ಚಿಕ್ಕಮಗಳೂರು

ಪ್ರತಿ ಮನೆಗೂ ಶೌಚಾಲಯ ಕಡ್ಡಾಯ

Published On :

ಕ.ಪ್ರ.ವಾರ್ತೆ, ಚಳ್ಳಕೆರೆ,  ಡಿ.9
ತಾಲೂಕಿನಲ್ಲಿ ಒಟ್ಟು 49,000 ಮನೆಗಳಿಗೆ ಶೌಚಾಲಯಗಳಿಲ್ಲವೆಂದು ಅಧಿಕಾರಿಗಳು ವರದಿ ನೀಡಿದ್ದು, ಪ್ರಸ್ತುತ ಈ ವರ್ಷ 16 ಸಾವಿರ ಮನೆಗಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಲು ಸಿದ್ಧತೆ ನಡೆಯುತ್ತಿವೆ ಎಂದು ಶಾಸಕ  ಟಿ. ರಘುಮೂರ್ತಿ ತಿಳಿಸಿದರು.   
ಅವರು ಇಲ್ಲಿನ ರೋಟರಿ ಬಾಲಭವನದಲ್ಲಿ ಜಿಪಂ ಮತ್ತು ತಾಪಂ ಸಂಯುಕ್ತ ಆಶ್ರಯದಲ್ಲಿ ನಿರ್ಮಲ ಭಾರತ  ಅಭಿಯಾನ ಯೋಜನೆಯಡಿಯಲ್ಲಿ ಸಮುದಾಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಮನೆಗೆ ನಿರ್ಮಾಣ: ರಾಜ್ಯ ಸರ್ಕಾರ ಗ್ರಾಮಾಂತರ ಪ್ರದೇಶದ ಮಹಿಳೆಯರು ಶೌಚಾಲಯವಿಲ್ಲದೇ ಪರದಾಡುವ ಸ್ಥಿತಿ ಗಮನಿಸಿ ಈ ವ್ಯವಸ್ಥೆ ಮಾಡಿದ್ದು, ಅನುಷ್ಠಾನಗೊಳಿಸುವ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಗ್ರಾಮದ ಎಲ್ಲಾ ಮನೆಗಳಿಗೂ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಅವರು ತಿಳಿಸಿದರು.
2 ದಿನ ನಡೆಯುವ ಕಾರ್ಯಾಗಾರದಲ್ಲಿ ಗ್ರಾಪಂ ಅಧ್ಯಕ್ಷ, ಪಿಡಿಒ ಹಾಗೂ ನಿರ್ಮಲ್ ಭಾರತ್ ಯೋಜನೆಯ ಸಮನ್ವಯ ಅಧಿಕಾರಿಗಳು ಭಾಗವಹಿಸಿದ್ದರು.
ನಿರ್ಲಕ್ಷ್ಯ ಸಲ್ಲದು: ಇತ್ತೀಚಿನ ದಿನಗಳಲ್ಲಿ ಸರ್ಕಾರದ ಹಲವು ಯೋಜನೆ ಬಗ್ಗೆ ಸಂಬಂಧಿಸಿದ ಜಿಪಂ ಹಾಗೂ ತಾಪಂ ಸದಸ್ಯರ ಗಮನಕ್ಕೆ ತಂದು ಯೋಜನೆ ಅಭಿವೃದ್ಧಿ ಅಧಿಕಾರಿಗಳು ಜಾರಿಗೊಳಿಸಬೇಕಿದೆ. ಆದರೆ ಕೆಲ ಅಭಿವೃದ್ಧಿ  ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಪಿಡಿಒಗಳು ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.
ಒಂದು ಶೌಚಾಲಯಕ್ಕೆ ರು. 9.200 ವನ್ನು ಸರ್ಕಾರ ನೀಡಲಿದ್ದು, ಫಲಾನುಭವಿಗಳು ಹಣವನ್ನು ಈ ಯೋಜನೆಗಷ್ಟೇ ಉಪಯೋಗಿಸುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಕೆ.ಎಂ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷ ಜಿ.ಟಿ. ತಿಪ್ಪೇಶ್, ಮುಖ್ಯ ಯೋಜನಾಧಿಕಾರಿ ಲಕ್ಷ್ಮೀನಾರಾಯಣ, ವ್ಯವಸ್ಥಾಪಕ ನಾಗರಾಜ ಸಂಗಮ್ ಇದ್ದರು.

ಶೀಘ್ರದಲ್ಲೇ ಕಂಬಳಿ ಮಾರುಕಟ್ಟೆ
ಚಳ್ಳಕೆರೆ: ತಾಲೂಕಿನ ಬಹುತೇಕ ಕುರುಬ ಸಮಾಜದ ಬಂಧುಗಳಿಗೆ ಇಲ್ಲಿನ ಕಂಬಳಿ ಮಾರುಕಟ್ಟೆ ಆಧಾರವಾಗಿದ್ದು,
ಸಂತೆ ಮೈದಾನದ ಈ ಮಾರುಕಟ್ಟೆ ಇನ್ನೂ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಜವಳಿ ನಿರ್ದೇಶಕ ಜಿ.ಟಿ. ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದು, ಶೀಘ್ರದಲ್ಲಿ ಇಲ್ಲಿ ಒಂದು ಉತ್ತಮ ಮಾರುಕಟ್ಟೆ ವ್ಯವಹಾರ ಪ್ರಾರಂಭವಾಗಲಿದೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ಅವರು ಸೋಮವಾರ ಸಂಜೆ ಸಂತೆ ಮೈದಾನದಲ್ಲಿರುವ ಮಾರುಕಟ್ಟೆಯಲ್ಲಿರುವ ಕಂಬಳಿ ವ್ಯಾಪಾರ ಕೇಂದ್ರಕ್ಕೆ ಬೇಟಿ ನೀಡಿ,
ಪರಿಸ್ಥಿತಿ ಅವಲೋಕಿಸಿದರು. ಇದಕ್ಕೂ ಮುನ್ನ ಎ.ಜಿ ರಸ್ತೆಯಲಿರುವ ಕರ್ನಾಟಕ ಉಣ್ಣೆ ಕೈಮಗ್ಗ ನೇಕಾರ ಸಂಘಕ್ಕೆ ಭೇಟಿ ನೀಡಿ, ಅಲ್ಲಿರುವ ನೂತನ ಯಂತ್ರಗಳನ್ನು ಪರಿಶೀಲಿಸಿದರು.
ಸಂಘದ ಅಧ್ಯಕ್ಷ ರಾಜಶೇಖರ್, ನಿರ್ದೇಶಕ ವಿ. ಮಂಜುನಾಥ್, ಸಮಾಜದ ಮುಖಂಡ ಗುರುಚಂದ್ರಪ್ಪ, ಟಿ.ಸಿದ್ದೇಶ್, ಎಂ. ಅಜ್ಜಪ್ಪ, ಕೆ.ಬೀರಪ್ಪ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.