ಚಿಕ್ಕಮಗಳೂರು

17ರಂದು ಕುವೆಂಪು ಕಾವ್ಯಧಾರೆ

Published On :

ಶೃಂಗೇರಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 17ರ ಶನಿವಾರ ವೈಕುಂಠಪುರ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಮಲೆನಾಡಿನ ಸಾಹಿತ್ಯದಲ್ಲಿ ಕುವೆಂಪು ಕಾವ್ಯಧಾರೆ ಕುರಿತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತಿ ಕಿರಣ್ ಕರೆ ಉಮೇಶ್ ಚಂದ್ರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಆರ್. ಸತೀಶ್, ನಾಗೇಶ್ ರಾವ್, ಕಸಾಪದ ಗಿಣಿಕಲ್ ಸುರೇಂದ್ರ, ಸುವರ್ಣ ವಿಜಯ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಉಚಿತ ಆರೋಗ್ಯ ತಪಾಸಣೆ
ಶೃಂಗೇರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಲಯನ್ಸ್ ಕ್ಲಬ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾ ಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ  ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತ ಗುಂಪು ವರ್ಗೀಕರಣ ಕಾರ್ಯಕ್ರಮ ನಡೆಯಿತು. ಲಯನ್ಸ್ ಸಂಸ್ಥೆಯ ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಆರೋಗ್ಯ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ವಿಶೇಷ ಮಾಹಿತಿ ನೀಡಿದರು. ರಾಜಶೇಖರ್, ಆಶಲತಾ, ಡಾ. ಹರಿಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ಸಕ್ಕರೆ ಖಾಯಿಲೆ ತಪಾಸಣೆ ನಡೆಸಲಾಯಿತು.
ಸಂಸ್ಕೃತಿ ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರ: ಆಶಾಲತಾ
ಶೃಂಗೇರಿ: ಶತಮಾನಗಳ ಇತಿಹಾಸ ಹೊಂದಿರುವ ನಮ್ಮ ಸಂಸ್ಕೃತಿ, ಪರಂಪರೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಮೂಲೆಗುಂಪಾಗುತ್ತಿದ್ದು, ಇವನ್ನು ಉಳಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯೆ ಆಶಲತಾ ಅಭಿಪ್ರಾಯಪಟ್ಟರು.  ಪಟ್ಟಣದ ಜಿ.ಎಸ್.ಬಿ ಸಭಾಭವನದಲ್ಲಿ ಆಯೋಜಿಸಿದ್ದ ವೆಲ್‌ಕಂ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಸ್ತು ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು. ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದಾಗಿ ಸಾಮಾಜಿಕ ಬದುಕಿನೊಂದಿಗೆ ನಮ್ಮತನ ಉಳಿಸಿಕೊಂಡು ಹೋಗಲು ಕಲಿಸಿಕೊಡುತ್ತದೆ ಎಂದರು. ವಾಣಿಜ್ಯಶಾಸ್ತ್ರ ವಿಭಾಗದ ಡಾ. ಹರಿಕುಮಾರ್, ಮಮತಾ, ಸೋಮಶೇಖರ್ ಇದ್ದರು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
19 ರಂದು ವಾಹನ ಮುಷ್ಕರ
