ಎಂಇಎಸ್ ಶಾಸಕರ ಅಣಕು ಶವಯಾತ್ರೆ
ಶಿಗ್ಗಾಂವಿ: ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಹಾಗೂ ಅರವಿಂದ್ ಪಾಟೀಲ್ ಅವರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಬೆಂಗಳೂರಿನಿಂದ ಬೆಳಗಾವಿಯವರೆಗೆ ಈ ಇಬ್ಬರೂ ಶಾಸಕರ ಅಣಕು ಶವಯಾತ್ರೆ ಪ್ರತಿಭಟನೆ ಕೈಗೊಂಡಿದ್ದ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮುಂತಾದವರನ್ನು ಬಂಕಾಪುರ ಟೋಲ್ ಬಳಿ ಪೊಲೀಸರು ತಡೆದು, ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಬೆಂಗಳೂರಿಂದ ಬೆಳಗಾವಿಯತ್ತ ಸಾಗುತ್ತಿದ್ದ ಆ್ಯಂಬುಲೆನ್ಸ್ನಲ್ಲಿ ಸಿದ್ಧ ಪಡಿಸಿದ್ದ ಅಣಕು ಶವಯಾತ್ರೆಯನ್ನು ಹಾಗೂ ಕನ್ನಡ ಪರ ಹೋರಾಟಗಾರರ ವಾಹನಗಳನ್ನು ತಡೆದ ಹಾವೇರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಡಿ. ಜಗಮಯ್ಯನವರ ನೇತೃತ್ವದ ತಂಡ ಬೆಳಗಾವಿಗೆ ತೆರಳದಂತೆ ತಡೆದು, ಹೋರಾಟಗಾರರನ್ನು ಬಂಧಿಸಿದರು. ಪ್ರಕರಣ ದಾಖಲಿಸಿಕೊಂಡು ಅವರನ್ನು ಬಿಡುಗಡೆ ಮಾಡಲಾಯಿತು.
ಹೆದ್ದಾರಿಯಲ್ಲೇ ಅಗ್ನಿಸ್ಪರ್ಶ: ಬೆಳಗಾವಿಗೆ ಒಯ್ಯುತ್ತಿದ್ದ ಅಣಕು ಶವಯಾತ್ರೆಗೆ ಬಂಕಾಪುರ ಟೋಲ್ ಪ್ಲಾಜಾದ ಬಳಿ ಹೋರಾಟದ ಅಂತಿಮ ರೂಪ ನೀಡುವುದಾಗಿ ನಿರ್ಧರಿಸಿದ್ದರು. ಅಣಕು ಶವಯಾತ್ರೆಗೆ ತಡೆಯೊಡ್ಡಿದ್ದರಿಂದ ಬೆಳಗಾವಿಯಲ್ಲಿ ಕೈಗೊಳ್ಳಬೇಕಿದ್ದ ಅಣಕು ಶವ ಸಂಸ್ಕಾರವನ್ನು ಸ್ಥಳದಲ್ಲಿಯೇ ಮಾಡಲು ನಿರ್ಧರಿಸಿದರು. ಟೋಲ್ಗೇಟ್ ಬಳಿಯ ಹೊಲವೊಂದರಲ್ಲಿ ಶವಗಳನ್ನು ಇರಿಸಿ ತಮಟೆ ಬಾರಿಸುವ ಮೂಲಕ ಹೆದ್ದಾರಿಯತ್ತ ತಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಎಂಇಎಸ್ ಶಾಸಕರ ಕನ್ನಡ ವಿರೋಧಿ ಧೋರಣೆ ಖಂಡಿಸಿ ಸರ್ಕಾರ ಅವರ ರಕ್ಷಣೆಗೆ ನಿಂತಿದೆ ಎಂದು ಧಿಕ್ಕಾರ ಕೂಗಿ, ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದ ಹೋರಾಟಗಾರರ ತಂಡ ಅಣಕು ಶವಗಳಿಗೆ ಅಗ್ನಿಸ್ಪರ್ಶ ಮಾಡಿತು.
ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು, ರಾಜ್ಯ ಕನ್ನಡ ಸೇನೆ ಅಧ್ಯಕ್ಷ ಕೆ. ಕುಮಾರ, ದಲಿತ ಸಂಘರ್ಷ ಸಮಿತಿಯ ಎನ್. ಮೂರ್ತಿ, ಯಶ್ವಂತ ಮುನಿಯಪ್ಪನವರ, ಚಂದ್ರಗೌಡ, ರಾಮುಮೂರ್ತಿ, ಮರಿಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

