ಚಿಕ್ಕಮಗಳೂರು

ಸವಾರರಿಗೆ ಸವಾಲಾಗಿರುವ ರಾ.ಹೆ. 206

Published On :


ಕ.ಪ್ರ.ವಾರ್ತೆ ಟಿ ತರೀಕೆರೆ ಟಿ  ಆ.21
ಜಿಲ್ಲೆಯಲ್ಲೇ ಬಹುದೊಡ್ಡ ಉಪವಿಭಾಗ ಹೊಂದಿರುವ ತರೀಕೆರೆ ಪಟ್ಟಣದಲ್ಲಿ ರಾ. ಹೆ. 206ರನ್ನು ಚತುಷ್ಪದ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಜನಪ್ರತಿನಿಧಿಗಳು, ಹೆದ್ದಾರಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಮೂಗಿಗೆ ತುಪ್ಪ ತವರುತ್ತಲೇ ಬರುತ್ತಿದ್ದಾರೆ.
ಎಲ್ಲಾ ಊರುಗಳಂತೆ ತರೀಕೆರೆ ರಾ.ಹೆ. ಕೂಡಾ ಅಭಿವೃದ್ಧಿ ಆಗಬುಹುದೇನೋ ಎಂಬ ಆಶಯದಿಂದ ಬಿ.ಎಚ್. ರಸ್ತೆಯ ವರ್ತಕರು, ವಾಣಿಜ್ಯೋದ್ಯಮಿಗಳು, ಸಾರ್ವಜನಿಕರು ತಾಲೂಕು ಆಡಳಿತದೊಂದಿಗೆ ಸ್ವಯಂ ಪ್ರೇರಣೆಯಿಂದ ರಸ್ತೆ ಅಗಲೀಕರಣಕ್ಕೆ ಸಂಪೂರ್ಣ ಸಹಕಾರ ನೀಡಿದರು. ತಮ್ಮ ಸ್ವಂತ ಖರ್ಚಿನಿಂದಲೇ ಅಂಗಡಿ ಮುಂಗಟ್ಟುಗಳ ಪುನರ್ ನಿರ್ಮಾಣದಲ್ಲಿ ತೊಡಗಿದರು. ಆದರೆ ರಸ್ತೆ ಅಗಲೀಕರಣ ಆಗಲೇ ಇಲ್ಲ.
22 ಸಾವು, 40 ಗಾಯ: ರಸ್ತೆ ಅಭಿವೃದ್ಧಿಯಾಗುವ ಮಾತು ಹಾಗಿರಲಿ, ಹೆದ್ದಾರಿಯಲ್ಲಿರುವ ಹಳೇ ಚರಂಡಿ, ಹಳೇ ವಿದ್ಯುತ್ ಕಂಬಗಳು ಯಾವುದೂ ಸ್ಥಳಾಂತರಗೊಳ್ಳಲಿಲ್ಲ. ಪಾದಚಾರಿಗಳು ಸಂಚರಿಸುವುದಂತೂ ಬಹಳ ಕಷ್ಟವಾಗಿದೆ.
ಇಷ್ಟಲ್ಲದೆ ತರೀಕೆರೆ ಪಟ್ಟಣ ಮತ್ತು ಸುತ್ತಮುತ್ತ ಅಪಘಾತಗಳ ಮೇಲೆ ಅಪಘಾತಗಳಾಗುತ್ತಿವೆ. 2013 ರ ಜನವರಿಯಿಂದ ಈ ವರೆಗೆ 59 ವಿವಿಧ ರೀತಿಯ ವಾಹನ ಅಪಘಾತಗಳಿಂದ ಒಟ್ಟು 22 ಮಂದಿ ಮೃತಪಟ್ಟಿದ್ದು, 37 ಮಂದಿ ಗಂಭೀರ ಗಾಯದಿಂದ ನರಳಿದ್ದಾರೆ.
