ಇಂದಿನಿಂದ ಶ್ರಾವಣ ಮಾಸ ಪೂಜೆ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಆ.6
ಮಲಯಾಚಲ ಪರ್ವತ ಶ್ರೇಣಿಯ ಭದ್ರಾನದಿ ತಟದಲ್ಲಿ ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತವಾದ ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ರಂಭಾಪುರಿ ಬುಧವಾರದಿಂದ ನಡೆಯುವ ಶ್ರಾವಣ ಸಂಭ್ರಮಕ್ಕೆ ಸಜ್ಜಾಗಿದೆ.
ಅತ್ಯುನ್ನತ ಆದರ್ಶ ಗುರು ಪರಂಪರೆ ಹೊಂದಿದ ರಂಭಾಪುರಿ ಇಲ್ಲಿಯವರೆಗೆ 121 ಜಗದ್ಗುರುಗಳನ್ನು ಕಂಡಿದೆ. ಹಿಂದಿನ ಜಗದ್ಗುರು ವೀರಗಂಗಾಧರ ಶಿವಾಚಾರ್ಯರು ಮಾನವ ಧರ್ಮದ ಹರಿಕಾರರಾಗಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಘೋಷಿಸಿ ಭಾವೈಕ್ಯತೆಯ ಜ್ಯೋತಿಯನ್ನು ಬೆಳಗಿಸಿದರು. ಪ್ರಸ್ತುತ 122ನೇ ಜಗದ್ಗುರುಗಳಾಗಿ ಭಕ್ತದಿಂದ ನಡೆದಾಡುವ ರೇಣುಕರೆಂದೇ ಕರೆಯಲ್ಪಡುವ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ನುಡಿಯನ್ನಾಡಿ ಸಾಹಿತ್ಯ ಪ್ರೇಮಿಗಳ ಹಾಗೂ ಸಮಸ್ತ ಭಕ್ತರ ಮನದಲ್ಲಿ ನೆಲೆಯೂರಿದ್ದಾರೆ.
ಪ್ರಸ್ತುತ ಶ್ರೀಗಳು ವರ್ಷವಿಡೀ ರಾಜ್ಯಾದ್ಯಂತ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಗಲಿರುಳೆನ್ನದೆ ಸಂಚರಿಸಿ ರೇಣುಕಾಚಾರ್ಯರ ಆದರ್ಶ ಮೌಲ್ಯ, ಧರ್ಮ ಸಂದೇಶಗಳನ್ನು ಭಕ್ತರಿಗೆ ತಲುಪಿಸುತ್ತಿದ್ದಾರೆ. ಅದಲ್ಲದೇ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಪೀಠದಲ್ಲೇ ವಾಸ್ತವ್ಯ ಹೂಡಿ ಲೋಕಕಲ್ಯಾಣಾರ್ಥ ಪ್ರತಿನಿತ್ಯ ಇಷ್ಟಲಿಂಗ ಪೂಜಾ ತಪೋನುಷ್ಠಾನ ಕೈಗೊಂಡು ಭಕ್ತ ಸಂಕುಲದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ.
ಕ್ರಿಯಾಶೀಲತೆ: ಅದಲ್ಲದೇ ಇವರ ಅವಧಿಯಲ್ಲಿ ಪೀಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ್ದು, ರಂಭಾಪುರಿ ಸೇರಿದಂತೆ ರಾಜ್ಯದ ವಿವಿಧೆಡೆ ಪೀಠದ ಹೆಸರಿನಲ್ಲಿ ವಿವಿಧ ವಿದ್ಯಾಸಂಸ್ಥೆ, ಸಮುದಾಯ ಭವನಗಳು ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಂಡಿರುವುದು ಅವರ ಕ್ರಿಯಾಶೀಲ ಹಾಗೂ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ.
ಪೀಠದ ವಿಶೇಷತೆ: ರಂಭಾಪುರಿಯಲ್ಲಿ ಪೀಠ ಸ್ಥಾಪಿಸಿದ ರೇಣುಕಾಚಾರ್ಯ ರೇಣುಕ ಮಂದಿರವಿದ್ದು, ಪ್ರಶಾಂತತೆಯ ವಾತಾವರಣದಿಂದ ಕೂಡಿದೆ. ಸುಂದರ ಶಿಲ್ಪ ಕಲಾ ಸೌಂದರ್ಯದಿಂದ ಕೂಡಿದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯ ಭಕ್ತರ ಕೇಂದ್ರ ಬಿಂದು. ಶಕ್ತಿಮಾತೆ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಭಕ್ತರ ಆಸೆ, ಆಕಾಂಕ್ಷೆಗಳು ಸಾಕಾರಗೊಳ್ಳುವ ಸ್ಥಳ.
ಭೂಗರ್ಭ ಸಂಜಾತರಾದ ರುದ್ರಮುನೀಶ್ವರ ಶಿವಾಚಾರ್ಯರು ವೀರಭದ್ರ ದೇವಾಲಯದ ಬಲ ಭಾಗದ ಕಂಬದ ಬುಡದಲ್ಲಿ ಭಸ್ಮದಲ್ಲಿ ನಂದಿಯನ್ನು ಬಿಡಿಸಿದ್ದು, ಅದು ಪ್ರತಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತಿದೆ. ಇದೀಗ ನಂದಿ ವಿಗ್ರಹದ ಒಂದು ಕಣ್ಣು ತೆರೆದಿದ್ದು, ಇನ್ನೊಂದು ಕಣ್ಣು ತೆರೆಯುವ ಹೊತ್ತಿಗೆ ಮತ್ತೆ ಪುನರ್ಜನ್ಮ ತಾಳುವುದಾಗಿ ಅವರು ತಿಳಿಸಿರುವ ಸ್ಥಳ ಇತಿಹಾಸದ ಪುಟದಲ್ಲಿದೆ.
ಈ ನಂದಿಯನ್ನು ಹರಕೆ ನಂದೀಶ್ವರ, ಉದ್ಭವ ನಂದಿ ಎಂದೂ ಭಕ್ತರು ಕರೆಯುತ್ತಾರೆ.
ನಂದಿ ಎದುರು ಭಕ್ತಿಯಿಂದ ಪ್ರಾರ್ಥಿಸಿದಲ್ಲಿ ಭಕ್ತರ ಎಲ್ಲಾ ಅಭೀಷ್ಠೆಗಳು ನೆರವೇರುತ್ತವೆ ಎನ್ನುವುದು ನಂಬಿಕೆ. ಇಲ್ಲಿನ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗಳ ಸಾಲು ಜನಮನದಲ್ಲಿ ಭಕ್ತಿ ಶ್ರದ್ಧೆಯನ್ನು ಉಂಟುಮಾಡುತ್ತದೆ.
ಬುಧವಾರದಿಂದ ಒಂದು ತಿಂಗಳ ಕಾಲ ನಡೆಯುವ ಶ್ರಾವಣ ಮಾಸದ ವಿಶೇಷ ಪೂಜೆಗಳಿಗೆ ರಾಜ್ಯ ಹಾಗೂ ರಾಷ್ಟ್ರದ ವಿವಿಧೆಡೆಯ ನೂರಾರು ಭಕ್ತರು ಪೀಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆಯನ್ನು ಪಡೆಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