ತರೀಕೆರೆ: ತಾಲೂಕಿನಾದ್ಯಂತ ಲೋಕೋಪಯೋಗಿ ಇಲಾಖೆ ರಸ್ತೆಗಳು ವಾಹನ ಸಂಚಾರಕ್ಕೆ ಸಂಪೂರ್ಣ ತೊಂದರೆಯಾಗಿದ್ದು, ಈ ನಿಟ್ಟಿನಲ್ಲಿ ರೈತರು, ಸಾರ್ವಜನಿಕರು, ಚಿಕ್ಕಮಗಳೂರು ಜಿಲ್ಲಾ ಬಸ್ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ಆ.19 ರಂದು ಅಜ್ಜಂಪುರದಲ್ಲಿ ಬೆಳಗ್ಗೆ 10 ಗಂಟೆಗೆ ತಾಲೂಕಿನಾದ್ಯಂತ ಬಸ್ ಮತ್ತು ಇತರ ವಾಹನಗಳ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ, ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಬಸ್ ಮಾಲೀಕರು ಬಿ.ಆರ್.ನವೀನ್ ಅವರು ತಿಳಿಸಿದ್ದಾರೆ. ಸಾರ್ವಜನಿಕರು, ರೈತರು, ಬಸ್ ಮಾಲಿಕರು, ಇತರ ಎಲ್ಲ ರೀತಿಯ ವಾಹನಗಳ ಮಾಲೀಕರು, ವಿದ್ಯಾರ್ಥಿಗಳು ಮುಷ್ಕರದಲ್ಲಿ ಭಾಗವಹಿಸಬೇಕೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೂರು ನಿರ್ಮಾಣಕ್ಕೆಸ್ಥಳ ನೀಡಿ
ಮೂಡಿಗೆರೆ: ಒಂದು ಸೂರು ನಿರ್ಮಿಸಿಕೊಳ್ಳಲು ನಿವೇಶನ ನೀಡಿ ಎಂದು ತಾಲೂಕಿನ ಭೂರಹಿತ ಬಡ ಕುಟುಂಬಗಳು ಕಳೆದೆರಡು ವರ್ಷದಿಂದ ಜನಪ್ರತಿನಿಧಿ ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಎಂದು ರಾಜ್ಯ ಸಮಿತಿಯ ಸಾತಿ ಸುಂದರೇಶ್ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಬುಧವಾರದಿಂದ ಪ್ರಾರಂಭವಾಗಿರುವ ನಿರಂತರ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೂಡಿಗೆರೆ ತಾಲೂಕಿನ 29 ಗ್ರಾಪಂ ವ್ಯಾಪ್ತಿಯಲ್ಲಿ 3,000ಕ್ಕೂ ಅಧಿಕ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ನಿಲ್ಲಲೂ ಸೂರಿಲ್ಲದೆ ವಾಸಿಸುತ್ತಿದ್ದಾರೆ ಎಂದರು.
ಬರೀ ಭರವಸೆ: ಸೂರಿಗಾಗಿ ಸಮರ ಪ್ರಾರಂಭಿಸಿದರೆ ಎಲ್ಲಿ ತಮ್ಮ ಕುರ್ಚಿಗೆ ಪೆಟ್ಟು ಬೀಳುತ್ತದೋ ಎಂದು ರಾಜಕಾರಣಿಗಳು ಒಂದಡೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳು ಎಲ್ಲಿ ತಮ್ಮ ಗುಟ್ಟು ಬಯಲಾಗುತ್ತದೋ ಎಂದು ಹೆದರಿ. ಸವಿಮಾತುಗಳನ್ನಾಡುತ್ತಾ ಪ್ರತಿಭಟನೆ ಕೈಬಿಡಿ ನಿಮಗೆ ಖಾಲಿ ನಿವೇಶನ ನಾವು ನೀಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆಯೇ ವಿನಃ ಇಲ್ಲಿಯವರೆಗೂ ಭೂ ರಹಿತರನ್ನು ಗುರುತಿಸಲು ವಿಫಲವಾಗಿದೆ ಎಂದು ದೂರಿದರು.
ಮುಖಂಡ ದೇವವೃಂದ ರವಿ ಮಾತನಾಡಿ, ಭೂ ಅತಿಕ್ರಮಣ ಮಾಡಿಕೊಳ್ಳುವ ಮೂಲಕ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ನಿರಾಶ್ರಿತರಿಗೆ ಹಕ್ಕು ಪತ್ರ ವಿತರಿಸುವುದರೊಂದಿಗೆ, ಇನ್ನುಳಿದ ಭೂರಹಿತರಿಗೆ ನಿವೇಶನಕ್ಕಾಗಿ ಜಾಗ ಗುರುತು ಮಾಡಿರುವುದನ್ನು ನಿವೇಶನವನ್ನಾಗಿ ಪರಿವರ್ತಿಸಿ ನಿವೇಶನ ಒದಗಿಸುವಂತೆ ನಿರಂತರ ಧರಣಿ ನಡೆಸುತ್ತಿರುವುದಾಗಿ ತಿಳಿಸಿದರು. ಮುಖಂಡ ಪೆರಿಯಾಸ್ವಾಮಿ, ಮೋನಪ್ಪ, ಗೋಪಾಲ್ ಎನ್.ಶೆಟ್ಟಿ, ಬಾಳೂರು ರಮೇಶ್ ಸೇರಿದಂತೆ 29 ಗ್ರಾಪಂ ವ್ಯಾಪ್ತಿಯ ನಿರಾಶ್ರಿತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.