ಅವೈಜ್ಞಾನಿಕ ರಸ್ತೆ: ಅಪಘಾತಗಳಿಗೆ ನೇರ ಕಾರಣವೆಂದರೆ ಅವೈಜ್ಞಾನಿಕ ರಸ್ತೆ ಮಿತಿ ಮೀರಿದ ತಿರುವುಗಳು, ತಡೆಗೋಡೋಗಳಿಲ್ಲದ ಸೇತುವೆಗಳು, ಮಿತಿಮೀರಿದ ವೇಗವೇ ಆಗಿದೆ. ಇದು ತರೀಕೆರೆ ಮೂಲಕ ಹಾದು ಹೋಗಿರುವ ರಾ.ಹೆ. ಸರಣಿ ಅಪಘಾತಗಳ ಅಂಕಿ ಅಂಶಗಳನ್ನು ಸಂಗ್ರಹಿಸಿದರೆ ಸುಲಭವಾಗಿ ಎಲ್ಲರಿಗೂ ಸಿಗುವ ಸಾಮಾನ್ಯ ಲೆಕ್ಕಚಾರ.
ಹೆದ್ದಾರಿಯಲ್ಲಿರುವ, ತರೀಕೆರೆ ಅಜ್ಜಂಪುರ ಗೇಟ್, ಬೆಟ್ಟದಹಳ್ಳಿ ಸೇತುವೆ, ಕೋಡಿಕ್ಯಾಂಪ್ ತಿರುವು, ತರೀಕೆರೆ ಲಿಂಗದಹಳ್ಳಿ ರಸ್ತೆ, ಸಂತೆಮಾಳ ಪಟ್ಟಣದ ಶಾಸಕರ ಮಾದರಿ ಪ್ರಾ. ಶಾಲೆ ತಿರುವು, ಪುರಸಭೆ ಬಳಿ ಇರುವ ಹಳೇ ಪೋಸ್ಟ್ ಆಫೀಸ್ ತಿರುವು, ರೇಲ್ವೆ ನಿಲ್ದಾಣ ತಿರುವು, ಮಿನಿವಿಧಾನ ಸೌಧದ ಜನದಟ್ಟಣೆ ಸ್ಥಳ, ಕುವೆಂಪು ವಿಶ್ವವಿದ್ಯನಿಲಯದ ಲಕ್ಕವಳ್ಳಿ ತಿರುವು ಈ ಸ್ಥಳಗಳಲ್ಲಿ ಪದೇ ಪದೇ ಅಪಘಾತ ಸಂಭವಿಸಿ ಅಮೂಲ್ಯ ಜೀವಗಳ ಬಲಿಯಾಗಿದೆ.
ನಾಮಫಲಕಗಳಿಲ್ಲ: ಒಂದು ಕಡೆಯಾದರೂ ಅಪಾಯದ ಮೂನ್ಸೂಚನೆಯ ನಾಮಫಲಕಗಳಿಲ್ಲ. ಸೇತುವೆ ತಡೆಗೋಡೆ ಹಾಳಾದರೆ ವರ್ಷವಾದರೂ ದುರಸ್ತಿ ಮಾಡುವುದಿಲ್ಲ. ಸಾರ್ವಜನಿಕರು, ತರೀಕೆರೆ ಉಪವಿಭಾಗಧಿಕಾರಿಗಳು, ತಹಸೀಲ್ದಾರ್ ಪೊಲೀಸ್ ಅಧಿಕಾರಿಗಳು ಹೆದ್ದಾರಿ ಇಲಾಖೆಗೆ ಅಧಿಕಾರಿಗಳಿಗೆ ಅನೇಕ ಬಾರಿ ರಸ್ತೆ ಅವ್ಯವಸ್ಥೆ ಬಗ್ಗೆ ಸೇತುವೆ ತಡೆಗೋಡೆ ನಿರ್ಮಾಣದ ಬಗ್ಗೆ, ರಸ್ತೆಯ ಅಕ್ಕಪಕ್ಕದಲ್ಲಿರುವ ಸಿಕ್ಕಾಪಟ್ಟೆ ಬೆಳೆದಿರುವ ಜಂಗಲ್ಗಳನ್ನು ತೆಗೆಸುವಂತೆ ಮಾಡಿದ ಮನವಿಗಳು ಇಲಾಖೆ ಕಸದ ಬುಟ್ಟಿಗೆ ಸೇರಿದೆ.
