ಪಠ್ಯೇತರಕ್ಕೂ ಆದ್ಯತೆ ನೀಡಿ
ಕ.ಪ್ರ.ವಾರ್ತೆ, ಕಡೂರು, ಡಿ.11
ದಾನ ನೀಡದ ಕೈ ದೇವರಿಲ್ಲದ ಗುಡಿಯಂತೆ ಸನ್ಮಾನಿಸದೇ ಇರುವ ಪ್ರತಿಭೆಯೂ ಕೂಡ ವ್ಯರ್ಥವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಹೇಳಿದರು.
ಪಟ್ಟಣದ ಜ್ಞಾನ ಗಂಗೋತ್ರಿ ವಿದ್ಯಾಕುಟೀರದಲ್ಲಿ ಕಡೂರು ಸಿಆರ್‌ಸಿ ಪೂರ್ವವಿಭಾಗದ ಶಾಲಾ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾನಪದ ಸೋಗಡು: ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಕೃಷಿ ಚಟುವಟಿಕೆ ನಡೆಸುವಾಗ ಮಹಿಳೆಯರು ಜಾನಪದ ಹಾಡುಗಳನ್ನು ಗುನುಗುತ್ತಾ ತಮ್ಮ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕೇವಲ ಒಬ್ಬರ ಬಾಯಿಂದ ಬಾಯಿಗೆ ಹರಿದು ಬರುವ ಮೂಲಕ ಜಾನಪದ ಸೊಗಡು ಹಳ್ಳಿಹಳ್ಳಿಗಳಲ್ಲೂ ಪ್ರತಿಬಿಂಬಿತವಾಗಿ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ರೇಡಿಯೋ ಮತ್ತು ದೂರದರ್ಶನ ಮಾಧ್ಯಮಗಳು ಬಂದ ಮೇಲೆ ಗ್ರಾಮೀಣ ಸೊಗಡು ಪಟ್ಟಣ ಪ್ರದೇಶಕ್ಕೂ ಪರಿಚಯವಾಯಿತು ಎಂದರು.
ಈಗ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಜ್ಞಾನವಿಲ್ಲ. ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದ ಅವಶ್ಯಕತೆ ಹೆಚ್ಚಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯನ್ನೂ ಪ್ರೋತ್ಸಾಹಿಸುವ ಮೂಲಕ ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುತ್ತಿರುವುದು ಸಂತಸದ ಸಂಗತಿ ಎಂದರು.
ಪಠ್ಯೇತರಕ್ಕೂ ಅವಕಾಶ: ಪ್ರತಿಭಾ ಕಾರಂಜಿ ಉದ್ಘಾಟಿಸಿದ ಪುರಸಭಾ ಸದಸ್ಯ ಕೋಳಿ ಲೋಕೇಶ್ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಶಿಕ್ಷಣಕ್ಕೆ ಮಕ್ಕಳಿಗೆ ಒತ್ತು ಕೊಡುವುದು ಎಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಕ್ಕರೆ ಮಕ್ಕಳು ಸಾಂಸ್ಕೃತಿಕವಾಗಿಯೂ ಹೊರ ಹೊಮ್ಮುತ್ತಾರೆ. ಮಕ್ಕಳು ಸಂಘಜೀವಿಯಾಗಿ ಬೆಳೆಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಸುಜಾತ ಕೃಷ್ಣಮೂರ್ತಿ ಮಾತನಾಡಿ, ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದ ಕಾಲದಲ್ಲಿ ಮಕ್ಕಳು ಸುಸಂಸ್ಕೃತ ವಾತಾವರಣದಲ್ಲಿ ಬೆಳೆಯುತ್ತಿದ್ದರು. ಆದರೆ ಇದೀಗ ವಿಭಕ್ತ ಕುಟುಂಬಗಳಾಗಿರುವುದರಿಂದ ಪೋಷಕರು ಕೇವಲ ಪಾಠದ ಕಡೆ ಮಾತ್ರ ಗಮನಹರಿಸುವ ಮೂಲಕ ಮಕ್ಕಳ ಪ್ರತಿಭೆ ಮರೆಯಾಗುತ್ತಿರುವುದು ವಿಷಾದನೀಯ ಎಂದರು.
ಪ್ರತಿಭೆ ಗುರುತಿಸಲು ಅವಕಾಶ: ಅಧ್ಯಕ್ಷತೆ ವಹಿಸಿದ್ದ ಜ್ಞಾನ ಗಂಗೋತ್ರಿ ಪಿಯುಸಿ ಕಾಲೇಜು ಪ್ರಾಚಾರ್ಯ ಲಕ್ಷ್ಮೀಶ್ ಶಿರಹಟ್ಟಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ನಡೆಸುವ ಅವಕಾಶ ಸಿಕ್ಕಿದ್ದು ಸಂತಸವಾಗಿದೆ ಎಂದರು.
ಬಿಇಒ ಜಿ.ರಂಗನಾಥಸ್ವಾಮಿ, ಸಿ.ಬಿ.ಶಶಿಕಾಂತ್, ಸಮನ್ವಯಾಧಿಕಾರಿ ಪಿ.ಲೋಕೇಶಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಪುಷ್ಪಲತಾ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

