ಚಿಕ್ಕಮಗಳೂರು

ಆಸ್ಪತ್ರೆ ಸೇರಿದ ಅನ್ನದಾತ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.20 ನ್ಯಾಯಕ್ಕಾಗಿ ಆಗ್ರಹಿಸಿ, ಜೈಲು ಸೇರಿದ್ದ ಅನ್ನದಾತನೊಬ್ಬ ಪೊಲೀಸರ ಅಸಡ್ಡೆಯಿಂದಾಗಿ ಆಸ್ಪತ್ರೆ ಸೇರುವಂತಾಗಿದೆ. ಚುನಾವಣೆ ಸಂದರ್ಭವಾಗಿರುವುದರಿಂದ ಜಿಲ್ಲಾಡಳಿತವೂ ಈತನತ್ತ ಕಣ್ಣು ಹಾಯಿಸುತ್ತಿಲ್ಲ. ಇದರಿಂದ ಈ ಬಗರ್ ಹುಕುಂ ಸಾಗುವಳಿದಾರನ ಬದುಕು ಬೆಂಡಾಗಿ ಹೋಗುತ್ತಿದೆ.
ಆತನೇ ರೆಹಮಾನ್. ಭದ್ರಾವತಿ ತಾಲೂಕಿನ ಬದನೆಹಾಳ್ ಗ್ರಾಮದಲ್ಲಿ ಕಳೆದ 50 ವರ್ಷದಿಂದ ಇಲ್ಲಿನ ಸ.ನಂ.35 ಮತ್ತು 7ರಲ್ಲಿ ಸಾಗುವಳಿ ಮಾಡುತ್ತಿದ್ದ ಈ ರೈತ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸಿಡಿದೆದ್ದ ಜೈಲ್‌ಭರೋ ಚಳುವಳಿ ಮಾಡಿ ಜೈಲಿನಲ್ಲಿದ್ದರು. ಆದರೆ, ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಎದೆ ನೋವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ...? ಏಪ್ರಿಲ್ 7ರಂದು ಅರಣ್ಯ ಇಲಾಖೆ ಅಧಿಕಾರಿಗಳು ಬದನೆಹಾಳ್ ಗ್ರಾಮದಲ್ಲಿನ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದರು. ಇದನ್ನು ವಿರೋಧಿಸಿದ ರೈತರನ್ನು ಬಂಧಿಸಲು ಪೊಲೀಸರು ಮುಂದಾದಾಗ ನಾ ಮುಂದು, ತಾ ಮುಂದು ಎಂದು 50ಕ್ಕೂ ಹೆಚ್ಚು ರೈತರು, ಘಟನೆಗೆ ನಾವೇ ಕಾರಣ, ನಮ್ಮನ್ನೂ ಬಂಧಿಸಿ ಎಂದು ಮುಂದೆ ಬಂದರು. ಕೊನೆಗೆ ಮಹಿಳೆಯರು ಸೇರಿದಂತೆ 61ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಜೈಲಿನಲ್ಲಿದ ರೆಹಮಾನ್ ಎದೆ ನೋವು ಎಂದು ಮೂರು ದಿನಗಳ ಹಿಂದೆ ಜೈಲಿನ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಆದರೆ, ಜೈಲಿನ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು. ಇದನ್ನು ವಿರೋಧಿಸಿದ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಮಾಡಿ, ರೆಹಮಾನ್‌ನ್ನು ಆಸ್ಪತ್ರೆಗೆ ದಾಖಲಿಸುವಂತೆ ಒತ್ತಾಯಿಸಿದರು ಎನ್ನಲಾಗಿದೆ.
