಡುವುದೊಂದೇ ಗುರಿಯಾಗಿ ಹೊಂದಿದ್ದರಿಂದ ರಾಜಕಾರಣಕ್ಕೆ ದ್ರೋಹ ಬಗೆದರು. ಪರಿಣಾಮ ಮುಖ್ಯಮಂತ್ರಿಗಳೇ ಜೈಲು ಸೇರಿದರು. ಇನ್ನು ಅನೇಕರು ತನಿಖೆ ಎದುರಿಸುತ್ತಿದ್ದಾರೆ.
ಕಾರವಾರದ ಬಂದರಿನ ಮೂಲಕ ಹೊರದೇಶಗಳಿಗೆ ರಫ್ತಾಗಿರುವ ಬೇಲೆಕೇರಿ ಹಗರಣದ ತನಿಖೆ ಮುಗಿದ ನಂತರ ಬಿಜೆಪಿ ಸರ್ಕಾರದ ಎಷ್ಟು ಮಂತ್ರಿಗಳು ಶಿಕ್ಷೆ ಅನುಭವಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯ ದಿವಾಳಿತನದತ್ತ: ಬಿಜೆಪಿ ತನ್ನ ದುರಾಡಳಿತದಿಂದ ರಾಜ್ಯವನ್ನು ದಿವಾಳಿತನದತ್ತ ಕೊಂಡೊಯ್ದಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಡವರಿಗೆ ಮನೆ ಕಟ್ಟಿಕೊಡಲು ಆಗಿಲ್ಲ, ಪಡಿತರ ಚೀಟಿ ಕೊಟ್ಟಿದ್ದನ್ನು ವಾಪಸ್ ಪಡೆದು ಜನರ ಅನ್ನಕ್ಕೂ ಕಲ್ಲು ಹಾಕಿದರು. ಕೇಂದ್ರದ ಅನೇಕ ಯೋಜನೆ ಜಾರಿಗೊಳಿಸಲು ವಿಫಲವಾದರು ಎಂದು ಟೀಕಿಸಿದರು.
ಶಿವಮೊಗ್ಗ ನಗರದವರೇ ಆದ ಡಿಸಿಎಂ ಈ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ. ಇಂಧನ ಸಚಿವರಾಗಿದ್ದಾಗ ರಾಜ್ಯದ ವಿದ್ಯುತ್ ಸಮಸ್ಯೆ ಸ್ಪಂದಿಸಿಲ್ಲ. ಭ್ರಷ್ಟ ಬಿಜೆಪಿ ಸರ್ಕಾರದಿಂದ ರಾಜ್ಯ ದಿವಾಳಿ ಹಂತಕ್ಕೆ ತಲುಪಿದೆ. ಭ್ರಷ್ಟಾಚಾರ, ಹಗರಣಗಳು ಮಿತಿಮೀರಿವೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಬಿಜೆಪಿ ಹಾಗೂ ಕೆಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡು ಪಕ್ಷಗಳ ಕಾರ್ಯಸೂಚಿ, ಹಿನ್ನೆಲೆ ಏನೆಂಬುದನ್ನು ರಾಜ್ಯದ ಜನತೆ ಅರಿತುಕೊಳ್ಳಬೇಕು.
ರಾಜ್ಯ ರಾಜಕಾರಣವನ್ನು ಅಧೋಗತಿಗೆ ತಂದು ನಿಲ್ಲಿಸಿದ ಈ ಎರಡು ಪಕ್ಷಗಳಿಗೆ ಪ್ರಸ್ತುತ ಚುನಾವಣೆಯಲ್ಲಿ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್ಪರ ಅಲೆ ಕಂಡುಬರುತ್ತಿದೆ. ಈ ಬಾರಿ ಅತೀ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಜಯ ನಿಶ್ಚಿತ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಬಿಜೆಪಿ ಮತ್ತು ಕೆಜೆಪಿ ಒಂದು ನಾಣ್ಯದ ಎರಡು ಮುಖ ಇದ್ದಂತೆ. ಜೆಡಿಎಸ್ ಕ್ಷೇತ್ರದಲ್ಲಿ ಅಸ್ತಿತ್ವಕ್ಕೆ ಪರದಾಡುತ್ತಿದೆ ಎಂದು ವ್ಯಾಖ್ಯಾನಿಸಿದರು.
ಕಾಂಗ್ರೆಸ್ನ ಎಲ್ಲಾ ಕಾರ್ಯಕರ್ತರು ತಾವೇ ಅಭ್ಯರ್ಥಿಗಳಿದ್ದಂತೆ ಎಂದು ಭಾವಿಸಿ ಮನೆ ಮನೆಗೆ ತೆರಳಿ ಪಕ್ಷದ ಗೆಲುವಿಗೆ ಸಹಕರಿಸಿ ಎಂದರು. ವಿವಿಧ ಪಕ್ಷದ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ಬಲ್ಕಿಷ್ ಬಾನು, ಮಾಜಿ ವಿಧಾನಪರಿಷತ್ ಸದಸ್ಯ ಮೀರ್ ಅಜೀಜ್ಅಹ್ಮದ್, ಮುಖಂಡರಾದ ದಿನೇಶ್, ರಮೇಶ್ ಹೆಗ್ಡೆ, ಸುರೇಶ್ ಕುಮಾರ್, ರುಕ್ಮಿಣಿ ವೇದವ್ಯಾಸ್, ಎನ್. ರಮೇಶ್, ಯೋಗೀಶ್, ರಂಗನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

