ಕಸ: ಬಗೆಹರಿದ ಬಿಕ್ಕಟ್ಟು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.5
ಅಂತೂ ಇಂತೂ ನಗರದ ಕಸ ವಿಲೇವಾರಿ ಬಿಕ್ಕಟ್ಟು ಸೋಮವಾರ ಬಗೆಹರಿಯಿತು.
ಇಂದಾವರ ಗ್ರಾಮಸ್ಥರು ಒಲ್ಲದ ಮನಸ್ಸಿನಿಂದ ಕಸ ವಿಲೇವಾರಿಗೆ ಅವಕಾಶ ನೀಡುವುದಾಗಿ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ಹಾಕಲಾಗಿದ್ದು, ಅವುಗಳನ್ನು ಮೂರು ತಿಂಗಳೊಳಗೆ ತಪ್ಪದೆ ಪಾಲನೆ ಮಾಡಲಾಗುವುದು ಎಂದು ಜಿಲ್ಲಾಡಳಿತ ನೀಡಿದ ಭರವಸೆಯ ಮೇರೆಗೆ ಗ್ರಾಮಸ್ಥರು ಕಸ ವಿಲೇವಾರಿಗೆ ಅಡ್ಡಿಪಡಿಸುವ ಪ್ರತಿಭಟನೆಯನ್ನು ಕೈಬಿಟ್ಟರು.
ಅವೈಜ್ಞಾನಿಕ: ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಇಂದಾವರ ಗ್ರಾಮದ ಸಮೀಪದಲ್ಲಿ ಚಿಕ್ಕಮಗಳೂರಿನ ಕಸವನ್ನು ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಆ ಕೆಲಸ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ಗ್ರಾಮದಲ್ಲಿನ ಕುಡಿಯುವ ನೀರು ಕಲುಷಿತವಾಗುತ್ತಿದೆ. ಜನ ಮತ್ತು ಜಾನುವಾರುಗಳಿಗೆ ಕೆಲವು ಸಾಂಕ್ರಾಮಿಕ ರೋಗಗಳು ಬರುತ್ತಿವೆ ಎಂದು ಗ್ರಾಮಸ್ಥರು ಕಳೆದ 12 ದಿನಗಳಿಂದ ಕಸ ವಿಲೇವಾರಿಗೆ ಅಡ್ಡಿಪಡಿಸಿದ್ದರು.
ಇದರಿಂದಾಗಿ ನಗರದ ಕಸ ವಿಲೇವಾರಿಯಾಗದೆ ಪ್ರಮುಖ ರಸ್ತೆಗಳಲ್ಲಿ ಕ್ಯಾಂಟರ್ಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿತ್ತು. ಇದರಿಂದ ಸಾರ್ವಜನಿಕರಿಗೆ ಕಿರಿ ಕಿರಿಯಾಗಿತ್ತು. ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ಕಸ ವಿಲೇವಾರಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳು, ಪೌರಾಯುಕ್ತರು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು.
ದಿನ ದಿನಕ್ಕೂ ಕಸ ದೊಡ್ಡ ಸಮಸ್ಯೆಯಾಗಿ ಕಾಡಲು ಆರಂಭಿಸಿತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿತ್ತು.
ಪ್ಲಾಸ್ಟಿಕ್ ಬಳಕೆ ನಿಷೇಧ: ಈ ಸಂದರ್ಭದಲ್ಲಿ ಗ್ರಾಮಸ್ಥರು ಕಸ ವಿಲೇವಾರಿ ಸ್ಥಳದಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಅವುಗಳಲ್ಲಿ ಪ್ರಮುಖವಾಗಿ ಕಸ ವಿಲೇವಾರಿ ಮಾಡುವ ಪ್ರದೇಶದಲ್ಲಿ ಕಾಂಕ್ರೀಟ್ನ ಖಣ ನಿರ್ಮಾಣ ಮಾಡಬೇಕು. ಈ ಕೆಲಸ ಮೂರು ತಿಂಗಳೊಳಗೆ ಮುಗಿಸಬೇಕು. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದರೂ ಸಹ ಅದರ ಬಳಕೆ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಮುಂದಿನ 15 ದಿನಗಳೊಳಗೆ ಇಂದಾವರಕ್ಕೆ ಬರುವ ಪ್ಲಾಸ್ಟಿಕ್ ಕಸವನ್ನು ತರಬಾರದು. ಕಸದಿಂದ ಗೊಬ್ಬರ ತಯಾರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಇಂದಾವರದಲ್ಲೇ ಕಸ ವಿಲೇವಾರಿ: ಈ ಎಲ್ಲಾ ಬೇಡಿಕೆಗಳಿಗೆ ಅಧಿಕಾರಿಗಳು ಒಪ್ಪಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಮಂಗಳವಾರದಿಂದ ಇಂದಾವರದಲ್ಲೇ ಕಸ ವಿಲೇವಾರಿಯಾಗಲಿದೆ.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಆರ್.ಎಚ್. ನಾಯಕ್, ನಗರಸಭೆಯ ಪ್ರಭಾರಿ ಪೌರಾಯುಕ್ತ ಪುರುಷೋತ್ತಮ್ ಹಾಗೂ ಇಂದಾವರ ಗ್ರಾಮದ ಮುಖಂಡರಾದ ಐ.ಡಿ. ಚಂದ್ರಶೇಖರ್, ಐ.ಕೆ. ನೀಲೇಶ್, ರಮೇಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

