ಮಳೆ ನಿಂತರೂ ಮುಗಿಯದ ಅವಾಂತರ
ಕಪ್ರ ವಾರ್ತೆ ಚಿಕ್ಕಮಗಳೂರು ಆ.5
ಮಳೆ ಮತ್ತು ಗಾಳಿಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡು ಇದೀಗ ಮಳೆಯ ಬಿಡುವಿನಿಂದಾಗಿ ಚೇತರಿಸಿಕೊಳ್ಳುತ್ತಿದೆ.
ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ನಿರಂತರವಾಗಿ ಸುರಿದ ಮಳೆ ಈಗ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದೆ. ಆದರೆ, ಭೂ ಕುಸಿತ, ಅಲ್ಲಲ್ಲಿ ಕಚ್ಚಾ ಮನೆಗಳ ಗೋಡೆಗಳು ಶಿಥೀಲಗೊಂಡು ಬೀಳುತ್ತಿರುವುದು ಮಾತ್ರ ನಿಂತಿಲ್ಲ.
ಕಚ್ಚಾ ಮನೆಗಳಲ್ಲಿ ವಾಸವಾಗಿರುವ ಜನರು ಯಾವ ಕ್ಷಣದಲ್ಲಿ ಏನಾದರೂ ಆಗಬಹುದೆಂಬ ಆತಂಕದಲ್ಲಿದ್ದಾರೆ. ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬ ಗಾಧೆ ಮಾತಿನ ಪರಿಸ್ಥಿತಿ ಮಲೆನಾಡಿನ ಜನರದ್ದಾಗಿದೆ.
ಅಡಕೆ, ಕಾಫಿ, ಕಾಳು ಮೆಣಸು, ಶುಂಠಿ ಸೇರಿದಂತೆ ಇತರೆ ಎಲ್ಲಾ ಬೆಳೆಗಳು ಮಳೆಯಿಂದಾಗಿ ರೋಗ ಬಾಧೆ ಎದುರಿಸುತ್ತಿವೆ. ಕೂಲಿ ಕಾರ್ಮಿಕರಿಗೆ ತೋಟಗಳಲ್ಲಿ ಕೆಲಸ ಇಲ್ಲದಂತಾಗಿದೆ. ಇನ್ನು ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ತರಕಾರಿ ಬೆಳೆಗಳು ಹೆಚ್ಚು ತೇವಾಂಶದಿಂದ ನೆಲದಲ್ಲೇ ಕರಗಿ ಹೋಗಿವೆ. ರೈತರು, ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ.
ಕೊಟ್ಟಿಗೆ ಮೇಲೆ ಮಣ್ಣಿನ ಗುಡ್ಡ: ಬಾಳೆಹೊನ್ನೂರು ಸಮೀಪದ ಬಸರೀಕಟ್ಟೆ ಜನಾರ್ಧನ ಸ್ವಾಮಿ ದೇವಸ್ಥಾನದ ಕೆಳ ಭಾಗದ ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಬಳಿಯ ನಾಗಮ್ಮ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆ ಮೇಲೆ ಮಣ್ಣಿನ ಗುಡ್ಡ ಕುಸಿದು ಕೊಟ್ಟಿಗೆ ಸಂಪೂರ್ಣ ನೆಲ ಸಮವಾಗಿದೆ. ಕೊಟ್ಟಿಗೆಯಲ್ಲಿದ್ದ ದನ ಕರುಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿವೆ. ಬಸರೀಕಟ್ಟೆ ಸದ್ಗುರು ಪ್ರೌಢಶಾಲೆಯ ಕೆಳ ಭಾಗದಲ್ಲೂ ಭಾರೀ ಕುಸಿತ ಸಂಭವಿಸಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯೂ ಈ ಜಾಗದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು.
ಕೊಟ್ಟಿಗೆಗೆ ಹಾನಿ: ಬೆತ್ತದಕೊಳಲು ಸಮೀಪ ಮಲ್ಲಂಪಾಲ್ನ ಶಂಕರನಾರಾಯಣ ಅವರ ತೋಟದ ಅಡಕೆ, ಕಾಫಿ, ಲವಂಗದ ಗಿಡಗಳು ಮಳೆಗೆ ನೆಲಕಚ್ಚಿದ್ದು, ಒಂದು ಲಕ್ಷ ರು.ಗಳಿಗೆ ಅಧಿಕ ನಷ್ಟ ಉಂಟಾಗಿದೆ. ಕೊಗ್ರೆ ಸಮೀಪದ ಕಾರೇಮನೆ ಸುಧಾಕರ್ ಜೈನ ಎಂಬವರ ಮನೆ ಸಮೀಪದ ಗುಡ್ಡ ಕುಸಿದು ಮನೆ ಮತ್ತು ಕೊಟ್ಟಿಗೆಗೆ ಹಾನಿ ಸಂಭವಿಸಿದೆ.