ಟ್ರಾಫಿಕ್ ಠಾಣೆ ಅಗತ್ಯ: ತರೀಕೆರೆ ಪಟ್ಟಣ, ಎಲ್ಲಾ ಮಗ್ಗುಲುಗಳಲ್ಲೂ ಆಗಾಧ ಪ್ರಮಾಣದಲ್ಲಿ ಬೆಳೆದುನಿಂತಿದೆ, ಜನವಸತಿ ಬೆಳೆದಿದೆ, ವ್ಯಾಪಾರ ವಹಿವಾಟು, ವಿವಿಧ ಬಗೆಯ ವಾಹನ, ಸರ್ಕಾರಿ ಕಚೇರಿಗಳು, ನ್ಯಾಯಾಲಯ,  ಶಾಲಾಕಾಲೇಜು, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯ ಪ್ರವಾಸಿ, ಧಾರ್ಮಿಕ ತಾಣಗಳಿಂದ ಒಳಗೂಡಿ ಅಧಿಕ ಜನದಟ್ಟಣೆಯಿಂದ ಕೂಡಿರುವ ಜಿಲ್ಲೆಯ ಬಹುದೊಡ್ಡ ಉಪ ವಿಭಾಗವಾಗಿದೆ.
ಸಹಜವಾಗಿಯೇ ರಾ.ಹೆ. ವಾರದ ಎಲ್ಲಾ ದಿನಗಳೂ ಇಪ್ಪತ್ನಾಲ್ಕು ಗಂಟೆ ಅಧಿಕ ಸಂಖ್ಯೆಯಲ್ಲಿ ಜನರ ಮತ್ತು ವಾಹನ ಸಂಚಾರದಿಂದ ಕೂಡಿದ್ದು, ರಸ್ತೆ ಅಭಿವೃದ್ಧಿಯಾಗದೇ ಇರುವುದರಿಂದ ಪಾದಚಾರಿಗಳು ಮಕ್ಕಳು, ವಯಸ್ಸಾದವರು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಪ್ರಯಾಸಪಟ್ಟು ಹೋಗಬೇಕು.
ಮಕ್ಕಳಿಗೆ ಅನಿವಾರ್ಯ: ಹೆದ್ದಾರಿಯಲ್ಲಿಯೇ ಶಾಲೆಗಳು, ಐಟಿಐ ಕಾಲೇಜು ಇರುವುದರಿಂದ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಇಲ್ಲಿಯೇ ಸಂಚರಿಸಬೇಕಾಗಿರುವುದು ಅನಿವಾರ್ಯ. ಇದು ತರೀಕೆರೆಯೋ, ಬೆಂಗಳೂರೋ ಎನ್ನುವಷ್ಟು ರಸ್ತೆ ದಟ್ಟಣೆಯಿಂದ ಕೂಡಿರುತ್ತದೆ. ಅಷ್ಟು ಸಂಖ್ಯೆಯಲ್ಲಿ  ಒಂದರ ನಂತರ ಮತ್ತೊಂದು ವಾಹನ ಟೌನ್ ವ್ಯಾಪ್ತಿಯ ವೇಗಮಿತಿಯನ್ನು ಅಲಕ್ಷಿಸಿ ಓಡಾಡುತ್ತಿರುತ್ತವೆ.
ಸರ್ಕಾರ ಕೂಡಲೇ ತರೀಕೆರೆ ಉಪವಿಭಾಗಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡಿ, ಆಪಾಯದ ತಿರುವಿನಲ್ಲಿ ವಾಹನ ನಿಯಂತ್ರಿಸಲು ಸಿಗ್ನಲ್ಸ್, ಅಪಘಾತ ಸ್ಥಳದಲ್ಲಿ ಮೂನ್ಸೂಚನಾ ಫಲಕ, ಟ್ರಾಫಿಕ್ ಪೊಲೀಸರುಗಳನ್ನು ನೇಮಿಸುವುದರಿಂದ
ಪಟ್ಟಣ ವ್ಯಾಪ್ತಿ ಮತ್ತು ಹೊರವಲಯದಲ್ಲಿ ನಡೆಯುತ್ತಿರುವ ಅಪಘಾತಗಳನ್ನು ಸ್ವಲ್ಲ ಮಟ್ಟಿಗಾದರೂ ತಡೆಗಟ್ಟಿ, ಅಮೂಲ್ಯ ಜೀವಗಳನ್ನು ರಕ್ಷಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಅನಂತ ನಾಡಿಗ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.