 ಈ ಸಂಬಂಧ ರೆಹಮಾನ್‌ಗೆ ಶುಕ್ರವಾರ ಎದೆ ನೋವು ಹೆಚ್ಚಾದರಿಂದ ಜೈಲಿನ ಸಿಬ್ಬಂದಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ರೆಹಮಾನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ: ಭದ್ರಾವತಿ ನಗರದಿಂದ 18 ಕಿಲೋಮೀಟರ್ ದೂರದಲ್ಲಿರುವ ಬದನೆಹಾಳ್ (ಬಳ್ಳಿಗೆರೆ) ಸರ್ವೆ ನಂಬರ್ 35ರಲ್ಲಿ ಸುಮಾರು 832 ಎಕರೆ ಅರಣ್ಯ ಭೂಮಿ ಇದ್ದು, ಅದರಲ್ಲಿ 220 ಎಕರೆಯನ್ನು 2004ರಲ್ಲಿ ಹುಲ್ಲುಬನಿ ಎಂದು ಘೋಷಿಸಲಾಗಿತ್ತು. ಅಲ್ಲದೇ ಸಾಗುವಳಿ ಚೀಟಿ ನೀಡಲು ಸ್ಥಳೀಯ ಆಡಳಿತಕ್ಕೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಸಾಗುವಳಿ ಚೀಟಿ ಮಾತ್ರ ರೈತರ ಕೈ ಸೇರಿರಲಿಲ್ಲ.
ಈ ನಡುವೆ ಅಲ್ಲೇ ಇರುವ ಸರ್ವೆ ನಂಬರ್ 7ರಲ್ಲಿ ಸಾಗುವಳಿ ಮಾಡುತ್ತಿದ್ದ ಎಲ್ಲಾ ರೈತರಿಗೂ ಸಾಗುವಳಿ ಚೀಟಿ ನೀಡಲಾಗಿದೆ. ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆಯ ಮುನ್ಸೂಚನೆ ಅರಿತ ಸ್ಥಳೀಯ ರೈತರು ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಅಧಿಕಾರಗಳಿಗೆ ಮನವಿ ಮಾಡಿದ್ದರು.
 ಅಲ್ಲದೇ, ಉಪವಿಭಾಗಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಚುನಾವಣೆ ನಡೆಯುತ್ತಿರುವುದರಿಂದ ಒತ್ತುವರಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಒತ್ತುವರಿ ತೆರವು ಕಾರ್ಯ ಮುಂದುವರಿದಿತ್ತು.
 ರೋಸಿಹೋದ ರೈತರು ಸಿಡಿದೆದ್ದರು. ಕೃಷಿ ಭೂಮಿಯನ್ನು ವಶ ಮಾಡಿಕೊಳ್ಳುವುದಕ್ಕಾಗಿ ತಂದಿದ್ದ ಬುಲ್‌ಡೋಜರ್ ಹಾಗೂ ಬೈಕ್‌ಗೆ ರೈಬೆಂಕಿ ಇಟ್ಟರು. ಜೊತೆಗೆ ಲಾರಿ ಹಾಗೂ ಜೆಸಿಬಿ, ಮತ್ತೊಂದು ಬೈಕನ್ನೂ  ಜಖಂಗೊಳಿಸಿದ್ದಾರೆ. ಕಲ್ಲಿನಿಂದ ವಾಹನಗಳ ಗಾಜನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇವರೇನಂತಾರೇ? ರೆಹಮಾನ್‌ಗೆ ಮೊದಲಿನಿಂದಲೂ ಗ್ಯಾಸ್ಟ್ರಿಕ್ ಹಾಗೂ ಎದೆ ನೋವು ಕಾಣಿಸಿಕೊಳ್ಳುತ್ತಿತ್ತೆಂದು ಹೇಳಲಾಗಿದೆ. ಅದು ಜೈಲಿಗೆ ಬಂದ ಮೇಲೆ ಹೆಚ್ಚಾಗಿರಬಹುದು. ಈ ಹಿನ್ನೆಲೆಯಲ್ಲಿ ಶುಕ್ರವಾರ ಎದೆ ನೋವು ಹೆಚ್ಚಾಗಿದ್ದರಿಂದ ತಕ್ಷಣ ಜೈಲಿನ ಸಿಬ್ಬಂದಿ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ರೆಹಮಾನ್ ಸುಧಾರಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜೈಲಿನ ಸೂಪರಿಂಟೆಂಡೆಂಟ್ ನಾಗಯ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.