ಜಯಪುರ ಮೂಲಕ ಬಸರೀಕಟ್ಟೆ ತಲುಪುವ ಮುಖ್ಯ ರಸ್ತೆಯ ಕೊಗ್ರೆ ತಿರುವಿನಲ್ಲಿ ಬಿರುಕು ಕಂಡುಬಂದಿದ್ದು, ಭೂ ಕುಸಿತ ಸಂಭವಿಸುವ ಅಪಾಯ ಎದುರಾಗಿದೆ. ಈ ಜಾಗದಲ್ಲಿ ಕುಸಿತ ಸಂಭವಿಸಿದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಲಿದೆ.
ಮಲ್ಲಂದೂರು ಸಮೀಪದ ಹೊಲದಗದ್ದೆಯ ಸರ್ಕಾರಿ ಶಾಲೆಯ ಕಟ್ಟಡ ಭಾನುವಾರ ರಾತ್ರಿ ಕುಸಿದು ಬಿದ್ದಿವೆ. ಶಾಲೆ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದರೆ ಭಾರೀ ಅನಾಹುತವೇ ನಡೆದು ಹೋಗುತ್ತಿತ್ತು.
ಬಯಲುಸೀಮೆ: ಕಳೆದ ಒಂದು ತಿಂಗಳಿಗೂ ಅಧಿಕ ಕಾಲ ಮಲೆನಾಡಿನಲ್ಲಿ ಸುರಿದ ಮಳೆ ಬಯಲುಸೀಮೆಯ ಕಡೂರು ತಾಲೂಕಿನ ಜನತೆಗೆ ಮಳೆ ಹರ್ಷ ತಂದಿದೆ.
ಮಳೆಯ ವಿಫಲ್ಯತೆಯಿಂದ ಸತತವಾಗಿ ಐದು ವರ್ಷಗಳಿಂದ ಬರದಿಂದ ತತ್ತರಿಸಿ ಹೋಗಿದ್ದ ಕಡೂರು ತಾಲೂಕಿನ ಹಲವು ಗ್ರಾಮಗಳು ನೀರು ಕಂಡಿದೆ. ಈ ತಾಲೂಕಿನ ಹಲವು ಕೆರೆಗಳಿಗೆ ನೀರುಣಿಸುವ ಅಯ್ಯನಕೆರೆ ಮತ್ತು ಮದಗದ ಕೆರೆಗಳು ಏಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತುಂಬಿ ಕೋಡಿ ಬಿದ್ದಿವೆ. ಈ ಮೂಲಕ ನೀರು ಬಯಲುಸೀಮೆಯಲ್ಲಿ ಹರಿಯುತ್ತಿದೆ.
ಅಯ್ಯನಕೆರೆ ತುಂಬಿದ್ದರಿಂದ ಶಾಸಕ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಸೋಮವಾರ ಬಾಗಿನ ಅರ್ಪಿಸಿದರು. ಅಯ್ಯನಕೆರೆಯ ನೀರಿನ ಸಾಮರ್ಥ್ಯ 0.5 ಟಿಎಂಸಿ, ಈ ನೀರು, ನಾಗೇನಹಳ್ಳಿ, ಬಿಸಲೇಹಳ್ಳಿ, ಬಾಣೂರು, ಗುಬ್ಬಿಹಳ್ಳಿ ಮೂಲಕ ಕಡೂರು ಕಸಬಾ ಹೋಬಳಿಯ ಗ್ರಾಮಗಳಿಗೆ ತಲುಪಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಫಸಲಿಗೆ ಅನುಕೂಲವಾಗಲಿದೆ.
ಮದಗದ ಕೆರೆಯ ನೀರು 10 ದೊಡ್ಡ ಕೆರೆಗಳು, 24 ಸಣ್ಣ ಕೆರೆಗಳಿಗೆ ಸಂಪರ್ಕ ಕಲ್ಪಿಸಲಿವೆ. ಇದರ ಜತೆಗೆ ಕಡೂರು, ಬೀರೂರು, ಗಾಳಿಹಳ್ಳಿ, ಚಿಕ್ಕಾಂಗಳ, ಜೋಡಿ ತಿಮ್ಮಪುರ ಪ್ರದೇಶದಲ್ಲಿರುವ 17 ಸಾವಿರ ಹೆಕ್ಟೇರ್ ಭೂಮಿಗೆ ನೀರಾಗಲಿದೆ. ಬರದಿಂದ ತತ್ತರಿಸಿದ್ದ ಕಡೂರು ತಾಲೂಕಿನ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಬವಣೆ ತಪ್ಪಿದಂತಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

