ಚಿಕ್ಕಮಗಳೂರು

ಹಂಪಯ್ಯ, ಇತರರು ಬಿಜೆಪಿಗೆ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.17
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಿ.ಬಿ. ನಿಂಗಯ್ಯ ಅವರಿಗೆ ಕೊಟ್ಟಿದ್ದರಿಂದ ಅಸಮಾಧಾನಗೊಂಡು ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ಎಸ್ಸಿ ಎಸ್ಟಿ ಘಟಕದ  ಜಿಲ್ಲಾಧ್ಯಕ್ಷ ಹಂಪಯ್ಯ ಸೇರಿದಂತೆ ಕೆಲವು ಮುಖಂಡರು ಬುಧವಾರದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ. ಪ್ರಾಣೇಶ್ ಮತ್ತು ಸಚಿವ ಸಿ.ಟಿ. ರವಿ ಪಕ್ಷಕ್ಕೆ ಅವರನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ಸಿ.ಟಿ. ರವಿ, ಬಿಜೆಪಿ ಎಂಬ ಹಾಲಿನ ಜೊತೆ ಇದೀಗ ಸಕ್ಕರೆ ಸೇರಿ ಇನ್ನಷ್ಟು  ರುಚಿಯಾಗಲು ಕಾರಣವಾಗಿದೆ. ಇದರೊಂದಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸುವ ಮೂಲಕ ಇನ್ನೂ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸೋಣ ಎಂದರು.
ಬಿಜೆಪಿಯಲ್ಲಿ ಹೊಸಬರು, ಹಳಬರು ಎನ್ನುವ ತಾರತಮ್ಯಗಳಿಲ್ಲ. ಬದ್ಧತೆಯಿಂದ ಕೆಲಸ ಮಾಡುವವರನ್ನು ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಅದಕ್ಕೆ ನಾವೇ ಉದಾಹರಣೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಸಚಿವನನ್ನಾಗಿಸಿದ್ದಲ್ಲದೆ ರಾಷ್ಟ್ರೀಯ ಕಾರ್ಯಕಾರಿಣಿಗೂ ಕಳಿಸಿಕೊಟ್ಟಿದೆ ಎಂದರು.
ಅಭಿವೃದ್ಧಿ ನೋಡಿ ಬಿಜೆಪಿಗೆ: ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ  ಹಂಪಯ್ಯ ಮಾತನಾಡಿ, 28 ವರ್ಷದ ರಾಜಕೀಯ ಜೀವನದಲ್ಲಿ ಹಲವು ಸ್ಥಾನಮಾನಗಳನ್ನು ನಿಭಾಯಿಸಿದ್ದೇನೆ. ನಾನು ಗುರುತಿಸಿಕೊಂಡ ಪಕ್ಷದಲ್ಲೂ ಮಂತ್ರಿಗಳು,  ಶಾಸಕರು ಆಡಳಿತ ನಡೆಸಿದರು. ಆದರೆ, ಸಿ.ಟಿ. ರವಿಯವರಂತೆ ಅಭಿವೃದ್ಧಿಗೆ ಎಂದಿಗೂ ಆದ್ಯತೆ ನೀಡಲಿಲ್ಲ. ಹಿಂದೆ ಯಾವ ಸರ್ಕಾರದಲ್ಲೂ ಆಗದಿರುವಷ್ಟು ಅಭಿವೃದ್ಧಿ ಸಿ.ಟಿ. ರವಿ ಅವಧಿಯಲ್ಲಿ ಆಗಿದೆ. ಈ ಹಿನ್ನೆಲೆಯಲ್ಲಿ  ಬಿಜೆಪಿ ಸೇರುತ್ತಿದ್ದೇನೆ. ಯಾವುದೇ ಆಸೆ ಆಕಾಂಕ್ಷೆಯಿಂದಲ್ಲ ಎಂದರು.
ನರಗನಹಳ್ಳಿ ರಮೇಶ್ ಮಾತನಾಡಿ, ಹಿಂದೆ ಆಲ್ದೂರಿನ ಜನಪರ ಹೋರಾಟಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ  ಜೊತೆಗೆ ಜೈಲು ವಾಸವನ್ನೂ ಅನುಭವಿಸಿದ್ದೇನೆ. ಹಲವು ರೈತಪರ ಚಳುವಳಿಯಲ್ಲಿ ಇಬ್ಬರೂ ಭಾಗವಹಿಸಿದ್ದೇವೆ.  ಆದರೆ ನಾವು ಜೆಡಿಎಸ್‌ನಲ್ಲಿ ಗುರುತಿಸಿಕೊಂಡೆವು. ಈಗ ಸಿ.ಟಿ. ರವಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ. ಅವರ ಹ್ಯಾಟ್ರಿಕ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾ ಪದಾಧಿಕಾರಿಗಳಾದ ರವಿ, ಮಲ್ಲಿಕಾ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ  ತಾರಾನಾಥ್, ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಜಯರಾಂ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಕೆ. ಪ್ರಾಣೇಶ್, ನಗರಾಧ್ಯಕ್ಷ ರಂಗನಾಥ್, ಟಿ. ರಾಜಶೇಖರ್, ವರಸಿದ್ದಿ ವೇಣುಗೋಪಾಲ್, ಕೆ.ಪಿ. ವೆಂಕಟೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.